ಕೈಗೆ ಸೋಲಿನ ಆಘಾತ, ಬಿಜೆಪಿಗೆ ತುಂಬಿತು ಆತ್ಮವಿಶ್ವಾಸ

| Published : Jun 06 2024, 12:30 AM IST

ಕೈಗೆ ಸೋಲಿನ ಆಘಾತ, ಬಿಜೆಪಿಗೆ ತುಂಬಿತು ಆತ್ಮವಿಶ್ವಾಸ
Share this Article
  • FB
  • TW
  • Linkdin
  • Email

ಸಾರಾಂಶ

ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಗೆಲುವು ಸಾಧಿಸಿದ್ದಾರೆ. ಲೋಕಸಭಾ ಚುನಾವಣೆ ಫಲಿತಾಂಶವು ಜಿಲ್ಲೆಯ ಕಾಂಗ್ರೆಸ್‌ ವಲಯದಲ್ಲಿ ಸ್ವಲ್ಪಮಟ್ಟಿಗೆ ತಲ್ಲಣ ಸೃಷ್ಟಿಸಿದೆ. ನಮ್ಮದೇ ಗೆಲುವು ಎಂಬ ಅತಿಯಾದ ಆತ್ಮವಿಶ್ವಾಸವೇ ಕಾಂಗ್ರೆಸ್‌ ಸೋಲಿಗೆ ಕಾರಣ ಎಂಬ ವಿಶ್ಲೇಷಣೆ ನಡೆಯುತ್ತಿದೆ.

ನಾರಾಯಣ ಹೆಗಡೆ

ಹಾವೇರಿ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು, 7 ಕ್ಷೇತ್ರಗಳಲ್ಲಿ ತಮ್ಮದೇ ಶಾಸಕರು ಇರುವುದರಿಂದ ನಮ್ಮದೇ ಗೆಲುವು ಎಂಬ ಅತಿಯಾದ ಆತ್ಮವಿಶ್ವಾಸವೇ ಕಾಂಗ್ರೆಸ್‌ ಸೋಲಿಗೆ ಕಾರಣ ಎಂಬ ವಿಶ್ಲೇಷಣೆ ನಡೆಯುತ್ತಿದೆ. ಜತೆಗೆ, ಕಾಂಗ್ರೆಸ್‌ ಶಾಸಕರ ಬಗ್ಗೆ ಅವರದೇ ಕಾರ್ಯಕರ್ತರು ಅನುಮಾನದ ನೋಟ ಬೀರುತ್ತಿದ್ದಾರೆ.

ಲೋಕಸಭಾ ಚುನಾವಣೆ ಫಲಿತಾಂಶವು ಜಿಲ್ಲೆಯ ಕಾಂಗ್ರೆಸ್‌ ವಲಯದಲ್ಲಿ ಸ್ವಲ್ಪಮಟ್ಟಿಗೆ ತಲ್ಲಣ ಸೃಷ್ಟಿಸಿದೆ. ಬಿಜೆಪಿಗಿಂತ ಮೊದಲೇ ಕಾಂಗ್ರೆಸ್‌ ಹೈಕಮಾಂಡ್‌ ಆನಂದಸ್ವಾಮಿ ಗಡ್ಡದೇವರಮಠ ಅವರನ್ನು ಅಭ್ಯರ್ಥಿ ಎಂದು ಘೋಷಿಸಿತ್ತು. ಚುನಾವಣೆಗೂ ಆರು ತಿಂಗಳ ಮುನ್ನವೇ ಆನಂದಸ್ವಾಮಿ ಅವರು ಒಂದು ಹಂತದಲ್ಲಿ ಕ್ಷೇತ್ರದಲ್ಲಿ ಸಂಚಾರ ನಡೆಸಿ ಜನಾಭಿಪ್ರಾಯ ಕ್ರೋಡೀಕರಿಸುವ ಪ್ರಯತ್ನ ಮಾಡಿದ್ದರು. ಬಿಜೆಪಿಯಿಂದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನೇ ಕಣಕ್ಕಿಳಿಸಿದಾಗ ಮೇಲ್ನೋಟಕ್ಕೆ ಬಿಜೆಪಿಗೆ ಸುಲಭದ ತುತ್ತು ಎಂದೇ ಹೇಳಲಾಗುತ್ತಿತ್ತು. ಆದರೆ, ಪ್ರಚಾರದ ಸಂದರ್ಭದಲ್ಲಿ ಕಾಂಗ್ರೆಸ್‌ಗೆ ಸಿಗುತ್ತಿದ್ದ ಜನಬೆಂಬಲ ನೋಡಿ ಬಿಜೆಪಿಗರು ತಣ್ಣಗಾಗಿದ್ದರು. ಇನ್ನೇನು ಫಲಿತಾಂಶ ತಮ್ಮದೇ ಎಂದು ಕಾಂಗ್ರೆಸ್‌ ಕಾರ್ಯಕರ್ತರು ಹೇಳಿಕೊಂಡು ಓಡಾಡಿದ್ದರು. ಆದರೆ, ಇವಿಎಂ ತೆರೆದಾಗ ಮತದಾರರು ನೀಡಿದ ತೀರ್ಪು ನೋಡಿ ಕಾಂಗ್ರೆಸ್‌ ಪಾಲಿಗೆ ನಿರಾಸೆ ಮೂಡಿಸಿದ್ದರೆ, ಬಿಜೆಪಿ ಕಾರ್ಯಕರ್ತರ ಉತ್ಸಾಹ ಇಮ್ಮಡಿಗೊಳಿಸಿತು.

ಕೈ ಶಾಸಕರತ್ತ ಬೆರಳು: ಲೋಕಸಭೆ ವ್ಯಾಪ್ತಿಯ 8 ಕ್ಷೇತ್ರಗಳ ಪೈಕಿ ಬಿಜೆಪಿ ಶಾಸಕರಿರುವುದು ಶಿರಹಟ್ಟಿಯಲ್ಲಿ ಮಾತ್ರ. ಇನ್ನುಳಿದ 7 ಕ್ಷೇತ್ರಗಳಲ್ಲಿ ಗದುಗಿನಲ್ಲಿ ಪ್ರಭಾವಿ ಸಚಿವ ಎಚ್‌.ಕೆ. ಪಾಟೀಲ ಇದ್ದರೆ, ಇನ್ನುಳಿದ 6 ಕಡೆ ಕಾಂಗ್ರೆಸ್‌ ಶಾಸಕರಿರುವುದು ಆನಂದಸ್ವಾಮಿ ಅವರಿಗೆ ಪ್ರಚಾರದ ವೇಳೆ ಶಕ್ತಿ ತಂದಿತ್ತು. ಮತದಾನದ ದಿನ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಸಮಬಲದ ಪೈಪೋಟಿ ಕಂಡುಬಂದಿತು. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್‌ ಕೈಹಿಡಿದಿರುವುದು ಸುಳ್ಳೇನಲ್ಲ. ಇದೇ ಕಾರಣದಿಂದ ಕಾಂಗ್ರೆಸ್‌ ಅತಿಯಾದ ಆತ್ಮವಿಶ್ವಾಸದಿಂದ ತೇಲುತ್ತಿತ್ತು. ಆದರೆ, ಮತ ಎಣಿಕೆ ಬಳಿಕ ವಾಸ್ತವ ಏನೆಂಬುದರ ಅರಿವಾಗಿದೆ. ಪ್ರಭಾವಿಗಳಿದ್ದಲ್ಲೇ ಬಿಜೆಪಿಗೆ ಹೆಚ್ಚಿನ ಲೀಡ್‌ ಸಿಕ್ಕಿರುವುದು ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಸೋಲಿಗೆ ಹಲವಾರು ಕಾರಣ ಎಂಬಂತೆ ಈಗ ಕೈ ಶಾಸಕರ ಕಡೆಯೇ ಆ ಪಕ್ಷದ ಕಾರ್ಯಕರ್ತರು ಅನುಮಾನ ವ್ಯಕ್ತಪಡಿಸಲು ಆರಂಭಿಸಿದ್ದಾರೆ. ಹೊಂದಾಣಿಕೆ ರಾಜಕೀಯ ಎಂದು ಆರೋಪಿಸುತ್ತಿದ್ದಾರೆ. ಮತ ಗಳಿಕೆಯಲ್ಲಿ ಹಿನ್ನಡೆಯಾದ ಕ್ಷೇತ್ರಗಳ ಶಾಸಕರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳ ಸುರಿಮಳೆಗೈಯುತ್ತಿದ್ದಾರೆ. ಜಿಲ್ಲೆಯಲ್ಲಿ ಪ್ರಭಾವ ಹೆಚ್ಚಿಸಿಕೊಳ್ಳಲು ಹೊರಟಿದ್ದ ಶಾಸಕರೊಬ್ಬರ ನಡೆಯಿಂದಲೇ ಈ ಅವಸ್ಥೆಯಾಗಿದೆ ಎಂದು ನೆಟ್ಟಿಗರು ಆರೋಪಿಸುತ್ತಿದ್ದಾರೆ.

ಕೇಸರಿ ಪಾಳೆಯದಲ್ಲಿ ಆತ್ಮವಿಶ್ವಾಸ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತು ಸುಣ್ಣವಾಗಿದ್ದ ಬಿಜೆಪಿಗೆ ಲೋಕಸಭೆ ಚುನಾವಣೆ ಫಲಿತಾಂಶವು ಆತ್ಮವಿಶ್ವಾಸ ತುಂಬುವಲ್ಲಿ ಯಶಸ್ವಿಯಾಗಿದೆ. ಹಾವೇರಿ ಜಿಲ್ಲೆಯ 5 ಕ್ಷೇತ್ರಗಳಲ್ಲೂ ಬಿಜೆಪಿಗೆ ಹೆಚ್ಚಿನ ಮತಗಳು ಬಿದ್ದಿವೆ. ಗದಗ ಕ್ಷೇತ್ರದಲ್ಲೂ ಭಾರಿ ಲೀಡ್‌ ಸಿಕ್ಕಿದೆ. ಇದು ಬಿಜೆಪಿಯ ಮಾಜಿ ಶಾಸಕರು, ಮುಖಂಡರು, ಕಾರ್ಯಕರ್ತರಲ್ಲಿ ಹುಮ್ಮಸ್ಸು ತಂದಿದೆ. ಮೋದಿ ಪ್ರಭಾವ, ಬೊಮ್ಮಾಯಿ ಅವರ ರಾಜಕೀಯ ಅನುಭವದಿಂದ ಕ್ಷೇತ್ರವನ್ನು ಬಿಜೆಪಿ ಉಳಿಸಿಕೊಂಡಿರುವುದು ಆ ಪಕ್ಷದವರಲ್ಲಿ ಸಮಾಧಾನ ತಂದಿದೆ. ಅಲ್ಲದೇ ಕ್ಷೇತ್ರದ ಮತದಾರರು ರಾಜ್ಯ, ರಾಷ್ಟ್ರ ಚುನಾವಣೆಗಳನ್ನು ಪ್ರತ್ಯೇಕವಾಗಿ ನೋಡುತ್ತಾರೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಬೊಮ್ಮಾಯಿ ಮೇಲಿದೆ ಸವಾಲು: ರಾಜ್ಯದ ಮುಖ್ಯಮಂತ್ರಿಯಾಗಿ ಅಪಾರ ರಾಜಕೀಯ ಅನುಭವ ಹೊಂದಿರುವ ಬಸವರಾಜ ಬೊಮ್ಮಾಯಿ ಮೊದಲ ಬಾರಿಗೆ ಸಂಸತ್‌ ಪ್ರವೇಶಿಸಿದ್ದಾರೆ. ಹಾವೇರಿ ಮತ್ತು ಗದಗ ಜಿಲ್ಲೆಯ ಜನರ ಬೇಡಿಕೆಗಳನ್ನು ಈಡೇರಿಸುವ ಜವಾಬ್ದಾರಿ ಅವರ ಮೇಲೆ ಬಿದ್ದಿದೆ. ಎನ್‌ಡಿಎ ಸರ್ಕಾರ ರಚನೆಯಾಗಿ ಅದರಲ್ಲಿ ಬೊಮ್ಮಾಯಿ ಸ್ಥಾನ ಪಡೆಯುತ್ತಾರೆ ಎಂಬ ನಿರೀಕ್ಷೆ ಹುಟ್ಟುಹಾಕಿದೆ. ನನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳು, ರೈಲ್ವೆ ಮಾರ್ಗ, ರಾಷ್ಟ್ರೀಯ ಹೆದ್ದಾರಿ, ಕೈಗಾರಿಕೆ ಸ್ಥಾಪನೆ ಸೇರಿದಂತೆ ಕ್ಷೇತ್ರದ ಅಭಿವೃದ್ಧಿಗಾಗಿ ಅವರು ತಮ್ಮ ರಾಜಕೀಯದ ಅನುಭವವನ್ನು ಧಾರೆ ಎರೆಯಬೇಕಿದೆ.