Congress's padayatra is an exercise in self-serving politics: Renukacharya
- ರಾಜ್ಯದ ಖಜಾನೆ ಖಾಲಿಯಾಗಿದ್ದು, ಜನರ ಗಮನ ಬೇರೆಡೆ ಸೆಳೆಯಲು ಭಾರತ್ ಜೋಡೋ ಪಾದಯಾತ್ರೆ: ಟೀಕೆ
- - -ಕನ್ನಡಪ್ರಭ ವಾರ್ತೆ ಹೊನ್ನಾಳಿ
ರಾಜ್ಯದಲ್ಲಿ ಭೀಕರ ಬರಗಾಲ, ಜನರ ಜ್ವಲಂತ ಸಮಸ್ಯೆಗಳ ಬಗ್ಗೆ ಚಿಂತಿಸದೇ, ಕಾಂಗ್ರೆಸ್ ಸ್ವಾರ್ಥ ರಾಜಕಾರಣದ ಪಾದಯಾತ್ರೆ ನಡೆಸಲು ಮುಂದಾಗಿರುವುದು ಅದರಲ್ಲೂ ಶಿಕಾರಿಪುರದಿಂದ ಪಾದಯಾತ್ರೆ ಕೈಗೊಂಡಿರುವುದು ಖಂಡನೀಯ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.ಹೊನ್ನಾಳಿಯ ತಮ್ಮ ನಿವಾಸದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ರಾಜ್ಯಾಧ್ಯಕ್ಷ ಬಿ.ಕೆ. ಹರಿಪ್ರಸಾದ್ ರಾಜ್ಯದಲ್ಲಿ 2023ರಲ್ಲಿ ಕಾಂಗ್ರೆಸ್ 84 ಕ್ಷೇತ್ರದಲ್ಲಿ ಸೋತಿದೆ, ಅಲ್ಲಿ ಪಕ್ಷ ಭಾರತ್ ಜೋಡೋ 2ನೇ ಹಂತದಲ್ಲಿ ಪಾದಯಾತ್ರೆ ನಡೆಸಲಿದೆ. ಆದರಲ್ಲೂ ಕಾಂಗ್ರೆಸ್ ಸೋತಿರುವ, ಬಿಜೆಪಿಯ ಭದ್ರಕೋಟೆಯೇ ಆಗಿರುವ ಶಿಕಾರಿಪುರ ಕ್ಷೇತ್ರದಿಂದ ಪಾದಯಾತ್ರೆ ಆರಂಭಿಸಲಾಗುವುದು ಎಂದು ಹೇಳಿಕೆ ನೀಡಿರುವುದು ಡಿ.ಕೆ. ಮತ್ತು ಬಿ.ಕೆ. ಅವರ ಸ್ವಾರ್ಥ ರಾಜಕಾರಣಕ್ಕೆ ಸಾಕ್ಷಿ ಎಂದು ಟೀಕಿಸಿದರು.
ರಾಜ್ಯದಲ್ಲಿ ಪ್ರಸ್ತುತ ಭೀಕರ ಬರಗಾಲ ಪರಿಸ್ಥಿತಿ ಇದ್ದು, ಪ್ರಸ್ತುತ ರಾಜ್ಯದ ಖಜಾನೆ ಖಾಲಿಯಾಗಿ ಸರ್ಕಾರ ದಿವಾಳಿಯಾಗಿದೆ. ಇದನ್ನು ವಿಷಯಾಂತರ ಮಾಡಿ ಜನರ ಗಮನ ಬೇರೆಡೆ ಸೆಳೆಯಲು ಇದೀಗ ಕಾಂಗ್ರೆಸ್ ಭಾರತ್ ಜೋಡೋ ಪಾದಯಾತ್ರೆ ನಡೆಸಲು ಹೊರಟಿದೆ. ಸರ್ಕಾರದಲ್ಲಿ ಸರ್ಕಾರಿ ನೌಕರರಿಗೆ ಹಾಗೂ ಕೆ.ಎಸ್.ಆರ್.ಟಿ.ಸಿ. ನೌಕರರಿಗೆ ಸಂಬಳ ಕೊಡಲು ಹಣವಿಲ್ಲ, ಸರ್ಕಾರ ₹8 ಲಕ್ಷ 4 ಸಾವಿರ ಕೋಟಿ ಸಾಲ ಮಾಡಿದೆ ಎಂದು ಆರೋಪಿಸಿದರು.ಈ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು 10 ದಿನಗಳ ಕಾಲ 3 ಜಿಲ್ಲೆ, 9 ತಾಲೂಕುಗಳು, 170 ಕಿ.ಮೀ. ಪಾದಯಾತ್ರೆ ನಡೆಸಿದ್ದರು. ಅವರು ಪಾದಯಾತ್ರೆ ನಡೆಸಿದ್ದು ಭೀಕರ ಬರಗಾಲವಿದೆ. ಇದಕ್ಕಾಗಿ ಸರ್ಕಾರ ಸಾಕಷ್ಟು ಅನುದಾನ ಬಿಡುಗಡೆ ಮಾಡಬೇಕು ಮತ್ತು 200 ತಾಲೂಕುಗಳನ್ನು ಬರಗಾಲಪೀಡಿತ ತಾಲೂಕುಗಳೆಂದು ಘೋಷಣೆ ಮಾಡಬೇಕು ಎಂದು ಆಗ್ರಹಿಸಿ ಪಾದಯಾತ್ರೆ ನಡೆಸಿದ್ದರು ಸ್ಪಷ್ಟನೆ ನೀಡಿದರು.
ರೈತರಿಗೆ ಅವಮಾನ:ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರೈತರಿಗೆ ಕೇವಲ ₹2500 ನೀಡುವುದಾಗಿ ಹೇಳುವ ಮೂಲಕ ರಾಜ್ಯದ ಇಡೀ ರೈತ ಸಮುದಾಯಕ್ಕೆ ಅವಮಾನ ಮಾಡಿದಂತಾಗಿದೆ. ಬರಗಾಲ ಎಂದು ಕೇವಲ ಪಟ್ಟಿ ಘೋಷಣೆ ಮಾಡಿದರೇ ಸಾಲದು, ಅದಕ್ಕೆ ತಕ್ಕಂತೆ ಪರಿಹಾರೋಪಾಯಗಳನ್ನು ಕೈಗೊಳ್ಳಬೇಕು. ಆದರೆ, ಸರ್ಕಾರ ಈ ಬಗ್ಗೆ ಏನೂ ಮಾಡದೇ ಜನರ ಗಮನ ಬೇರೆಡೆ ಸೆಳೆಯಲು ಇದೀಗ ಪಾದಯಾತ್ರೆ ಮಾಡಲು ಹೊರಟಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮಾಜಿ ತಾಲೂಕು ಅಧ್ಯಕ್ಷ ಜೆ.ಕೆ.ಸುರೇಶ್ ಮುಖಂಡ ಎಸ್.ಎಸ್. ಬೀರಪ್ಪ, ನೆಲಹೊನ್ನೆ ಮಂಜುನಾಥ, ಸುನಿಲ್, ರಾಘು, ಮಂಜು ಕೋನಾಯ್ಕನಹಳ್ಳಿ ಸೇರಿದಂತೆ ಅನೇಕ ಮುಖಂಡರು ಇದ್ದರು.- - -
(ಕೋಟ್)ಸರ್ಕಾರ ಅಧಿಕಾರಕ್ಕೆ ಬಂದ ನಂತರ ಏನೇನು ಅಭಿವೃದ್ಧಿ ಕಾರ್ಯ ನಡೆಸಿದೆ, ಎಷ್ಟು ಕೋಟಿ ಹಣ ಬಿಡುಗಡೆ ಮಾಡಿದೆ ಎನ್ನುವ ಬಗ್ಗೆ ಶ್ವೇತಪತ್ರ ಹೊರಡಿಸಲಿ. ರಾಜ್ಯ ಸರ್ಕಾರ ಇನ್ನಿಲ್ಲದ ಹಲವಾರು ಹಗರಣಗಳಲ್ಲಿ ಮುಳುಗಿಹೋಗಿ ಜನಸಾಮಾನ್ಯರ, ಬಡವರ ಹಿತವನ್ನೇ ಮರೆತಿದೆ.
- ಎಂ.ಪಿ.ರೇಣುಕಾಚಾರ್ಯ, ಮಾಜಿ ಸಚಿವ.- - -
-29ಎಚ್.ಎಲ್.ಐ2:ಹೊನ್ನಾಳಿಯಲ್ಲಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಂಗಳವಾರ ರಾಜ್ಯ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದರು.