ಸೈನಿಕರ ಬಗೆಗೆ ಕಾಂಗ್ರೆಸ್‌ ತನ್ನ ನಿಲುವು ಪ್ರಕಟಿಸಲಿ: ಮಹೇಶ ಟೆಂಗಿನಕಾಯಿ

| Published : Apr 27 2025, 01:36 AM IST

ಸೈನಿಕರ ಬಗೆಗೆ ಕಾಂಗ್ರೆಸ್‌ ತನ್ನ ನಿಲುವು ಪ್ರಕಟಿಸಲಿ: ಮಹೇಶ ಟೆಂಗಿನಕಾಯಿ
Share this Article
  • FB
  • TW
  • Linkdin
  • Email

ಸಾರಾಂಶ

ಕಾಶ್ಮೀರದ ಪಹಲ್ಗಾಂನಲ್ಲಿ ಪ್ರವಾಸಿಗರ ಮೇಲಿನ ಉಗ್ರರ ದಾಳಿಯನ್ನು ಇಡೀ ದೇಶವೇ ಖಂಡಿಸಿದೆ, ಪಾಕಿಸ್ತಾನಕ್ಕೆ ತಕ್ಕಪಾಠ ಕಲಿಸಲು ಒಕ್ಕೊರಲಿನಿಂದ ಆಗ್ರಹ ಕೇಳಿ ಬರುತ್ತಿದೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನದ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ, ರಾಜ್ಯದ ಸಚಿವ ಸಂತೋಷ ಲಾಡ್ ಅವರು ಪ್ರಧಾನಿಗಳ ರಾಜೀನಾಮೆ ಕೇಳುತ್ತಿದ್ದಾರೆ. ಇದು ಖಂಡನೀಯ.

ಹುಬ್ಬಳ್ಳಿ:

ದೇಶದಲ್ಲಿ ಉಗ್ರರ ದಾಳಿಗಳಾದಾಗ ಕಾಂಗ್ರೆಸ್ಸಿನವರು ಸರ್ಜಿಕಲ್‌ ಸ್ಟ್ರೈಕ್‌ ಮತ್ತು ಏರ್‌ಸ್ಟ್ರೈಕ್‌ಗಳ ಬಗೆಗೆ ಸಂಶಯ ವ್ಯಕ್ತಪಡಿಸುತ್ತಾರೆ. ಹೀಗಾಗಿ, ಕಾಂಗ್ರೆಸ್‌ವರು ಸೇನೆ ಬಗೆಗೆ ನಿಮ್ಮ ನಿರ್ಧಾರ ಪ್ರಕಟಿಸಿ ಎಂದು ಶಾಸಕ ಮಹೇಶ ಟೆಂಗಿನಕಾಯಿ ಸವಾಲು ಹಾಕಿದ್ದಾರೆ.

ಅವರು ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ, ಕಾಶ್ಮೀರದಲ್ಲಿನ ಘಟನೆ ಕುರಿತಂತೆ ರಾಷ್ಟ್ರದ ಕಾಂಗ್ರೆಸ್‌ ನಾಯಕರು ಪ್ರಧಾನಿ ಮೋದಿ ಅವರು ಕೈಗೊಂಡ ಕ್ರಮಗಳಿಗೆ ಸಹಮತ ವ್ಯಕ್ತಪಡಿಸಿದರೆ, ರಾಜ್ಯದಲ್ಲಿ ಸಚಿವ ಸಂತೋಷ ಲಾಡ್‌ ಪ್ರಶ್ನಿಸುತ್ತಿದ್ದಾರೆ. ಇದರಿಂದ ಕಾಂಗ್ರೆಸ್‌ನಲ್ಲಿ ದ್ವಂದ್ವ ಮನೆ ಮಾಡಿದೆ ಎಂದರು.

ಸೈನ್ಯದ ಬಗೆಗೆ ಅಗೌರವದ ಹೇಳಿಕೆ ನೀಡಬೇಡಿ. ಅಲ್ಪಸಂಖ್ಯಾತರ ತುಷ್ಟೀಕರಣ ನಿಲ್ಲಿಸಿ. ನಿಮಗೆ ಹಿಂದೂಗಳ ಬಗೆಗೆ ಕಾಳಜಿ ಇಲ್ಲವೇ ಎಂದು ಪ್ರಶ್ನಿಸಿದ ಅವರು, ದೇಶದಲ್ಲಿ ಹಿಂದೂಗಳೆಲ್ಲ ಒಟ್ಟಾಗಿದ್ದೇವೆ ಎಂದು ದೇಶ ಸುಭದ್ರವಾಗಿದೆ. ಇಲ್ಲದಿದ್ದರೆ ಇಷ್ಟೊತ್ತಿಗಾಗಲೇ ದೇಶದಲ್ಲಿ ಷರಿಯಾ ಕಾನೂನು ಜಾರಿಯಾಗಿರುತ್ತಿತ್ತು ಎಂದರು.

ಕಾಶ್ಮೀರದ ಪಹಲ್ಗಾಂನಲ್ಲಿ ಪ್ರವಾಸಿಗರ ಮೇಲಿನ ಉಗ್ರರ ದಾಳಿಯನ್ನು ಇಡೀ ದೇಶವೇ ಖಂಡಿಸಿದೆ, ಪಾಕಿಸ್ತಾನಕ್ಕೆ ತಕ್ಕಪಾಠ ಕಲಿಸಲು ಒಕ್ಕೊರಲಿನಿಂದ ಆಗ್ರಹ ಕೇಳಿ ಬರುತ್ತಿದೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನದ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ, ರಾಜ್ಯದ ಸಚಿವ ಸಂತೋಷ ಲಾಡ್ ಅವರು ಪ್ರಧಾನಿಗಳ ರಾಜೀನಾಮೆ ಕೇಳುತ್ತಿದ್ದಾರೆ. ಇದು ಖಂಡನೀಯ ಎಂದು ಹೇಳಿದರು.

ಪೆಹಲ್ಗಾಂ ದಾಳಿ ದೇಶದಲ್ಲಿ ಚರ್ಚೆಯ ವಿಷಯವಾಗಿದೆ, ಮೃತರಿಗೆ ಸಂತಾಪ ಕಾರ್ಯಕ್ರಮ ನಡೆಯುತ್ತಿವೆ. ಪ್ರಧಾನಿಗಳ ನಿರ್ಣಯಗಳಿಗೆ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸಹಿತ ಸಹಮತ ಸೂಚಿಸಿದ್ದಾರೆ. ಆದರೆ, ಸಚಿವ ಲಾಡ್ ಹಾಗೂ ಕಾಂಗ್ರೆಸ್ ವಕ್ತಾರ ದೇಶದ ಮಿಲಿಟರಿ ಬಗ್ಗೆ ಸಂಶಯದ ಹೇಳಿಕೆ ಕೊಟ್ಟಿದ್ದಾರೆ. ಕಾಶ್ಮೀರದಲ್ಲಿನ ಸಮಸ್ಯೆಗಳಿಗೆ ಕಾಂಗ್ರೆಸ್‌ನ ನೆಹರೂ ಅವರೇ ಕಾರಣ ಆಗಿದ್ದಾರೆ. ಇದನ್ನು ಅವರೇ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.

ಇದೀಗ ಮೋದಿ ಕಾಶ್ಮೀರದಲ್ಲಿ ಆರ್ಟಿಕಲ್ 370 ತೆಗೆದು ಹಾಕಿ, ಅದ್ಬುತ ಬೆಳವಣಿಗೆ ಮಾಡುತ್ತಿದ್ದಾರೆ. ಇದರಿಂದಾಗಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಅಭಿವೃದ್ಧಿ ಕಾರ್ಯ ಜೋರಾಗಿ ನಡೆಯುತ್ತಿದೆ, ಇದನ್ನು ಸಹಿಸದ ಇಸ್ಲಾಮಿಕ್ ಭಯೋತ್ಪಾದಕರು ದಾಳಿ ಮಾಡಿದ್ದಾರೆ, ಇದರ ಬಗ್ಗೆ ಲಾಡ್ ಮಾತನಾಡಬೇಕಿತ್ತು. ಯಾವ ನೈತಿಕತೆ ಇಟ್ಟುಕೊಂಡು ಪ್ರಧಾನಿಗಳ ರಾಜೀನಾಮೆ ಕೇಳುತ್ತಿದ್ದಾರೆ? ಈ ಹಿಂದೆ ಉಗ್ರರ ದಾಳಿಯಾದಾಗ ಮನಮೋಹನ್‌ ಸಿಂಗ್‌ ಸೇರಿದಂತೆ ಯುಪಿಎಯಿಂದ ಆಯ್ಕೆಯಾಗಿದ್ದ ಪ್ರಧಾನಿಗಳು ರಾಜೀನಾಮೆ ನೀಡಿದ್ದರೆ ಎಂದು ಪ್ರಶ್ನೆ ಮಾಡಿದರು‌.

ಈ ಹಿಂದೆ ಭಯೋತ್ಪಾದಕ ದಾಳಿಗಳಾದಾಗ ಬೇರೆಯವರ ಸಹಾಯ ಕೇಳುವ ಪರಿಸ್ಥಿತಿ ಇತ್ತು. ಇದೀಗ ಬೇರೆ ದೇಶಗಳು ಭಾರತದ ಪರ ನಿಲ್ಲುತ್ತಿವೆ. ಭಯೋತ್ಪಾದನೆ ಕುರಿತಂತೆ ಪ್ರಧಾನಿ ಮೋದಿ ಕೈಗೊಳ್ಳುವ ನಿರ್ಣಯ ವಿಶ್ವದ ನಾಯಕರೇ ಪ್ರಶಂಸಿಸುತ್ತಿದ್ದಾರೆ ಎಂದು ತಿಳಿಸಿದರು.

2004ರಿಂದ 2014ರ ವರೆಗೆ ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ದೆಹಲಿ, ವಾರಣಾಸಿ, ಮುಂಬೈ, ಹೈದರಾಬಾದ್, ಜೈಪುರ, ಅಹಮದಾಬಾದ್, ಮುಂಬೈ, ಪುಣೆ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಉಗ್ರರ ದಾಳಿ ನಡೆದಿವೆ, ಇದರಲ್ಲಿ ನೂರಾರು ಜನರ ಸಾವಾಗಿವೆ‌. ಅದೇ ತರಹ ಲಾಡ್ ಸಹ ಬಿಜೆಪಿ ಆಡಳಿತ ಅವಧಿಯಲ್ಲಿ ಏನಾಗಿದೆ ಎಂಬುದನ್ನು ಅಂಕಿ- ಸಂಖ್ಯೆಗಳ ಸಮೇತ ದಾಖಲೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು‌.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ್, ರಾಜು ಕಾಳೆ, ಮಂಜುನಾಥ ಕಾಟ್ಕರ್, ರವಿ ನಾಯಕ ಸೇರಿದಂತೆ ಹಲವರಿದ್ದರು.