ಕಾಂಗ್ರೆಸ್‌ ಅಧಿವೇಶನ, ಗಾಂಧಿ ಸ್ಮರಿಸುತ್ತಲೇ ವಾಗ್ವಾದ

| Published : Dec 18 2024, 12:47 AM IST

ಕಾಂಗ್ರೆಸ್‌ ಅಧಿವೇಶನ, ಗಾಂಧಿ ಸ್ಮರಿಸುತ್ತಲೇ ವಾಗ್ವಾದ
Share this Article
  • FB
  • TW
  • Linkdin
  • Email

ಸಾರಾಂಶ

ಗಾಂಧೀಜಿಯವರು ನಡೆಸಿದ ಸತ್ಯಾಗ್ರಹ, ಹೋರಾಟ, ಶಾಂತಿ, ಅಹಿಂಸೆ, ಸತ್ಯ, ದೇಶಪ್ರೇಮ, ರಾಮರಾಜ್ಯದ ತತ್ವ, ಆದರ್ಶ, ಗುರಿ, ಗಾಂಧೀಜಿ ಅಧ್ಯಕ್ಷತೆಯಲ್ಲಿ ನಡೆದ ಬೆಳಗಾವಿ ಅಧಿವೇಶನದ ಗುರಿ, ಉದ್ದೇಶ, ಯಶಸ್ಸಿನ ವಿಚಾರಗಳನ್ನು ವಿಧಾನ ಪರಿಷತ್ತಿನ ಸದಸ್ಯರು ಪಕ್ಷಾತೀತವಾಗಿ ಸ್ಮರಿಸಿಕೊಂಡರು.

ಕನ್ನಡಪ್ರಭ ವಾರ್ತೆ ಸುವರ್ಣ ವಿಧಾನ ಪರಿಷತ್

ಗಾಂಧೀಜಿಯವರು ನಡೆಸಿದ ಸತ್ಯಾಗ್ರಹ, ಹೋರಾಟ, ಶಾಂತಿ, ಅಹಿಂಸೆ, ಸತ್ಯ, ದೇಶಪ್ರೇಮ, ರಾಮರಾಜ್ಯದ ತತ್ವ, ಆದರ್ಶ, ಗುರಿ, ಗಾಂಧೀಜಿ ಅಧ್ಯಕ್ಷತೆಯಲ್ಲಿ ನಡೆದ ಬೆಳಗಾವಿ ಅಧಿವೇಶನದ ಗುರಿ, ಉದ್ದೇಶ, ಯಶಸ್ಸಿನ ವಿಚಾರಗಳನ್ನು ವಿಧಾನ ಪರಿಷತ್ತಿನ ಸದಸ್ಯರು ಪಕ್ಷಾತೀತವಾಗಿ ಸ್ಮರಿಸಿಕೊಂಡರು.

ಮಹಾತ್ಮ ಗಾಂಧೀಜಿ ಅವರ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ನಡೆದಿದ್ದ ಕಾಂಗ್ರೆಸ್‌ ಅಧಿವೇಶನಕ್ಕೆ ನೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ನಡೆದ ಸುದೀರ್ಘ ಚರ್ಚೆಯಲ್ಲಿ ಗಾಂಧೀಜಿ ಅವರ ನಿಲುವು, ಈಗಿನ ಕಾಂಗ್ರೆಸ್ ಕುರಿತು ಪರೋಕ್ಷವಾಗಿ ಬಿಜೆಪಿ ಸದಸ್ಯರ ಆಡಿದ ಮಾತು ಕೆಲ ಕಾಲ ವಾಗ್ವಾದಕ್ಕೂ ಕಾರಣವಾಯಿತು.ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ‘ಗಾಂಧೀಜಿ ಅವರ ವಿರುದ್ಧ ಬಾಬಾ ಸಾಹೇಬ್‌ ಅಂಬೇಡ್ಕರ್‌ ಹೇಳಿದ್ದರೆನ್ನಲಾದ ಮಾತುಗಳ ಉಲ್ಲೇಖ’, ಸಿ.ಟಿ.ರವಿ ಅವರು ಪ್ರಸ್ತಾಪಿಸಿದ ‘ಸ್ವಾತಂತ್ರ್ಯ ಚಳವಳಿಯ ವೇದಿಕೆಯಾಗಿ ಹುಟ್ಟಿಕೊಂಡ ಕಾಂಗ್ರೆಸ್‌ ಪಕ್ಷವನ್ನು ಸ್ವಾತಂತ್ರ್ಯಾನಂತರ ವಿಸರ್ಜಿಸುವಂತೆ ಗಾಂಧೀಜಿ ಅವರೇ ಹೇಳಿದರೂ ಕೇಳದ ಅವರ ಅನುಯಾಯಿಗಳು ರಾಜಕೀಯ ಪಕ್ಷವಾಗಿ ಬಳಸಿಕೊಂಡರೆಂಬ’ ಟೀಕೆ, ಎಸ್‌.ರವಿಕುಮಾರ್‌ ಮಾತನಾಡುವಾಗ, ‘ಬೇರೆ ಬೇರೆ ಆಯಾಮಗಳ ದೃಷ್ಟಿಕೋನದಿಂದ ನಡೆದ ಬೆಳಗಾವಿಯ ಕಾಂಗ್ರೆಸ್‌ ಅಧಿವೇಶನ ಹಿಂದೂ ಮುಸ್ಲಿಂ ಭಾವೈಕ್ಯತೆ ಮೂಡಿಸುವಲ್ಲಿ ಯಶಸ್ವಿಯಾಯಿತು. ಆದರೆ, ನಂತರ ಕಾಂಗ್ರೆಸ್‌ ಪಕ್ಷ ಈ ದೇಶವನ್ನು ಎರಡು ಭಾಗವಾಗಿ ಮಾಡುವಲ್ಲಿ ಯಶಸ್ವಿಯಾಯಿತು’ ಎಂದು ಆಡಿದ ಮಾತುಗಳು ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ವಾಗ್ವಾದಕ್ಕೆ ಕಾರಣವಾಯಿತು.ಸಭಾಪತಿ ಬಸವರಾಜ ಹೊರಟ್ಟಿ ವಿಶೇಷ ಚರ್ಚೆಗೆ ಅವಕಾಶ ನೀಡಿದರು. ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ‘ಗಾಂಧೀಜಿ ಅವರನ್ನು ನಾನು ಮಹಾತ್ಮ ಎಂದು ಕರೆಯುವುದಿಲ್ಲ. ಗಾಂಧೀಜಿ ಅವರಿಗೆ ಎರಡು ಮುಖಗಳಿದ್ದವು. ಅವರು ದಲಿತರಿಗೆ ಪ್ರತ್ಯೇಕ ಮತಕ್ಷೇತ್ರ ನೀಡಲು ಒಪ್ಪಲಿಲ್ಲ. ಇದರಿಂದ ಹಿಂದೂ ಧರ್ಮದಲ್ಲಿ ಒಡಕಾಗುತ್ತದೆ ಎಂದಿದ್ದರು’ ಎಂದು ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಮಾತುಗಳನ್ನು ಉಲ್ಲೇಖಿಸಿದರು.ಇದಕ್ಕೆ, ಆಕ್ಷೇಪಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ, ಅಂಬೇಡ್ಕರ್‌ ಅವರು ಆರೆಸ್ಸೆಸ್‌, ಬಿಜೆಪಿ ಕುರಿತೂ ತಮ್ಮ ಅಭಿಪ್ರಾಯಗಳನ್ನು ಹೇಳಿದ್ದಾರೆ. ಅದನ್ನೂ ಚರ್ಚೆಯಲ್ಲಿ ಹೇಳಿ ಎಂದರು. ಈ ವೇಳೆ, ಸಭಾಪತಿ ಸ್ಥಾನದಲ್ಲಿದ್ದ ಪ್ರಾಣೇಶ್‌ ಅವರು, ಗಾಂಧೀಜಿ ದೇಶದ ಆಸ್ತಿ. ಅವರ ಬಗ್ಗೆ ಗೊಂದಲಕಾರಿ ಹೇಳಿಕೆಗಳು ಬೇಡ ಎಂದು ಸಲಹೆ ನೀಡಿದರು.ಮಾತು ಮುಂದುವರಿಸಿದ ಛಲವಾದಿ ನಾರಾಯಣಸ್ವಾಮಿ, ಸ್ವಾತಂತ್ರ್ಯ ಹೋರಾಟದ ವೇದಿಕೆಯಾಗಿ ಹುಟ್ಟಿಕೊಂಡ ಕಾಂಗ್ರೆಸ್‌ ಪಕ್ಷವನ್ನು ಸ್ವಾತಂತ್ರ್ಯಾನಂತರ ವಿಸರ್ಜಿಸಿ ಬೇರೆ ಪಕ್ಷ ಕಟ್ಟಿಕೊಂಡು ತಮ್ಮ ರಾಜಕೀಯ ಮುಂದುವರೆಸಲು ಹೇಳಿದರೂ ಗಾಂಧೀಜಿ ಅವರ ಅನುಯಾಯಿಗಳು ಅದನ್ನು ಪಾಲಿಸಲಿಲ್ಲ. ಅಂದೇ ಗಾಂಧೀಜಿ ತತ್ವ ಸಿದ್ಧಾಂತಗಳಿಗೆ ತಿಲಾಂಜಲಿ ಇಡಲಾಯಿತು ಎಂದು ಟೀಕಿಸಿದರು. ಇದಕ್ಕೆ ಆಕ್ಷೇಪಿಸಿದ ಸಚಿವ ಪ್ರಿಯಾಂಕ್‌ ಖರ್ಗೆ, ಗಾಂಧೀಜಿ ಕಾಂಗ್ರೆಸ್‌ ವಿಸರ್ಜಿಸಲು ಹೇಳಿದ್ದು ಸತ್ಯ. ವಿಸರ್ಜನೆ ಮಾಡಿ ಲೋಕ್‌ ಸೇವಕ ಸಂಘ ನಿರ್ಮಿಸಿಕೊಳ್ಳಲು ಹೇಳಿದ್ದರು. ಆದರೆ, ಅದೇ ಗಾಂಧಿಜಿ ಅವರು ಹರಿಜನ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ದೇಶದ ಅತ್ಯಂತ ಹಳೆಯ ರಾಜಕೀಯ ಸಂಸ್ಥೆ. ಇದು ಸಾರ್ವಜನಿಕ ಸೇವೆಗಾಗಿ ಉಳಿದುಕೊಳ್ಳಲಿದೆ ಎಂದು ಹೇಳಿದ್ದಾರೆ ಎಂದು ಸಮರ್ಥಿಸಿಕೊಂಡರು.ಇದಕ್ಕೂ ಮುನ್ನ ಮಾತನಾಡಿದ ಸಿ.ಟಿ.ರವಿ, ಸ್ವಾತಂತ್ರ್ಯಾನಂತರ ಕಾಂಗ್ರೆಸ್‌ ವಿಸರ್ಜಿಸದೆ ರಾಜಕೀಯಕ್ಕೆ ಬಳಸಿಕೊಂಡಿದ್ದಲ್ಲದೆ, ಗಾಂಧೀಜಿ ಅವರ ಹೆಸರನ್ನೂ ದುರುಪಯೋಗಪಡಿಸಿಕೊಳ್ಳಲಾಯಿತು. ಗಾಂಧೀಜಿ ಅವರ ಒಳ್ಳೆಯತನದಿಂದ ದೇಶಕ್ಕೊಂದು ಶಕ್ತಿ ಕೊಟ್ಟಿತು. ಆದರೆ, ಕೆಲವು ಸಂಕಷ್ಟಗಳೂ ಆದವು. ಮಹ್ಮದ್‌ ಅಲಿ ಜಿನ್ನಾ ಪ್ರತ್ಯೇಕ ಪಾಕಿಸ್ತಾನ ಕೇಳಿದಾಗ ಗಾಂಧೀಜಿ, ನೆಹರು, ವಲ್ಲಭಬಾಯಿ ಪಟೇಲ್‌ ಏನೇ ಆದರೂ ದೇಶ ವಿಭಜನೆಗೆ ಒಪ್ಪುವುದಿಲ್ಲ ಎಂದಿದ್ದರು. ಆದರೂ, ಪಟ್ಟು ಬಿಡದ ಜಿನ್ನಾ ಡೈರೆಕ್ಟ್‌ ಆಕ್ಷನ್‌ಗೆ ಕರೆ ನೀಡಿದಾಗ ಗಾಂಧೀಜಿ ಇದನ್ನು ವಿರೋಧಿಸಿ ಅಮರಣಾಂತ ಉಪವಾಸ ಮಾಡಬಹುದಿತ್ತು. ಏಕೆ ಮಾಡಲಿಲ್ಲ ಎಂಬ ಪ್ರಶ್ನೆ ಇದೆ. ಆದರೂ, ಅವರ ಒಟ್ಟಾರೆ ದೇಶಭಕ್ತಿಗೆ ನಾನು ಮಹಾನ್‌ ಅಭಿಮಾನಿ ಎಂದರು.ಗಾಂಧೀಜಿ ಅವರ ಆಶಯ ರಾಮರಾಜ್ಯ ನಿರ್ಮಾಣ, ಗುಡಿ ಕೈಗಾರಿಕೆ, ಸ್ವದೇಶಿ ಮಂತ್ರವಾಗಿತ್ತು. ಆದರೆ, ಸ್ವಾತಂತ್ರ್ಯಾನಂತರ ಅವರ ಯಾವ ವಿಚಾರಧಾರೆಗಳೂ ಉಳಿಯಲಿಲ್ಲ. ತಾವು ಗಾಂಧಿ ವಾರಸುದಾರರು ಎಂದು ಹೇಳಿಕೊಳ್ಳುವವರು ಸ್ವಜನ ಪಕ್ಷಪಾತ, ಭ್ರಷ್ಟಾಚಾರಗಳೊಂದಿಗೆ ಅವರ ವಿಚಾರಧಾರೆಗಳಿಗೆ ತದ್ವಿರುದ್ಧವಾಗಿ ನಡೆಯುತ್ತಿದ್ದಾರೆ ಎಂದು ಆಡಳಿತ ಪಕ್ಷದವರಿಗೆ ಪರೋಕ್ಷವಾಗಿ ತಿವಿದರು. ಇದಕ್ಕೆ ಆಕ್ಷೇಪಿಸಿದ ಸಚಿವ ಶರಣಪ್ರಕಾಶ ಪಾಟೀಲ ಮತ್ತು ದಿನೇಶ್‌ ಗುಂಡೂರಾವ್‌, ಡಬಲ್ ಮಿನಿಂಗ್‌ ಡೈಲಾಗ್‌ ನಿಲ್ಲಿಸಿ. ನಿಮ್ಮದು ಆರ್‌ಎಸ್‌ಎಸ್ ಹಿಡನ್‌ ಅಜೆಂಡಾ ಎಂದು ಮುಗಿಬಿದ್ದರು. ಈ ವೇಳೆ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.ಬಿಜೆಪಿಯ ಎನ್‌.ರವಿಕುಮಾರ್‌ ಮಾತನಾಡಿ, ಗಾಂಧಿಜಿ ಅವರದ್ದು ಭಾರತ ಎಷ್ಟು ದೊಡ್ಡದೋ ಅಷ್ಟೇ ದೊಡ್ಡ ವ್ಯಕ್ತಿತ್ವ. ಬೆಳಗಾವಿಯ ಕಾಂಗ್ರೆಸ್‌ ಅಧಿವೇಶನ ಬೇರೆ ಬೇರೆ ಆಯಾಮಗಳಿಂದ ಕೂಡಿತ್ತು. ಆದರೆ, ಗಾಂಧಿ ವಿಚಾರಗಳು ಎಲ್ಲಿ ಕೈತಪ್ಪಿದವು ಎಂದು ಎಲ್ಲ ಪಕ್ಷಗಳೂ ಆತ್ಮಾವಲೋಕನ ಮಾಡಬೇಕು. ಕಾಂಗ್ರೆಸ್‌ ಅಧಿವೇಶನ ಹಿಂದೂ ಮುಸ್ಲಿಂ ಭಾವೈಕ್ಯತೆ ಮೂಡಿಸುವಲ್ಲಿ ಯಶಸ್ವಿಯಾದರೆ, ನಂತರ ಕಾಂಗ್ರೆಸ್‌ ಪಕ್ಷ ಈ ದೇಶವನ್ನು ಇಬ್ಭಾಗ ಮಾಡುವಲ್ಲಿ ಯಶಸ್ವಿಯಾಯಿತು. ನಂತರ ಇದುವರೆಗೂ ಒಂದು ಕೋಮಿನ ತುಷ್ಠೀಕರಣದಿಂದ ಹಿಂದೂ ಮುಸ್ಲಿಂ ಭಾವೈಕ್ಯತೆ ಆಗದಂತೆ ನೊಡಿಕೊಳ್ಳುತ್ತಿದೆ ಎಂದು ಟೀಕಿಸಿದರು.ಕಾಂಗ್ರೆಸ್‌ ಸದಸ್ಯ ಬಿ.ಕೆ.ಹರಿಪ್ರಸಾದ್‌ ಮಾತನಾಡಿ, ಮಹಾತ್ಮ ಗಾಂಧೀಜಿ ಅವರು ಸತ್ಯ ಮತ್ತು ಅಹಿಂಸೆಯ ಪ್ರತಿಪಾದಕರಾಗಿದ್ದರು. ನಾಥೂರಾಮ್ ಗೋಡ್ಸೆ ಹಾಗೂ ಆತನ ಅನುಯಾಯಿಗಳು ಹಿಂಸೆ ಮತ್ತು ಸುಳ್ಳಿನ ಪ್ರತಿಪಾದಕರಾಗಿದ್ದಾರೆ. ಹೀಗಾಗಿ ಮಹಾತ್ಮ ಗಾಂಧೀಜಿಗೆ ಯಾರ ಸರ್ಟಿಫಿಕೇಟ್ ಬೇಕಿಲ್ಲ ಎಂದು ಹೇಳಿದರು.ಚರ್ಚೆಯಲ್ಲಿ ಐವನ್‌ ಡಿಸೋಜಾ, ಉಮಾಶ್ರೀ, ಬಲ್ಕಿಸ್‌ ಬಾನು, ಸಚಿವ ಕೆ.ಎಚ್‌.ಮುನಿಯಪ್ಪ, ಜೆಡಿಎಸ್‌ನ ಕೆ.ಎ.ತಿಪ್ಪೇಸ್ವಾಮಿ, ಬಿಜೆಪಿಯ ಧನಂಜಯ ಸರ್ಜಿ ಸೇರಿದಂತೆ ಅನೇಕ ಸದಸ್ಯರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.