ಸಾರಾಂಶ
ಮಳವಳ್ಳಿ: ಪಂಚ ಗ್ಯಾರಂಟಿ ಯೋಜನೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಚಾಚೂ ತಪ್ಪದೇ ಅನುಷ್ಠಾನಗೊಳಿಸಿದ ಹಿನ್ನೆಲೆಯಲ್ಲಿ ಚನ್ನಪಟ್ಟಣ ಕ್ಷೇತ್ರದ ಮತದಾರರು ಕಾಂಗ್ರೆಸ್ ಪಕ್ಷವನ್ನು ಕೈ ಹಿಡಿಯಲಿದ್ದಾರೆ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಭವಿಷ್ಯ ನುಡಿದರು. ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬೇರೆ ಪಕ್ಷದವರಂತೆ ವೈಯಕ್ತಿಕ ಟೀಕೆ- ಟಿಪ್ಪಣಿಗಳಿಗೆ ಅವಕಾಶ ಕೊಡುವುದಿಲ್ಲ. ಕಾಂಗ್ರೆಸ್ ಪಕ್ಷದವರು ಸಾಧನೆಯ ಮೂಲಕ ಮತ ಕೇಳಲು ಹೋಗುತ್ತೇವೆ. ಎಲ್ಲಾ ಸಮುದಾಯದ ಜನರು ಕಾಂಗ್ರೆಸ್ ಪರವಾಗಿದ್ದಾರೆ. ಚನ್ನಪಟ್ಟಣದ ಮತದಾರರು ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುತ್ತಾರೆಂಬ ಅಪಾರ ನಂಬಿಕೆ ಇದೆ ಎಂದು ಹೇಳಿದರು. ನಿಖಿಲ್‌ಕುಮಾರಸ್ವಾಮಿ ಅವರನ್ನು ಜೆಡಿಎಸ್ ಪಕ್ಷ ಬಲಿಪಶು ಮಾಡುತ್ತಿದೆ. ಏಕೆಂದರೆ ಅವರ ತೀರ್ಮಾನವೇ ಆ ರೀತಿಯಾಗಿದೆ. ಜೆಡಿಎಸ್ ಪಕ್ಷದಲ್ಲಿ ಬೇರೆ ಕಾರ್ಯಕರ್ತರು ಇರಲ್ಲಿಲ್ಲವೇ? ಎಲ್ಲಾ ವಿಚಾರಕ್ಕೂ ಕುಟುಂಬದ ಸದಸ್ಯರೇ ತೀರ್ಮಾನ ಕೈಗೊಳ್ಳುತ್ತಾರೆ. ಹಿಂದೆ ಕುಮಾರಸ್ವಾಮಿ, ನಂತರ ಅನಿತಾಕುಮಾರಸ್ವಾಮಿ, ತದ ನಂತರ ಕುಮಾರಸ್ವಾಮಿ ಗೆದ್ದ ಕ್ಷೇತ್ರದಲ್ಲಿ ಮಗನನ್ನು ನಿಲ್ಲಿಸಿದ್ದಾರೆ, ಮಂಡ್ಯಕ್ಕೂ ಕುಮಾರಸ್ವಾಮಿ ಅವರೇ ನಿಂತು ಗೆದ್ದಿದ್ದಾರೆ, ರಾಮನಗರದಲ್ಲೂ ದೇವೇಗೌಡರ ಅಳಿಯ ಗೆದ್ದಿದ್ದಾರೆ ಇವುಗಳನ್ನು ಕ್ಷೇತ್ರದ ಜನರು ಗಮನಿಸುತ್ತಿರುತ್ತಾರೆ ಎಂದರು.