ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

| Published : Jun 05 2024, 12:30 AM IST

ಸಾರಾಂಶ

ಸುರಪುರ ವಿಧಾನಸಭೆ ಉಪ ಚುನಾಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವಿನ ನಗೆ ಬೀರುತ್ತಿದ್ದಂತೆ ಸುರಪುರ ನಗರದಲ್ಲಿ ಯುವಕರು ನೃತ್ಯ ಪ್ರದರ್ಶಿಸುವ ಮೂಲಕ ವಿಜಯೋತ್ಸವ ಆಚರಿಸಿದರು.

ಕನ್ನಡಪ್ರಭ ವಾರ್ತೆ ಸುರಪುರ

ಎಸ್.ಟಿ. ಮೀಸಲು ಮತಕ್ಷೇತ್ರಕ್ಕೆ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಪಕ್ಷದ ಬಾವುಟ ಹಾರಿಸಿ ಪಟಾಕಿ ಸಿಡಿಸಿ, ಪರಸ್ಪರ ಬಣ್ಣ ಹಚ್ಚಿಕೊಂಡು ವಿಜಯೋತ್ಸವ ಆಚರಿಸಿದರು.

ಸುರಪುರ ಎಸ್.ಟಿ ಮೀಸಲು ಮತಕ್ಷೇತ್ರಕ್ಕೆ ಮೇ 7ರಂದು ಮತದಾನ ನಡೆದು ತಿಂಗಳ ಕಾಲ ಕಾಯುವಿಕೆ ಬಳಿಕ ಮಂಗಳವಾರ ಜರುಗಿದ ಮತದಾನ ಎಣಿಕೆಯಲ್ಲಿ ಕೈ ಗೆದ್ದು ಬೀಗಿದರೆ ಕಮಲ ಬಾಡಿದೆ. ಮಂಗಳವಾರ ಮಧ್ಯಾಹ್ನದ ವೇಳೆಗೆ ಫಲಿತಾಂಶ ಹೊರ ಬೀಳುತ್ತಿದ್ದಂತೆ ಸುರಪುರ ನಗರದಲ್ಲಿ ಕಾಂಗೆಸ್ ಕಾರ್ಯಕರ್ತರ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು. ನಗರದತ್ತ ದೌಡು:

ಗ್ರಾಮೀಣ ಭಾಗದಲ್ಲಿ ಗೆಲುವಿನ ವಿಷಯ ತಿಳಿಯುತ್ತಿದ್ದಮತೆ ಮುಖಂಡರು, ಹಿರಿಯರು, ಕಿರಿಯರು, ಯುವಕರು ನಗರದತ್ತ ದೌಡಾಯಿಸಿ ನಗರದ ಮಹಾತ್ಮಾ ಗಾಂಧೀಜಿ ವೃತ್ತ ಮತ್ತು ರಾಜಾ ನಾಲ್ವಡಿ ವೆಂಕಟಪ್ಪ ನಾಯಕ ವೃತ್ತದಲ್ಲಿ ಜಮಾವಣೆಗೊಂಡರು. ಬೈಕ್ ಅಬ್ಬರ:

ನಗರದಲ್ಲಿ ಬೈಕ್‌ಗಳ ಅಬ್ಬರ ಮಧ್ಯಾಹ್ನದಿಂದ ಜೋರಾಗಿತ್ತು. ಹಲಗೆ ಬಡಿಯುತ್ತಾ ಯುವಕರು ಕೇಕೆ ಹೊಡೆಯುತ್ತಾ ಕಾಂಗ್ರೆಸ್ ಬಾವುಟವನ್ನು ಹಾರಿಸುತ್ತಾ ತುಸು ಅಬ್ಬರದಿಂದಲೇ ಓಡಾಡಿದರು. ಬಣ್ಣದಲ್ಲಿ ಮಿಂದೆದ್ದ ಜನತೆ:

ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಜಾ ವೇಣುಗೋಪಾಲ ನಾಯಕ ಗೆಲುವಿನ ನಗೆ ಬೀರುತ್ತಿದ್ದಂತೆ ಕಾರ್ಯಕರ್ತರು ಪರಸ್ಪರ ಗುಲಾಲ್ ಎರಚಿ ಬಣ್ಣದಲ್ಲಿ ಮಿಂದೆದ್ದರು. ಕಾರ್ಯಕರ್ತರ ಮುಖದಲ್ಲಿ ಸಂತಸದ ಕಳೆಕಟ್ಟಿತ್ತು. ನಾವು ಇಷ್ಟು ದಿನ ಮಾಡಿದಂತಹ ಕಾರ್ಯಕ್ಕೆ ಫಲ ಸಿಕ್ಕಿದೆ ಎಂಬ ದಾಟಿಯಲ್ಲಿ ಒಬ್ಬರಿಗೊಬ್ಬರು ಬಣ್ಣ ಹಾಕುತ್ತಿದ್ದರು.ಕಾಯುತ್ತಾ ಕುಳಿತ ಕಾರ್ಯಕರ್ತರು:

ಬೆಳಿಗ್ಗೆಯಿಂದಲೇ ಟಿವಿಯ ಮುಂದೆ, ಖಾಸಗಿ ಹೋಟೆಲ್, ಮೊಬೈಲ್ ಹಿಡಿದು ಫಲಿತಾಂಶ ವೀಕ್ಷಿಸುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರು ಗೆಲುವಿನ ವಿಚಾರ ತಿಳಿಯುತ್ತಿದ್ದಂತೆ ರಸ್ತೆಗಿಳಿದರು. ಬಳಿಕ ನೂತನ ಶಾಸಕರು ಇನ್ನೇನು ಆಗಮಿಸುತ್ತಾರೆ ಎನ್ನುತ್ತಾ ಮಧ್ಯಾಹ್ನದಿಂದಲೇ ನಾಯಕನ ಬರುವಿಕೆಗಾಗಿ ನಗರದ ರಾಜಾ ವೆಂಕಟಪ್ಪ ನಾಯಕ ವೃತ್ತ ಮತ್ತು ಮಹಾತ್ಮ ಗಾಂಧೀಜಿ ವೃತ್ತದಲ್ಲಿ ಮಧ್ಯಾಹ್ನದಿಂದಲೇ ಕಾಯುತ್ತ ಕುಳಿತ್ತಿದ್ದರು. ಹಾರಾಡಿದ ಬಾವುಟ:

ನಗರ ಮತ್ತು ಹಳ್ಳಿಗಳಿಂದ ಬಂದಿರುವ ಕಾರ್ಯಕರ್ತರು ಕಾಂಗ್ರೆಸ್ ಬಾವುಟ ಹಿಡಿದು ಬೈಕ್‌ನಲ್ಲಿ ಸಂಚರಿಸಿದರು. ಎಲ್ಲ ನಗರದ ರಾಜಮಾರ್ಗಗಳು, ಓಣಿ, ಕೇರಿ ರಸ್ತೆಗಳಲ್ಲಿ ಸಂಚರಿಸಿದರು. ಕಾಂಗ್ರೆಸ್ ಪರ ಘೋಷಣೆ ಕೂಗಿದರು. ಶುಭಾಶಯ:

ನೂತನ ಶಾಸಕರಿಗೆ ಶುಭಾಶಯ ಕೋರಿ ಊರಿಗೆ ಹೋಗಬೇಕೆಂದು ತೀರ್ಮಾನಿಸಿ ಕಾರ್ಯಕರ್ತರು ವೃತ್ತಗಳ ಅಂಗಡಿಗಳ ಕಟ್ಟೆಗಳ ಮುಂದೆ ಕುಳಿತಿರುವ ದೃಶ್ಯ ಸಾಮಾನ್ಯವಾಗಿತ್ತು. ಕೆಲ ಕಡೆ ಯುವಕರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಜಾ ವೇಣುಗೋಪಾಲ ನಾಯಕ ಅವರು ಗೆಲುವಿನ ನಗೆ ಬೀರಿದ್ದರಿಂದ ಡಿಜೆ ಹಾಕಿಕೊಂಡು ನೃತ್ತ ಪ್ರದರ್ಶಿಸಿ ಹರ್ಷ ವ್ಯಕ್ತಪಡಿಸಿದರು.

ತಾಲೂಕಿಗೆ ಈ ಬಾರಿಯಾದರೂ ಕಾರ್ಖಾನೆ ತಂದು ದುಡಿಯುವ ಕೈಗಳಿಗೆ ಕೆಲಸ ನೀಡುತ್ತಾರೆ. ಈ ಮೂಲಕ ಯುವಕರನ್ನು ಅಭಿವೃದ್ಧಿ ಮಾಡುತ್ತಾರೆ ಅನ್ನುವ ನಂಬಿಕೆ ಇದೆ. ಯುವಕರಿಗೆ ಉದ್ಯೋಗ ನೀಡುವಂತಹ ಯೋಜನೆ ಮಾಡಬೇಕು ಎಂಬುದು ಯುವಕರ ನುಡಿಯಾಗಿದ್ದವು. ರಕ್ಷಣೆ:

ಸೂಕ್ಷ್ಮ ಕ್ಷೇತ್ರವಾಗಿದ್ದರಿಂದ ಗಲಾಟೆ ಗದ್ದಲ ಆಗದಂತೆ ತಡೆಯಲು ಪೊಲೀಸ್ ಇಲಾಖೆಯೂ ಪ್ರತಿ ಹಳ್ಳಿಗಳಲ್ಲಿ ಓರ್ವ ಪೊಲೀಸ್ ಮತ್ತು ಇಬ್ಬರು ಗೃಹರಕ್ಷಕರನ್ನು ನೇಮಿಸಿತ್ತು. ಇದರಿಂದ ಗ್ರಾಮಗಳಲ್ಲಿ ಶಾಂತಿ ನೆಲಿಸಿತ್ತು. ಯಾವುದೇ ಗಲಾಟೆ ಗದ್ದಲುಗಳು ನಡೆದಿಲ್ಲ ಎಂಬ ಮಾಹಿತಿಗಳನ್ನು ಪೊಲೀಸ್ ಅಧಿಕಾರಿಗಳು ನೀಡಿದ್ದಾರೆ.