ನಮ್ಮ ಎದುರು ಬ್ರಿಟಿಷರೇ ಇರಲಿ, ನರೇಂದ್ರ ಮೋದಿಯೇ ಇರಲಿ. ಅವ್ಯವಸ್ಥೆಯ ವಿರುದ್ಧ ಕಾಂಗ್ರೆಸ್ ಹೋರಾಟ ನಿರಂತರವಾಗಿ ಇರುತ್ತದೆ ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ರಿಜ್ವಾನ್ ಹೇಳಿದ್ದಾರೆ.

- ಜನರ ಸೇವೆಯೇ ನಮ್ಮ ಗುರಿ: ಆಹಾರ ಸಚಿವ । ಕಾಂಗ್ರೆಸ್ ನೂತನ ಜಿಲ್ಲಾಧ್ಯಕ್ಷ ಇಬ್ರಾಹಿಂ ಖಲೀಲುಲ್ಲಾ ಪದಗ್ರಹಣ ಸಮಾರಂಭ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ನಮ್ಮ ಎದುರು ಬ್ರಿಟಿಷರೇ ಇರಲಿ, ನರೇಂದ್ರ ಮೋದಿಯೇ ಇರಲಿ. ಅವ್ಯವಸ್ಥೆಯ ವಿರುದ್ಧ ಕಾಂಗ್ರೆಸ್ ಹೋರಾಟ ನಿರಂತರವಾಗಿ ಇರುತ್ತದೆ ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ರಿಜ್ವಾನ್ ಹೇಳಿದ್ದಾರೆ.

ನಗರದ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ಬುಧವಾರ ಕಾಂಗ್ರೆಸ್ ಪಕ್ಷದ ನೂತನ ಜಿಲ್ಲಾಧ್ಯಕ್ಷ ಇಬ್ರಾಹಿಂ ಖಲೀಲುಲ್ಲಾ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. 62 ವರ್ಷಗಳ ಕಾಲ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಪಕ್ಷ ಕಾಂಗ್ರೆಸ್‌. ಇಂದಿರಾ ಗಾಂಧಿ, ರಾಜೀವ್ ಗಾಂಧಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರೆ ಎಂದರು.

ಕೇವಲ ಅಧಿಕಾರಕ್ಕಾಗಿ ಮಾತ್ರ ನಾವು ರಾಜಕಾರಣ ಮಾಡುವವರಲ್ಲ. ನಮ್ಮ ಎದುರು ಯಾರೇ ಇದ್ದರೂ ಅವ್ಯವಸ್ಥೆಯ ವಿರುದ್ಧ ಹೋರಾಡುತ್ತೇವೆ. ಕಾಂಗ್ರೆಸ್ ಮತ್ತೊಮ್ಮೆ ಸರ್ಕಾರ ರಚನೆ ಮಾಡುವುದಕ್ಕಾಗಲ್ಲ ಅಂತಾ ಮಾತನಾಡುವವರು ಅವ್ಯವಸ್ಥೆ ವಿರುದ್ಧವೇ ಕಾಂಗ್ರೆಸ್ಸಿಗರು ಹೋರಾಟ ನಡೆಸಿಕೊಂಡು ಬಂದಿದ್ದೇವೆ ಎಂಬುದನ್ನೇ ಮರೆತಿದ್ದಾರೆ. ಕಾಂಗ್ರೆಸ್ ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದ, ಯುವ ಕಾಂಗ್ರೆಸ್ ಮೂಲಕ ಪಕ್ಷ ಸಂಘಟನೆ ಮಾಡಿದ್ದ ವಿದ್ಯಾವಂತ ಯುವಕನಿಗೆ ಜಿಲ್ಲಾಧ್ಯಕ್ಷ ಸ್ಥಾನ ನೀಡಿ, ಪ್ರೋತ್ಸಾಹಿಸಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆ ವೇಳೆ ನಾನು ಇಲ್ಲಿಯೇ ಇದ್ದೆ. ನಾನು ಇಲ್ಲಿಗೆ ಬಂದಾಗ ಯಾರೆಲ್ಲಾ, ಏನೇನೋ ಹೇಳಿದ್ದರು. ಆದರೆ, ಇಲ್ಲಿಗೆ ಬಂದಾಗ ಇಲ್ಲಿ ಪಕ್ಷ ಸಂಘಟನೆ, ನಮ್ಮೆಲ್ಲಾ ಮುಖಂಡರು, ಪದಾದಿಕಾರಿಗಳು, ಕಾರ್ಯಕರ್ತರು, ಜನರ ಒಡನಾಟ ಅರಿವಾಯಿತು. ನೀವು ಯಾವಾಗ ಹೇಳಿದರೂ ನಾನು ಇಲ್ಲಿಗೆ ಬರುತ್ತೇನೆ ಎಂದು ತಿಳಿಸಿದರು.

ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಕೆ.ಎಸ್.ಬಸವಂತಪ್ಪ ಮಾತನಾಡಿ, ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಭಾರತ್ ಜೋಡೋ ಪಾದಯಾತ್ರೆ ನಡೆಸಿದ ಏಕೈಕ ವ್ಯಕ್ತಿ, ನಮ್ಮೆಲ್ಲರ ಹೆಮ್ಮೆಯ ನಾಯಕ ರಾಹುಲ್ ಗಾಂಧಿ. 2029ಕ್ಕೆ ರಾಹುಲ್ ಗಾಂಧಿ ಅವರನ್ನು ದೇಶದ ಪ್ರಧಾನಿಯಾಗಿ ಮಾಡುವುದೇ ನಮ್ಮೆಲ್ಲರ ಗುರಿಯಾಗಬೇಕು. ದೇಶದಲ್ಲಿ ಬದಲಾವಣೆ ತರುವುದು ರಾಹುಲ್ ಗಾಂಧಿ ಕನಸು, ಗುರಿಯಾಗಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಸನ್ನು ಮತ್ತೆ ಅಧಿಕಾರಕ್ಕೆ ತರಲು ಪಣ ತೊಡೋಣ ಎಂದರು.

ಇಂದಿರಾ ಗಾಂಧಿ ಕಾಲದಿಂದಲೂ ಬಡವರ ಪರವಿರುವ ಪಕ್ಷ ಕಾಂಗ್ರೆಸ್‌. ದೇಶದ ಅಭಿವೃದ್ಧಿ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ಜಿಲ್ಲೆಯಲ್ಲಿ ಪಕ್ಷದ ಬಲವರ್ಧನೆ ಮಾಡಿ ಮುಂಬರುವ ಎಲ್ಲ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರಕ್ಕೆ ತರಲು ಎಲ್ಲರೂ ಶ್ರಮಿಸಬೇಕು. ಸಂಘಟನಾ ಬಲವೇ ಗೆಲುವಿನ ಮಂತ್ರವಾಗಿದೆ. ಜಿಲ್ಲಾದ್ಯಂತ ಪಕ್ಷ ಬಲಪಡಿಸಲು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಹೇಳಿದರು.

ಮಾಜಿ ಸಿಎಂ ಸಿದ್ದರಾಮಯ್ಯ, ಸಿಎಂ ಡಿ.ಕೆ.ಶಿವಕುಮಾರ ನೇತೃತ್ವದ ರಾಜ್ಯ ಸರ್ಕಾರವು ಜನಪರ ಕಾರ್ಯಕ್ರಮ, ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದೆ. ಈ ಜನಪರ ಸಾಧನೆಗಳನ್ನು ಮತದಾರರಿಗೆ ತಲುಪಿಸಬೇಕು. ಚುನಾವಣೆಯಲ್ಲಿ ಟಿಕೆಟ್ ಪಡೆಯೋದು ಮುಖ್ಯವಲ್ಲ, ಪಕ್ಷದ ಗೆಲುವಿಗೆ ಎಲ್ಲರೂ ಒಟ್ಟಾಗಿ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು. ನೀವು ಕೇವಲ ಅಭ್ಯರ್ಥಿ ಆಗಬೇಕೆಂದು ಹಂಬಲಿಸುವುದಲ್ಲ. ನಿಮ್ಮ ಕ್ಷೇತ್ರದ ಪ್ರತಿಯೊಬ್ಬ ಮತದಾರರ ನಡುವೆ ಇದ್ದು, ಅವರ ಹೃದಯ ಗೆದ್ದಾಗ ಮಾತ್ರ ಚುನಾವಣೆಯಲ್ಲಿ ಗೆಲವು ಸಾಧ್ಯ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಶಾಸಕರಾದ ಡಿ.ಜಿ. ಶಾಂತನಗೌಡ, ಬಸವರಾಜ ವಿ. ಶಿವಗಂಗಾ, ಸಮರ್ಥ ಎಂ. ಶಾಮನೂರು, ಯುವ ಕಾಂಗ್ರೆಸ್ಸಿನ ಮಂಜುನಾಥ ಗೌಡ, ಬಯಲುಸೀಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಬಿ.ಮಂಜಪ್ಪ, ನೂತನ ಜಿಲ್ಲಾ ಅಧ್ಯಕ್ಷ ಇಬ್ರಾಹಿಂ ಖಲೀಲುಲ್ಲಾ, ಮಾಜಿ ಶಾಸಕ ಎಸ್.ರಾಮಪ್ಪ, ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ, ಕೆಪಿಸಿಸಿ ವಕ್ತಾರ ಡಿ.ಬಸವರಾಜ, ಕೆ.ಜಿ.ಶಿವಕುಮಾರ, ಕೆ.ಚಮನ್‌ ಸಾಬ್, ಮುದೇಗೌಡ್ರ ಗಿರೀಶ, ಎಸ್.ಮಲ್ಲಿಕಾರ್ಜುನ, ವಕೀಲ ಪ್ರಕಾಶ ಪಾಟೀಲ, ಎಚ್.ಜೆ. ಮೈನುದ್ದೀನ್, ಹದಡಿ ಜಿ.ಸಿ.ನಿಂಗಪ್ಪ, ಕೆ.ಪಿ.ಪಾಲಯ್ಯ, ಹರಿಹರ ದ ಬಸವರಾಜ, ಡೋಲಿ ಚಂದ್ರು, ಶ್ರೀಕಾಂತ ಬಗರೆ, ಬಂಜಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಯದೇವ ನಾಯ್ಕ, ದೂಡಾ ಮಾಜಿ ಅಧ್ಯಕ್ಷ ಅಯೂಬ್ ಪೈಲ್ವಾನ್, ಎಸ್.ಮಲ್ಲಿಕಾರ್ಜುನ, ಡಿಸಿಸಿ ಬ್ಯಾಂಕ್ ನೂತನ ಅಧ್ಯಕ್ಷ ಷಣ್ಮುಖಪ್ಪ ಇತರರು ಇದ್ದರು.

- - -

-11ಕೆಡಿವಿಜಿ6: ದಾವಣಗೆರೆಯಲ್ಲಿ ಬುಧವಾರ ಕಾಂಗ್ರೆಸ್ ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭವನ್ನು ಸಚಿವರಾದ ಎಸ್‌.ಎಸ್‌. ಮಲ್ಲಿಕಾರ್ಜುನ, ರಿಜ್ವಾನ್ ಅರ್ಷದ್, ಕೆ.ಎಸ್.ಬಸವಂತಪ್ಪ ಉದ್ಘಾಟಿಸಿದರು. -11ಕೆಡಿವಿಜಿ7: ದಾವಣಗೆರೆಯಲ್ಲಿ ಬುಧವಾರ ಕಾಂಗ್ರೆಸ್ ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಸಚಿವರಾದ ಎಸ್‌.ಎಸ್‌. ಮಲ್ಲಿಕಾರ್ಜುನ, ರಿಜ್ವಾನ್ ಅರ್ಷದ್, ಕೆ.ಎಸ್.ಬಸವಂತಪ್ಪ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಶಾಸಕರಾದ ಡಿ.ಜಿ.ಶಾಂತನಗೌಡ, ಬಸವರಾಜ ವಿ.ಶಿವಗಂಗಾ, ಸಮರ್ಥ ಎಂ. ಶಾಮನೂರು ಇತರ ಮುಖಂಡರು ಪಾಲ್ಗೊಂಡರು.