ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ರಾಷ್ಟ್ರೀಯ ಮಂದಿರವಾಗಿರುವ ರಾಮ ಮಂದಿರ ಉದ್ಘಾಟನೆ ಆಹ್ವಾನ ತಿರಸ್ಕರಿಸುವ ಮೂಲಕ ಭಾರತ ದೇಶದಲ್ಲಿ ಇಲ್ಲಿನವರೆಗೆ ಜಾತ್ಯತೀತತೆ ಮುಖವಾಡ ಹಾಕಿದ್ದ ಕಾಂಗ್ರೆಸ್ ಬಣ್ಣ ಬಯಲಾಗಿದೆ ಎಂದು ಮಾಜಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಆರೋಪಿಸಿದರು.ಇಲ್ಲಿವರೆಗೂ ಕಾಂಗ್ರೆಸ್ಸಿಗರು ತಾವು ಜಾತ್ಯತೀತರು. ಜಾತ್ಯತೀತರು ಎನ್ನುತ್ತಿದ್ದರು. ಶ್ರೀರಾಮ ಮಂದಿರದ ಆಹ್ವಾನಪತ್ರ ತಿರಸ್ಕರಿಸುವ ಮೂಲಕ ಅದು ಮತೀಯವಾದ ರಾಜಕೀಯ ಪಕ್ಷ ಎಂಬುದಕ್ಕೆ ಸ್ಪಷ್ಟ ನಿದರ್ಶನ ಲಭಿಸಿದೆ ಎಂದು ತೇಲ್ಕೂರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಶ್ರೀರಾಮಮಂದಿರವನ್ನು ಸುಪ್ರೀಂ ಕೋರ್ಟಿನ ತೀರ್ಪಿನಡಿ ನಿರ್ಮಿಸಲಾಗಿದೆ. ಭಕ್ತಾದಿಗಳೇ ದೇಣಿಗೆ ಹಾಕಿ ನಿರ್ಮಾಣ ಕಾರ್ಯ ನಡೆದಿದೆ. ಇದೊಂದು ಅದ್ಭುತ ದೇವಸ್ಥಾನ. ಈ ಐತಿಹಾಸಿಕ ವಿಚಾರದಲ್ಲಿ ಶ್ರೀರಾಮ ಮಂದಿರಕ್ಕೆ ಬಂದು ಭಾಗವಹಿಸುವುದನ್ನು ಬಿಟ್ಟು ಅದನ್ನು ಬಹಿಷ್ಕರಿಸುವುದಾಗಿ ಕಾಂಗ್ರೆಸ್ ಹೇಳಿದೆ. ಕಾಂಗ್ರೆಸ್ಸಿನವರು ರಾಮನೇ ಕಾಲ್ಪನಿಕ ಎಂದು ಕೋರ್ಟಿಗೆ ಅಫಿಡವಿಟ್ ಸಲ್ಲಿಸಿದ್ದರು. ನಂತರ ರಾಮಮಂದಿರದ ಶಿಲಾನ್ಯಾಸದ ಸಂದರ್ಭದಲ್ಲಿ ಕಪ್ಪು ಬಟ್ಟೆ ಧರಿಸಿ ಬಂದರು. ಅವೆಲ್ಲವನ್ನೂ ಮರೆತು ಹಿಂದೂಗಳು ಅವರ ಬಗ್ಗೆ ಸಹಾನುಭೂತಿಯಿಂದ ಇದ್ದರೆ, ಇವತ್ತು ಶ್ರೀ ರಾಮ ಮಂದಿರದ ಉದ್ಘಾಟನಾ ಸಮಾರಂಭ ಬಹಿಷ್ಕರಿಸಿದ್ದರಿಂದ ಕಾಂಗ್ರೆಸ್ ಪಕ್ಷ ಒಂದು ಮತಕ್ಕೆ ಸೀಮಿತ ಎಂದು ಜಗಜ್ಜಾಹೀರಾಗಿದೆ ಎಂದು ತೇಲ್ಕೂರ್ ಕಾಂಗ್ರೆಸ್ ನಿಲುವನ್ನು ಟೀಕಿಸಿದ್ದಾರೆ.
ಕಾಂಗ್ರೆಸ್ ನಿಲುವು ಅತ್ಯಂತ ಖಂಡನೀಯ. ಇದರ ಫಲಿತಾಂಶವನ್ನು ಮತ್ತು ಫಲವನ್ನು ಕಾಂಗ್ರೆಸ್ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಉಣ್ಣಲಿದೆ ಎಂದು ತೇಲ್ಕೂರ್ ವ್ಯಕ್ತಪಡಿಸಿದರು.