ಶ್ರೇಯಸ್‌ ಪಟೇಲ್‌ ಗೆಲುವು: ಬೇಲೂರಿನಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಸಂಭ್ರಮಾಚರಣೆ

| Published : Jun 05 2024, 12:31 AM IST

ಶ್ರೇಯಸ್‌ ಪಟೇಲ್‌ ಗೆಲುವು: ಬೇಲೂರಿನಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಸಂಭ್ರಮಾಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಹಾಸನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೇಯಸ್ ಪಟೇಲ್ ವಿಜಯಶಾಲಿಯಾದ ಹಿನ್ನೆಲೆ ಕಾರ್ಯಕರ್ತರು ಮಂಗಳವಾರ ಬೇಲೂರು ಪಟ್ಟಣದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಕಾಂಗ್ರೆಸ್‌ ಅಭ್ಯರ್ಥಿ ಶ್ರೇಯಸ್‌ ಪಟೇಲ್‌ ಗೆಲುವು । ಪಟಾಕಿ ಸಿಡಿಸಿ ಸಂತಸ

ಕನ್ನಡಪ್ರಭ ವಾರ್ತೆ ಬೇಲೂರು

ಹಾಸನ ಲೋಕಸಭಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೇಯಸ್ ಪಟೇಲ್ ವಿಜಯಶಾಲಿಯಾದ ಹಿನ್ನೆಲೆ ಕಾರ್ಯಕರ್ತರು ಮಂಗಳವಾರ ಪಟ್ಟಣದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಈ ವೇಳೆ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಜಿ.ನಿಶಾಂತ್, ‘೨೦ ವರ್ಷಗಳ ದುರಾಡಳಿತಕ್ಕೆ ಬೇಸತ್ತಿದ್ದ ಹಾಸನ ಜಿಲ್ಲೆಯ ಜನ ಇಂದು ಆ‌ ಪಕ್ಷದ ನಾಯಕರಿಗೆ ತಕ್ಕ ಶಾಸ್ತಿ ಮಾಡಿದ್ದಾರೆ. ಎರಡು ಪಕ್ಷ ಬಿಜೆಪಿ ಹಾಗೂ ಜೆಡಿಎಸ್ ಪಕ್ಷ ಮೈತ್ರಿ ಮಾಡಿಕೊಂಡಾಗಲೇ ನಾವು ವಿಜಯಶಾಲಿಯಾಗಿದ್ದೆವು. ಎರಡು ಪಕ್ಷದ ನಾಯಕರು ಬೇಲೂರಿನಲ್ಲಿ ೨೦ ಸಾವಿರ ಅಂತರವನ್ನು ನಾವು ಕೊಡುತ್ತೇವೆ ಎಂದಿದ್ದರು. ಆದರೆ ಅವರು ಒಂದಂಕಿ ದಾಟಲು ಸಾಧ್ಯವಾಗಿಲ್ಲ. ಈಗಾಗಲೇ ನಾವು ೨೦ ವರ್ಷಗಳ ಹಿಂದೆ ಸಾಧಿಸಿದ ಅಭೂತಪೂರ್ವ ಗೆಲುವನ್ನು ನಾವಿಂದು ಸಾಧಿಸಿದ್ದೇವೆ. ಸ್ನೇಹಜೀವಿಯಾಗಿ ಎಲ್ಲರ ಜತೆ ಉತ್ತಮ ಒಡನಾಟದಲ್ಲಿರುವ ಶ್ರೇಯಸ್ ಪಟೇಲ್ ಅವರ ಗೆಲುವು ನಮ್ಮ ಎಲ್ಲಾ ನಾಯಕರ ಸಂಘಟಿತ ಹೋರಾಟದ ಗೆಲುವಾಗಿದ್ದು ಮುಂದಿನ ದಿನಗಳಲ್ಲಿ ನಡೆಯುವು ಚುನಾವಣೆಗಳಲ್ಲಿ ಸಂಘಟಿತವಾಗಿ ಕಾಂಗ್ರೆಸ್ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತದೆ. ಬೇಲೂರು ಕ್ಷೇತ್ರದ ನಾಯಕತ್ವ ಹೊತ್ತಿದ್ದ ಬಿ.ಶಿವರಾಂ ಅವರಿಗೆ ಎಲ್ಲರ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇವೆ’ ಎಂದು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ, ಪುರಸಭೆ ಸದಸ್ಯೆ ತಿರ್ಥಕುಮಾರಿ ಮಾತನಾಡಿ, ‘ಹಾಸನ ಜಿಲ್ಲೆಯಲ್ಲಿ ಕಂಡು ಕೇಳರಿಯದಂತಹ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ತಕ್ಕ ಶಾಸ್ತಿ ಇಂದು ಆ ಪಕ್ಷದವರಿಗೆ ಆಗಿದೆ. ನಮ್ಮದು ಪವಿತ್ರ ಮೈತ್ರಿ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದ ನಾಯಕರಿಗೆ ಅಪವಿತ್ರ ಮೈತ್ರಿಯಾಗಿದೆ. ಮೊದಲು ಅದನ್ನು ತೊಳೆದುಕೊಳ್ಳಲಿ. ಇಂದು ಕಾಂಗ್ರೆಸ್ ಪಕ್ಷ ನೀಡಿದ ಹಲವಾರು ಯೋಜನೆಗಳ ಮೂಲಕ ಮಹಿಳೆಯರು ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಗೆಲುವಿಗೆ ಕಾರಣರಾಗಿದ್ದಾರೆ’ ಎಂದು ತಿಳಿಸಿದರು.

ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ಎಂ.ಆರ್.ವೆಂಕಟೇಶ ಮಾತನಾಡಿ, ದಶಕಗಳ ಕಾಲ ತಮ್ಮ ಅಧೀನದಲ್ಲಿಟ್ಟುಕೊಂಡಿದ್ದ ಒಂದು ಪಕ್ಷ ಇಂದು ಅವರ ಅಧೀನದಿಂದ ಮುಕ್ತಿ ಹೊಂದಿದೆ. ಇಡೀ ಜಿಲ್ಲೆಯ ಎಲ್ಲಾ ನಾಯಕರ ಸಂಘಟಿತ ಹೋರಾಟದ ಫಲವಾಗಿ ಸಜ್ಜನ ಕುಟುಂಬದ ಒಬ್ಬ ಯುವಕ ಇಂದು ಸಂಸದರಾಗಿ ಆಯ್ಕೆಯಾಗುವ ಮೂಲಕ ಇಡೀ ಜಿಲ್ಲೆಗೆ, ರಾಜ್ಯಕ್ಕೆ ಹೆಸರು ತಂದಿದ್ದಾರೆ. ಒಬ್ಬ ವ್ಯಕ್ತಿಯಿಂದ ಇಡೀ ಹಾಸನ ಜಿಲ್ಲೆ ತಲೆತಗ್ಗಿಸುವಂತಹ ಕೆಲಸ ಆಗಿತ್ತು. ಆದರೆ ಶ್ರೇಯಸ್ ಪಟೇಲ್ ಅವರ ಗೆಲುವು ಹಾಸನ ಜಿಲ್ಲೆ ತಲೆ ಎತ್ತಿ ನಿಲ್ಲಲು ಸಹಕಾರವಾಗಿದೆ’ ಎಂದು ತಿಳಿಸಿದರು.

ಮಾಜಿ ಜಿಪಂ ಸದಸ್ಯ ಸೈಯದ್ ತೌಫಿಕ್, ಪುರಸಭೆ ಸದಸ್ಯರಾದ ಶಾಂತಕುಮಾರ್, ಅಶೋಕ್ ರತ್ನಾ, ಮೀನಾಕ್ಷಿ, ಜಮೀಲಾ, ಉಷಾ, ಸೌಮ್ಯ, ಅಕ್ರಂ, ಭರತ್, ಜಮಾಲ್, ದಿವ್ಯ ಗಿರೀಶ್, ಇಕ್ಬಾಲ್, ಸತ್ಯನಾರಾಯಣ್, ಸತೀಶ್ ಹಾಜರಿದ್ದರು.