ಮೋದಿ ಕಾರ್ಯಕ್ರಮ ಕಂಡು ಕಾಂಗ್ರೆಸ್‌ಗೆ ನಡುಕ

| Published : Apr 30 2024, 02:05 AM IST

ಮೋದಿ ಕಾರ್ಯಕ್ರಮ ಕಂಡು ಕಾಂಗ್ರೆಸ್‌ಗೆ ನಡುಕ
Share this Article
  • FB
  • TW
  • Linkdin
  • Email

ಸಾರಾಂಶ

ಬೆಳಗಾವಿಯಲ್ಲಿ ನಡೆದ ಪ್ರಧಾನಿ ಮೋದಿಯವರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಜನತೆಯನ್ನು ಕಂಡು ಕಾಂಗ್ರೆಸ್ ಅಭ್ಯರ್ಥಿ, ನಾಯಕರಿಗೆ ನಡುಕ ಶುರುವಾಗಿದೆ ಎಂದು ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ ವ್ಯಂಗ್ಯವಾಡಿದರು.

ಕನ್ನಡಪ್ರಭ ವಾರ್ತೆ ಗೋಕಾಕ

ಬೆಳಗಾವಿಯಲ್ಲಿ ನಡೆದ ಪ್ರಧಾನಿ ಮೋದಿಯವರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಜನತೆಯನ್ನು ಕಂಡು ಕಾಂಗ್ರೆಸ್ ಅಭ್ಯರ್ಥಿ, ನಾಯಕರಿಗೆ ನಡುಕ ಶುರುವಾಗಿದೆ ಎಂದು ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ ವ್ಯಂಗ್ಯವಾಡಿದರು.

ತಾಲೂಕಿನ ಖನಗಾಂವ ಗ್ರಾಮದಲ್ಲಿ ಸೋಮವಾರ ನಡೆದ ಲೋಕಸಭಾ ಚುನಾವಣೆ ಪ್ರಚಾರಾರ್ಥ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪ್ರಧಾನಿ ಮೋದಿಯವರ ಸಮರ್ಥ ನಾಯಕತ್ವ ಕಂಡು ಕಂಗಾಲಾಗಿರುವ ಕಾಂಗ್ರೆಸ್ ಪಕ್ಷ ಸುಳ್ಳು ಭರವಸೆಗಳನ್ನು ನೀಡುತ್ತಿದೆ. ಮೋದಿಯವರಂತಹ ನಾಯಕತ್ವ ದೇಶಕ್ಕೆ ಬೇಕಿದೆ. ಕಳೆದ 10 ವರ್ಷಗಳಲ್ಲಿ ಮಾಡಿರುವ ಸಾಧನೆಗಳು ನಮ್ಮ ಕಣ್ಮುಂದಿದೆ ಎಂದರು.

ಕಾಂಗ್ರೆಸ್ ಮೋದಿಯರನ್ನು ಟೀಕೆ ಮಾಡುವುದು ಬಿಟ್ಟು ಬೇರೆ ಯಾವುದೇ ಕೆಲಸ ಇಲ್ಲ. ಮೋದಿಯವರು ಪ್ರಧಾನಿಯಾಗುವ ಮುಂಚೆ ಭಾರತ ದೇಶ ಆರ್ಥಿಕ ಪ್ರಗತಿಯಲ್ಲಿ 14ನೇ ಸ್ಥಾನದಲ್ಲಿತ್ತು. ಸದ್ಯ 5ನೇ ಸ್ಥಾನಕ್ಕೆ ಬಂದಿದ್ದು, ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ನಂತರ 3ನೇ ಸ್ಥಾನ ತಲುಪಲಿದೆ. ಮುಂದಿನ ದಿನಗಳಲ್ಲಿ ದೇಶದ ಆರ್ಥಿಕತೆ 1ನೇ ಸ್ಥಾನಕ್ಕೆ ಬರಲಿದೆ ವಿಶ್ವಾಸ ವ್ಯಕ್ತಪಡಿಸಿದರು.

ಜಗತ್ತಿನ ಜನಪ್ರಿಯ ವ್ಯಕ್ತಿ ಮೋದಿ. ಮೋದಿಯವರನ್ನು ಅಲುಗಾಡಿಸಲು ಕಾಂಗ್ರೆಸ್‌ನಿಂದ ಸಾಧ್ಯವಿಲ್ಲ. ಜನರ ದುಡಿದ ಆಸ್ತಿಯನ್ನು ಕಬಳಿಸಲು ಕಾಂಗ್ರೆಸ್ ಪ್ಲ್ಯಾನ್ ಮಾಡಿದೆ. ದೇಶದ ಅಭಿವೃದ್ಧಿಗೆ ಬಿಜೆಪಿ ಸರ್ಕಾರದ ಪಾತ್ರ ಮಹತ್ವದ್ದಾಗಿದೆ. ಸುರೇಶ ಅಂಗಡಿ ಬೆಳಗಾವಿ ಅಭಿವೃದ್ಧಿಗೆ ಸ್ಮಾರ್ಟ್‌ ಸಿಟಿ, ರೈಲುಗಳ ವ್ಯವಸ್ಥೆ, ಬ್ರೀಡ್ಜ್‌ಗಳ ನಿರ್ಮಾಣ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಉಳಿದ ಯೋಜನೆಗಳನ್ನು ಅನುಷ್ಠಾನಗೊಳಿಸುವುದರೊಂದಿಗೆ ಅವರ ಕನಸನ್ನು ನನಸು ಮಾಡುವ ಮೂಲಕ ಬೆಳಗಾವಿ ಜಿಲ್ಲೆಯನ್ನು ದೇಶದಲ್ಲೇ ಮಾದರಿಯಾಗಿ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಗಡಿಯ ಕಾಯುವ ಸೈನಿಕರು ಈ ಮೊದಲು ಶತ್ರು ರಾಷ್ಟ್ರಗಳ ಸೈನಿಕರಿಂದ ಗುಂಡುಗಳು ಬಂದಲ್ಲಿ ಸರ್ಕಾರ ಅಪ್ಪಣೆ ಪಡೆಯಬೇಕಿತ್ತು. ಈಗ ಒಂದು ಗುಂಡು ಶತ್ರು ರಾಷ್ಟ್ರದಿಂದ ಬಂದಲ್ಲಿ 10 ಗುಂಡು ನಮ್ಮ ಸೈನಿಕರಿಂದ ಶತ್ರು ರಾಷ್ಟ್ರದ ಸೈನಿಕರ ವಿರುದ್ಧ ಹೋಗುತ್ತಿವೆ. ಅಂತಹ ಮೇರು ನಾಯಕತ್ವವನ್ನು ಹೊಂದಿರುವ ಮೋದಿಯವರು ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ನೆಲೆಸಲು ಆರ್ಟಿಕಲ್ 370 ತೆಗೆದುಹಾಕಿ ಅಲ್ಲಿರುವ ಯುವಕರಿಗೆ ಉದ್ಯೋಗ ಕಲ್ಪಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಯ ಸದ್ದಡಗಿ ಇಂದು ಪ್ರವಾಸಿತಾಣವಾಗಿ ಮಾರ್ಪಟ್ಟಿದೆ ಎಂದು ತಿಳಿಸಿದರು.

ಶಾಸಕ ರಮೇಶ ಜಾರಕಿಹೊಳಿ ಮಾತನಾಡಿ, ಕಾಂಗ್ರೆಸ್ ಸುಳ್ಳು ಹೇಳಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಕಳೆದ ಐದಾರು ತಿಂಗಳಿನಿಂದ ಗೃಹಲಕ್ಷ್ಮಿ ₹2 ಸಾವಿರ ಜಮಾ ಆಗಿರಲಿಲ್ಲ. ಈಗ ಚುನಾವಣೆ ಹಿನ್ನೆಲೆಯಲ್ಲಿ ಜಮಾ ಮಾಡಿದ್ದಾರೆ. ಚುನಾವಣೆ ನಂತರ ಅದನ್ನು ಬಂದ್ ಮಾಡ್ತಾರೆ. ಇಂತಹ ಕ್ಷಣಿಕ ಗ್ಯಾರಂಟಿಗಳಿಗೆ ಮರುಳಾಗದೇ ಮಹಿಳೆಯರು ಮೋದಿಯವರ ಶಾಶ್ವತ ಗ್ಯಾರಂಟಿಗಳನ್ನು ನೋಡಿ ಬಿಜೆಪಿ ಅಭ್ಯರ್ಥಿಗೆ ಮತ ನೀಡಿ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಬೇಕು ಎಂದು ಕೋರಿದರು.

ರಾಜ್ಯ ಕಾಂಗ್ರೆಸ್ ಪಕ್ಷದ ನಾಯಕರಲ್ಲಿ ಮಾತ್ರ ಕೆಟ್ಟ ಶಬ್ದಗಳು ಬರುತ್ತವೆ. ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಕಡಿಮೆ ಸಂಖ್ಯೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಿದ್ದಾರೆ. ಅವರು ಹೇಗೆ ಪ್ರಧಾನಿಯಾಗಲು ಸಾಧ್ಯ. ಇಂದಿರಾ ಗಾಂಧಿ ಕಾಂಗ್ರೆಸ್ ಬೇರೆ ಈಗಿನ ಕಾಂಗ್ರೆಸ್ ಬೇರೆ. ಸ್ವಾರ್ಥ, ಬಾಗಿಲು ಕಾಯುವವರಿಗೆ ಮತ್ತು ಬ್ಯಾಗ್ ಹಿಡಿಯುವವರಿಗೆ ಮಾತ್ರ ನಾಯಕತ್ವ. ಹೀಗಾಗಿ ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯವಿಲ್ಲ. ಈ ಮೊದಲು ಅಡುಗೆಗೆ ಉರುವಲು ಕಟ್ಟಿಗೆ ಬಳಸುವ ಜನ ಸದ್ಯ ಪ್ರಧಾನಿ ಮೋದಿಯವರ ಉಜ್ವಲ ಯೋಜನೆ ಮೂಲಕ ಎಲ್ಲರ ಮನೆಗಳಿಗೆ ಗ್ಯಾಸ್‌ ನೀಡಿದ್ದಾರೆ. ಎಲ್ಲರ ಆರೋಗ್ಯ ಚಿಕಿತ್ಸೆಗೆ ₹5 ಲಕ್ಷದವರೆಗೆ ಕೇಂದ್ರ ಸರ್ಕಾರ ನೀಡುತ್ತಿದೆ ಎಂದು ತಿಳಿಸಿದರು.

ಈ ಮೊದಲು ಭಾರತ ದೇಶದ ಪ್ರಧಾನ ಮಂತ್ರಿಯವರನ್ನು ಬೇರೆ ದೇಶಗಳ ನೋಡುವ ದೃಷ್ಟಿಕೋನ ಬೇರೆಯಾಗಿತ್ತು. ಇಂದು ದೇಶಕ್ಕೆ ಜಾಗತಿಕ ಮನ್ನಣೆ ಸೀಗುವುದರೊಂದಿಗೆ ಮೋದಿಯವರು ವಿಶ್ವ ನಾಯಕರಾಗಿ ಹೊರಹೊಮ್ಮಿದ್ದಾರೆ. ಮುಂದೆ ಭಾರತ ವಿಶ್ವಗುರುವಾಗುವತ್ತ ಸಾಗುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ಬಂದಾಗಿಂದ ಬಾಂಬ್ ಸಂಸ್ಕೃತಿ, ಕೋಮುವಾದ ಪ್ರಾರಂಭವಾಗಿದೆ ಎಂದು ದೂರಿದರು.

ತಾಲೂಕಿನ ಅಂಕಲಗಿ, ಮಮದಾಪುರ, ಖನಗಾಂವ ಹಾಗೂ ಕೊಣ್ಣುರ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಬೃಹತ್ ಪ್ರಚಾರಾರ್ಥ ಸಮಾರಂಭವನ್ನು ಆಯೋಜಿಸುವ ಮೂಲಕ ಮತಯಾಚನೆ ಮಾಡಿದರು. ಈ ಸಮಾರಂಭಗಳಲ್ಲಿ ನೂರಕ್ಕೂ ಹೆಚ್ಚು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾದರು.

ಸಮಾರಂಭದಲ್ಲಿ ಮಾಜಿ ವಿಧಾನ ಪರಿಷತ್‌ ಸದಸ್ಯ ಮಹಾಂತೇಶ ಕವಟಗಿಮಠ, ಬಿಜೆಪಿ ಬೆಳಗಾವಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಸುಭಾಸ ಪಾಟೀಲ, ಮಾಜಿ ಶಾಸಕ ಎಂ.ಎಲ್.ಮುತ್ತೆನ್ನವರ, ಕೆಎಲ್‌ಇ ನಿರ್ದೇಶಕ ಜಯಾನಂದ ಮುನವಳ್ಳಿ, ಬಿಜೆಪಿ ಗ್ರಾಮೀಣ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮಣ್ಣವರ ಇದ್ದರು.ನಮ್ಮೆಲ್ಲರ ಕನಸಾಗಿದ್ದ ಅಯೋಧ್ಯೆಯ ರಾಮಮಂದಿರ ಕನಸು ನನಸು ಮಾಡಿದ್ದಾರೆ. ಅರುಣಾಚಲ ಪ್ರದೇಶದಲ್ಲಿ ಆಕ್ರಮಿಸಲು ಪ್ರಯತ್ನಿಸಿದ ಚೈನಾಗೆ ತಕ್ಕ ಪಾಠ ನೀಡಿದ ಮೋದಿಯವರನ್ನು 3ನೇ ಬಾರಿಗೆ ಪ್ರಧಾನಿಯನ್ನಾಗಿ ಮಾಡಲು ಅವರ ಪ್ರತಿನಿಧಿಯಾಗಿರುವ ನನಗೆ ಕ್ರಮ ಸಂಖ್ಯೆ 2ಕ್ಕೆ ಮತ ನೀಡಿ.

-ಜಗದೀಶ ಶೆಟ್ಟರ್‌ ಬಿಜೆಪಿ ಅಭ್ಯರ್ಥಿ.ಪ್ರಧಾನಿ ಮೋದಿಯವರು ನನ್ನ ಹಳೆಯ ಮಿತ್ರ ಜಗದೀಶ ಶೆಟ್ಟರ ಅವರನ್ನು ಗೆಲ್ಲಿಸಲು ವಿನಂತಿಸಿಕೊಂಡಿದ್ದಾರೆ. ಜಗದೀಶ ಶೆಟ್ಟರ ಅವರಿಗೆ ಮತ ನೀಡುವ ಮೂಲಕ ಕೇಂದ್ರ ಸಚಿವರನ್ನಾಗಿಸಿ ಜಿಲ್ಲೆಯನ್ನು ಅಭಿವೃದ್ಧಿಪಡಿಸೋಣ.

-ರಮೇಶ ಜಾರಕಿಹೊಳಿ,

ಶಾಸಕರು.