ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರುಮೂಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮ ಖಂಡಿಸಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಮಂಗಳವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಪಟ್ಟಣದ ಕೊಲ್ಲಿ ಸರ್ಕಲ್‌ನ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ಸರ್ವಿಸ್ ರಸ್ತೆಯಲ್ಲಿ ದಿಢೀರ್ ರಸ್ತೆ ತಡೆ ನಡೆಸಿ ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸಿದರು. ಶಾಸಕ ಕೆ.ಎಂ.ಉದಯ್ ನೇತೃತ್ವದಲ್ಲಿ ತಾಲೂಕು ಕಚೇರಿವರೆಗೆ ಮೆರವಣಿಗೆ ನಡೆಸಿ ರಾಜ್ಯಪಾಲರು, ಕೇಂದ್ರ ಸರ್ಕಾರ, ಪ್ರಧಾನಿ ಮೋದಿ, ಸಚಿವರಾದ ಎಚ್.ಡಿ. ಕುಮಾರಸ್ವಾಮಿ ಹಾಗೂ ಅಮಿತ್ ಶಾ ವಿರುದ್ಧ ಘೋಷಣೆ ಕೂಗಿದರು.ನಂತರ ಹೆದ್ದಾರಿ ಮೂಲಕ ಮೆರವಣಿಗೆಯಲ್ಲಿ ಶವಯಾತ್ರೆ ತಂದು ರಾಜ್ಯಪಾಲ ಧಾವರ್ ಚಂದ್ ಗೆಹ್ಲೋಟ್ ಅವರ ಭಾವಚಿತ್ರಕ್ಕೆ ಚಪ್ಪಲಿ ಸೇವೆ ಮಾಡಿ ಪ್ರತಿಕೃತಿ ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ತರುವಾಯ ತಾಲೂಕು ಕಚೇರಿ ಎದುರು ಕೆಲಕಾಲ ಧರಣಿ ನಡೆಸಿದರು.
ಮೂಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ವಿರುದ್ಧ ಘೋಷಣೆ ಕೂಗಿ, ಕೇಂದ್ರದ ಏಜೆಂಟರಾಗಿರು ರಾಜ್ಯಪಾಲರು ಕೂಡಲೇ ಅನುಮತಿ ಹಿಂಪಡೆವಂತೆ ಆಗ್ರಪಡಿಸಿದರು.ನಂತರ ಶಾಸಕ ಉದಯ್ ಹಾಗೂ ಕಾಂಗ್ರೆಸ್ ಮುಖಂಡರು, ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು. ಬಹುಮತದಿಂದ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಮತ್ತು ಜೆಡಿಎಸ್ ಕುತಂತ್ರ ನಡೆಸುತ್ತಿದೆ. ರಾಜ್ಯಪಾಲರ ಕಚೇರಿಯನ್ನು ದುರುಪಯೋಗ ಪಡಿಸಿಕೊಂಡು ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸಿಎಂ ಸಿದ್ದರಾಮಯ್ಯ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಉತ್ತಮ ಆಡಳಿತ ನಡೆಸುತ್ತಿದ್ದಾರೆ. 2ನೇ ಬಾರಿಗೆ ಸಿಎಂ ಆಗಿ 5 ಗ್ಯಾರಂಟಿ ಯೋಜನೆ ಜಾರಿಗೆ ತಂದು ಬಡವರು ದೀನದಲಿತರು ರಕ್ತಸಂಖ್ಯಾತರಿಗೆ ಹೆಚ್ಚಿನ ಅನುಕೂಲ ಮಾಡಿಕೊಟ್ಟಿದ್ದಾರೆ. ವಿಪಕ್ಷ ಕಾಲದಲ್ಲಿ ಆಗಿರುವ ಹಗರಣಗಳನ್ನು ಸಿದ್ದರಾಮಯ್ಯ ಅವರ ತಲೆಗೆ ಕಟ್ಟಿ ಅಧಿಕಾರದಿಂದ ಕೆಳಗಿಳಿಸಲು ಹುನ್ನಾರ ನಡೆಸುತ್ತಿವೆ ಟೀಕಾ ಪ್ರಹಾರ ನಡೆಸಿದರು.ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಎಂ.ಎಸ್.ಚಿದಂಬರ್, ಯುವ ಘಟಕದ ಜಿಲ್ಲಾಧ್ಯಕ್ಷ ವಿಜಯಕುಮಾರ್, ಜಿಲ್ಲಾ ಉಪಾಧ್ಯಕ್ಷ ಅಜ್ಜಹಳ್ಳಿ ರಾಮಕೃಷ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕದಲೂರು ರಾಮಕೃಷ್ಣ, ಶಿವಲಿಂಗೇಗೌಡ, ಜಿಪಂ ಮಾಜಿ ಅಧ್ಯಕ್ಷ ಬಸವರಾಜು, ಮಾಜಿ ಸದಸ್ಯರಾದ ಸುರೇಶ್ ಕಂಠಿ, ಅಣ್ಣೂರು ರಾಜೀವ್, ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ದಾಸೇಗೌಡ, ತಾಪಂ ಮಾಜಿ ಸದಸ್ಯ ಚೆಲುವರಾಜು, ಕುರುಬರ ಸಂಘದ ಅಧ್ಯಕ್ಷ ಎಂ.ಮರಿಹೆಗಡೆ, ಪ್ರಧಾನ ಕಾರ್ಯದರ್ಶಿ ಕೆ. ನಾಗರಾಜು, ಮುಖಂಡರಾದ ಲಿಂಗನದೊಡ್ಡಿ ರಾಮಕೃಷ್ಣ, ಪಣೇ ದೊಡ್ಡಿ ಸುಧಾಕರ ಸೇರಿದಂತೆ ಕಾಂಗ್ರೆಸ್ ಜನಪ್ರತಿನಿಧಿಗಳು ಹಾಗೂ ವಿವಿಧ ಘಟಕಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.