ಜೆಡಿಎಸ್, ಬಿಜೆಪಿ ಮೈತ್ರಿಯಿಂದ ಕಾಂಗ್ರೆಸ್‌ಗೆ ಲಾಭ: ಮಾಜಿ ಎಂಎಲ್ಸಿ ಬೆಮಲ್ ಕಾಂತರಾಜ್

| Published : Apr 15 2024, 01:19 AM IST

ಜೆಡಿಎಸ್, ಬಿಜೆಪಿ ಮೈತ್ರಿಯಿಂದ ಕಾಂಗ್ರೆಸ್‌ಗೆ ಲಾಭ: ಮಾಜಿ ಎಂಎಲ್ಸಿ ಬೆಮಲ್ ಕಾಂತರಾಜ್
Share this Article
  • FB
  • TW
  • Linkdin
  • Email

ಸಾರಾಂಶ

ಜೆಡಿಎಸ್, ಬಿಜೆಪಿ ಮೈತ್ರಿಯಿಂದ ಕಾಂಗ್ರೆಸ್‌ಗೆ ಹೆಚ್ಚು ಲಾಭವಾಗಲಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಬೆಮಲ್ ಕಾಂತರಾಜ್ ಹೇಳಿದರು.

ಕನ್ನಡಪ್ರಭ ವಾರ್ತೆ ತುರುವೇಕೆರೆ

ಜೆಡಿಎಸ್, ಬಿಜೆಪಿ ಮೈತ್ರಿಯಿಂದ ಕಾಂಗ್ರೆಸ್‌ಗೆ ಹೆಚ್ಚು ಲಾಭವಾಗಲಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಬೆಮಲ್ ಕಾಂತರಾಜ್ ಹೇಳಿದರು. ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಜೆಡಿಎಸ್‌ನ ಹೆಚ್.ಡಿ.ದೇವೇಗೌಡ, ಹೆಚ್.ಡಿ.ಕುಮಾರಸ್ವಾಮಿ ಪಕ್ಷದ ಉಳಿವು ಮತ್ತು ತಮ್ಮ ಅಸ್ಥಿತ್ವಕ್ಕಾಗಿ ಬಿಜೆಪಿಯೊಂದಿಗೆ ಕೈಜೋಡಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಸ್ಪರ್ಧಿಸಿದ ಮೂರು ಕ್ಷೇತ್ರಗಳಲ್ಲೂ ಸೋಲು ಕಾಣಲಿದೆ. ಕುಮಾರಸ್ವಾಮಿಗೆ ಮೈತ್ರಿ ಮಾಡಿಕೊಳ್ಳುವುದು, ಮೈತ್ರಿ ಮುರಿದುಕೊಳ್ಳುವುದು ಹೊಸದೇನಲ್ಲ. ತಮ್ಮ ಅನುಕೂಲಕ್ಕಾಗಿ ಯಾರೊಂದಿಗೆ ಬೇಕಾದರೂ ಕೈ ಜೋಡಿಸುತ್ತಾರೆ. ಈ ಚುನಾವಣೆಯಲ್ಲಿ ಜೆಡಿಎಸ್‌ಗೆ ಭವಿಷ್ಯ ಇಲ್ಲದಿರುವುದರಿಂದ ಬಿಜೆಪಿಯೊಂದಿಗೆ ಕೈಜೋಡಿಸಿ ಒಂದೆರೆಡು ಸ್ಥಾನ ಪಡೆಯುವ ಉದ್ದೇಶದಿಂದ ಮೈತ್ರಿ ಮಾಡಿಕೊಂಡಿದ್ದಾರೆ. ಇದರಿಂದ ವಿಚಲಿತರಾದ ಜೆಡಿಎಸ್‌ ಕಾರ್ಯಕರ್ತರು ಕಾಂಗ್ರೆಸ್‌ಗೆ ಸೇರ್ಪಡೆಯಾಗುತ್ತಿದ್ದಾರೆ ಎಂದರು.ಮುಂದಿನ ಐದಾರು ತಿಂಗಳಲ್ಲಿ ಜೆಡಿಎಸ್ ಕಾರ್ಯಕರ್ತರು ಸಾಮೂಹಿಕವಾಗಿ ಪಕ್ಷ ತ್ಯಜಿಸುತ್ತಾರೆ. ಆಗ ದೇವೇಗೌಡರು, ಕುಮಾರಸ್ವಾಮಿ ಬಿಜೆಪಿ ಸರಿಯಿಲ್ಲ. ಅವರ ಸಹವಾಸ ಬೇಡ ಎಂದು ಮೈತ್ರಿ ಮುರಿದುಕೊಳ್ಳಲಿದ್ದಾರೆ. ಮುಂಬರುವ ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ಹೊಂದಾವಣಿಕೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಆಗ ಪರಸ್ಪರ ಕಿತ್ತಾಟ ಶುರುವಾಗಲಿದೆ. ಸಹಜವಾಗಿ ಮೈತ್ರಿ ಮುರಿದು ಬೀಳಲಿದೆ ಎಂದು ಹೇಳಿದರು.ಕಳೆದ ಏಳೆಂಟು ತಿಂಗಳ ಹಿಂದೆ ಬಿಜೆಪಿ, ಜೆಡಿಎಸ್ ಎಂದು ಹೊಡೆದಾಡಿದ್ದವರು ಈಗ ಒಂದಾಗಲು ಹೇಗೆ ಸಾಧ್ಯ. ಗ್ರಾಮಾಂತರ ಪ್ರದೇಶದಲ್ಲಿ ಮನೆಮನೆಗೂ ರಾಜಕೀಯ ಇರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಮೈತ್ರಿ ಕಾರ್ಯಕರ್ತರಿಗೆ ಮುಜುಗರ ತರಲಿದೆ. ಆದ್ದರಿಂದ ಕಾರ್ಯಕರ್ತರು ಬಿಜೆಪಿನೂ ಬೇಡ, ಜೆಡಿಎಸ್‌ ಬೇಡ ಎಂದು ಕಾಂಗ್ರೆಸ್ ಸೇರುತ್ತಿದ್ದಾರೆ.ಮಾಜಿ ಸಚಿವ ಗೋಪಾಲಯ್ಯಗೆ ಈ ಕ್ಷೇತ್ರದ ಉಸ್ತುವಾರಿ ಕೊಟ್ಟಿರುವುದು ಹಾಸ್ಯಾಸ್ಪದ ಸಂಗತಿಯಾಗಿದೆ. ಬಿಜೆಪಿ ಶಿಸ್ತು ಬದ್ದ ಪಕ್ಷ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ಸಾರ್ವಜನಿಕ ಜೀವನದಲ್ಲಿ ಅವರ ಬಗ್ಗೆ ಒಳ್ಳೆಯ ಅಭಿಪ್ರಾಯವಿಲ್ಲ. ಗೋಪಾಲಯ್ಯಗೆ ಬಿಜೆಪಿಗೆ ಮತ ನೀಡಿ ಎಂದು ಮತದಾರರನ್ನು ಕೇಳುವ ನೈತಿಕತೆ ಇಲ್ಲ ಎಂದು ಬೆಮಲ್ ಕಾಂತರಾಜ್ ಕಿಡಿಕಾರಿದರು.