ಸಾರಾಂಶ
ರೋಣ:
ಚುನಾವಣಾ ಪೂರ್ವ ಜನತೆಗೆ ಕಾಂಗ್ರೆಸ್ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸುವಲ್ಲಿ ಯಶಸ್ವಿಯಾಗಿದೆ. ಜನತೆ ರಾಜ್ಯ ಸರ್ಕಾರದ ಆಡಳಿತ ವೈಖರಿ ಮೆಚ್ಚುತ್ತಿದ್ದಾರೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.ತಾಲೂಕಿನ ಅರಹುಣಸಿ ಗ್ರಾಮದಲ್ಲಿ ಜಿಪಂ ಉಪ ವಿಭಾಗದ ಲೆಕ್ಕ ಶೀರ್ಷಿಕೆ 5054ರ ಅಡಿಯಲ್ಲಿ 2023-24ನೇ ಸಾಲಿನ ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ₹30 ಲಕ್ಷ ವಚ್ಚದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಬುಧವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು 2 ವರ್ಷಗಳು ಕಳೆಯುತ್ತಾ ಬಂದಿದ್ದು, ಚುನಾವಣೆ ಪೂರ್ವದಲ್ಲಿ ರಾಜ್ಯದ ಜನರಿಗೆ ಕೊಟ್ಟ ಎಲ್ಲ ಭರವಸೆಗಳನ್ನು ಈಡೇರಿಸುವಲ್ಲಿ ಯಶಸ್ವಿಯಾಗಿದೆ. ಪಂಚ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಜನರಿಗೆ ತಲುಪಿಸುವಲ್ಲಿ ಸಿದ್ದರಾಮಯ್ಯ ಶ್ರಮಿಸಿದ್ದಾರೆ. ಪಂಚ ಗ್ಯಾರಂಟಿ ಯೋಜನೆಗಳು ಯಾವುದೇ ಮದ್ಯವರ್ತಿಗಳ ಹಾವಳಿ, ಲಂಚ ಇಲ್ಲದೆ ನೇರವಾಗಿ ಜನರಿಗೆ ತಲುಪುತ್ತಿದೆ. ಪ್ರತಿಯೊಂದು ಕುಟುಂಬಕ್ಕೆ ಗ್ಯಾರಂಟಿ ವರದಾನವಾಗುತ್ತಿದೆ. ಮಹಿಳೆಯರ ಸ್ವಾವಲಂಬನೆ ಜೀವನಕ್ಕೆ ನೆರವಾಗಿದೆ ಎಂದರು.ಅರಹುಣಸಿ ಗ್ರಾಮದಲ್ಲಿ ₹30 ಲಕ್ಷ ವೆಚ್ಚದಲ್ಲಿ 350 ಮೀಟರ್ ಉದ್ದ, 5 ಮೀಟರ್ ಅಗಲ ಸಿಸಿ ರಸ್ತೆ ನಿರ್ಮಿಸಲಾಗುವುದು. ಪ್ರಾಥಮಿಕ ಶಾಲೆಗೆ 2 ಹೆಚ್ಚುವರಿ ಕೊಠಡಿ ಮಂಜೂರು ಮಾಡಲಾಗಿದೆ. ಮೇಲ್ಮಠದಿಂದ ಹಿರೇಮಣ್ಣೂರ, ಬಾಸಲಾಪುರ, ಕೊತಬಾಳ ಒಳರಸ್ತೆಯನ್ನು ಅಭಿವೃದ್ಧಿಪಡಿಸಿ ಬದಾಮಿಗೆ ತೆರಳಲು ಅನುಕೂಲ ಕಲ್ಪಿಸಲಾಗುವುದು. ಈ ರಸ್ತೆಯ ಮಧ್ಯೆ ಹಿರೇಹಳ್ಳಕ್ಕೆ ₹9 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಿಸಲಾಗುವುದು. ಅರಹುಣಸಿಯಿಂದ ಮೇಲ್ಮಠ ರಸ್ತೆಯನ್ನು ಸಂಚಾರಕ್ಕೆ ಅನುಕೂಲವಾಗುವಲ್ಲಿ ತಾತ್ಕಾಲಿಕವಾಗಿ ದುರಸ್ತಿಗೆ ಕ್ರಮ ಕೈಗೊಳ್ಳುವುದು. ಗ್ರಾಪಂನಲ್ಲಿ ವಿವಿಧ ಯೋಜನೆಗಳಿವೆ. ಸಣ್ಣ ಪುಟ್ಟ ಕಾಮಗಾರಿಗಳನ್ನು ನರೇಗಾ ಯೋಜನೆಯಲ್ಲಿ ಹಾಕಿಕೊಳ್ಳಲು ಅವಕಾಶವಿದೆ. ಗ್ರಾಪಂಗೆ ಬರುವ ಅನುದಾನವನ್ನು ಗ್ರಾಮದ ಜನರು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು.
ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಬಸವರಾಜ ನವಲಗುಂದ, ಸವಡಿ ನನ್ನಯ್ಯಸ್ವಾಮಿ ಹಿರೇಮಠ, ಶಂಕರಗೌಡ ಗಿರಡ್ಡಿ , ಕೇದಾರಗೌಡ ಪಾಟೀಲ, ಶರಣಪ್ಪಗೌಡ ಗಾರಡ್ಡಿ, ಎಸ್.ಆರ್. ಪಾಟೀಲ, ಎಂ.ಎಸ್. ಪಾಟೀಲ, ಚಿದಂಬರಗೌಡ ಸುಳ್ಳದ, ಮುತ್ತನಗೌಡ ಚೌಡರಡ್ಡಿ, ಮಲ್ಲಿಕಾರ್ಜುನ ಗಾರಗಿ, ಗ್ರಾಪಂ ಸದಸ್ಯ ನಾಗರಾಜ ಗುದ್ನೆಪ್ಪನವರ, ಗ್ರಾಪಂ ಸದಸ್ಯೆ ಉಮಾ ಅಣ್ಣಿಗೇರಿ, ಗಂಗಮ್ಮ ಹಿಂದಿನಮನಿ, ಶರಣಪ್ಪಗೌಡ ಪಾಟೀಲ, ನೀಲಪ್ಪ ಹೊಸತೋಟದ ಉಪಸ್ಥಿತರಿದ್ದರು.