ಸರ್ಕಾರಿ ಕಚೇರಿಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು: ಕೊಡಗು ಬಿಜೆಪಿ ಟೀಕೆ
2 Min read
KannadaprabhaNewsNetwork
Published : Oct 08 2023, 12:01 AM IST
Share this Article
FB
TW
Linkdin
Whatsapp
ಬಿಜೆಪಿ ಸುದ್ದಿಗೋ಼ಷ್ಠಿ | Kannada Prabha
Image Credit: KP
ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲವು ಸಾಧಿಸಿದ ಮೇಲೆ ಸರ್ಕಾರಿ ಕಚೇರಿಗಳು ಕಾಂಗ್ರೆಸ್ ಮಾಯವಾಗಿವೆ. ಜಿಲ್ಲೆಯಲ್ಲಿ ಸರ್ಕಾರಿ ಕಚೇರಿಗಳು ಕಾಂಗ್ರೆಸ್ ಕಚೇರಿಗಳಾಗಿ ಮಾರ್ಪಟ್ಟಿವೆ. ಎಲ್ಲಿ ನೋಡಿದರೂ ಕಾಂಗ್ರೆಸ್ ಕಾರ್ಯಕರ್ತರೇ ಕಾಣಿಸಿಕೊಳ್ಳುತ್ತಿದ್ದಾರೆ. ಅಧಿಕಾರಿಗಳು ಭಯದ ವಾತಾವರಣದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಜಿಲ್ಲಾ ಬಿಜೆಪಿ ಆರೋಪಿಸಿದೆ.
ಕನ್ನಡಪ್ರಭ ವಾರ್ತೆ ಮಡಿಕೇರಿ ಜಿಲ್ಲೆಯಲ್ಲಿ ಸರ್ಕಾರಿ ಕಚೇರಿಗಳು ಕಾಂಗ್ರೆಸ್ ಕಚೇರಿಗಳಾಗಿ ಮಾರ್ಪಟ್ಟಿವೆ. ಎಲ್ಲಿ ನೋಡಿದರೂ ಕಾಂಗ್ರೆಸ್ ಕಾರ್ಯಕರ್ತರೇ ಕಾಣಿಸಿಕೊಳ್ಳುತ್ತಿದ್ದಾರೆ. ಅಧಿಕಾರಿಗಳು ಭಯದ ವಾತಾವರಣದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಜಿಲ್ಲಾ ಬಿಜೆಪಿ ಮಾಧ್ಯಮ ಪ್ರಮುಖ್ ಸುಬ್ರಮಣ್ಯ ಉಪಾಧ್ಯಾಯ ಆರೋಪಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲವು ಸಾಧಿಸಿದ ಮೇಲೆ ಸರ್ಕಾರಿ ಕಚೇರಿಗಳು ಕಾಂಗ್ರೆಸ್ ಮಾಯವಾಗಿವೆ. ಇತ್ತೀಚೆಗೆ ಸಂಪಾಜೆಯಲ್ಲಿ ನಡೆದ ಕಾಂಗ್ರೆಸ್ ಸಭೆಗೆ ತಹಸೀಲ್ದಾರ್ ಅವರನ್ನು ಕರೆಸಿ ಕುಂದುಕೊರತೆ ಎಂದು ಪ್ರತಿಬಿಂಬಿಸಲಾಗಿದೆ. ತಾಲೂಕು ಪಂಚಾಯಿತಿ ಕಚೇರಿ ಸಿಬ್ಬಂದಿಗೆ ದೂರವಾಣಿ ಮಾಡಿದಾಗ ಕಾಂಗ್ರೆಸ್ ಅಧ್ಯಕ್ಷರ ಕೈಗೆ ಫೋನ್ ಕೊಟ್ಟ ಪ್ರಸಂಗವೂ ನಡೆದಿದೆ. ಸರ್ಕಾರಿ ಕಚೇರಿಗಳಲ್ಲಿ ಅರ್ಜಿದಾರರ ಬದಲು ಕಾಂಗ್ರೆಸ್ ಕಾರ್ಯಕರ್ತರೇ ತುಂಬಿರುತ್ತಾರೆ ಎಂದು ಟೀಕಿಸಿದರು. ಈಗಿನ ಶಾಸಕರುಗಳು ತಾವು ಮಾಡಿದ ಪ್ರತಿಯೊಂದು ಕೆಲಸಕ್ಕೆ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ತಾವು ಮಾಡಿದ ಕೆಲಸ ಜನಪರವಾಗಿರಬೇಕೆ ಹೊರತು ಪ್ರಚಾರದ ಮೂಲಕ ಸಾಮಾಜದ ದಾರಿ ತಪ್ಪಿಸುವ ಕೆಲಸ ಆಗಬಾರದು ಎಂದು ಹೇಳಿದರು. ಜಿಲ್ಲೆಯಲ್ಲಿ ಕಾಡಾನೆ ದಾಳಿಯಿಂದ ಮೃತಪಟ್ಟ ಕುಟುಂಬಗಳ ಮನೆಗೆ ಶಾಸಕರು ಭೇಟಿ ನೀಡದೆ ಕಾಂಗ್ರೆಸ್ ಕಾರ್ಯಕರ್ತರನ್ನು ಕಳುಹಿಸಿ ‘ಶಾಸಕರ ಆದೇಶದ ಮೇರೆಗೆ ಭೇಟಿ ನೀಡಲಾಗಿದೆ’ ಎಂದು ಪ್ರಚಾರ ಪಡೆಯುತ್ತಿದ್ದಾರೆ. ಅಲ್ಲದೆ ಮೃತರ ಕುಟುಂಬಕ್ಕೆ ಚೆಕ್ ವಿತರಣೆ ಮಾಡುವ ಸಂದರ್ಭ ಮಾತ್ರ ಸಚಿವರು, ಶಾಸಕರು ಕಾಣಿಸಿಕೊಳ್ಳುತ್ತಿದ್ದಾರೆ. ಇದು ಯಾವ ರೀತಿಯ ಕಾರ್ಯವೈಖರಿ ಎಂದು ಸುಬ್ರಮಣ್ಯ ಉಪಾಧ್ಯಾಯ ಪ್ರಶ್ನಿಸಿದರು. ಜಮ್ಮಾಬಾಣೆ ಸಮಸ್ಯೆಯನ್ನು 2008ರಲ್ಲಿಯೇ ಹಿಂದಿನ ಬಿಜೆಪಿ ಸರ್ಕಾರ ಬಗೆಹರಿಸಿದೆ. ಆದರೆ ಈಗಿನ ಶಾಸಕರು ನಾನು ಮಾಡಿದೆ ಎಂದು ಹೇಳಿಕೆ ನೀಡುತ್ತಿರುವುದು ವಿಪರ್ಯಾಸ. ತಾಳತ್ತಮನೆ, ಮೇಕೇರಿ, ಬೆಟ್ಟಗೇರಿ, ಅರುವತೋಕ್ಲು ರಸ್ತೆ ೨೦೨೦ರಲ್ಲೇ ಜಿಲ್ಲಾ ಮುಖ್ಯ ರಸ್ತೆಯಾಗಿ ಮೇಲ್ದರ್ಜೆಗೇರಿದೆ. ಆದರೆ ಕಾಂಗ್ರೆಸ್ಸಿಗರು ಈಗಿನ ಶಾಸಕರು ಮೇಲ್ದರ್ಜೆಗೇರಿಸಲು ಆದೇಶಿಸಿದ್ದಾರೆ ಎಂದು ಜನರ ಹಾದಿ ತಪ್ಪಿಸುತ್ತಿದ್ದಾರೆ ಎಂದು ದೂರಿದರು. ೨೦೨೩-೨೪ರ ಮುಂಗಡ ಪತ್ರದಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೊಡಗಿನ ರಸ್ತೆಗಳ ಅಭಿವೃದ್ಧಿಗೆ ೧೦೦ ಕೋಟಿ ರೂ. ಘೋಷಣೆ ಮಾಡಿದ್ದರು. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೊಮ್ಮಾಯಿ ಅವರ ಬಜೆಟನ್ನು ತಿರಸ್ಕರಿಸಿ ಹೊಸ ಬಜೆಟ್ ಮಂಡಿಸಿದ್ದಾರೆ. ಇದರಲ್ಲಿ ಕೊಡಗು ಜಿಲ್ಲೆಯ ಪ್ಯಾಕೇಜ್ ಮತ್ತು ಕಾಲು ಸೇತುವೆಗಳನ್ನು ಕೈ ಬಿಟ್ಟಿದ್ದಾರೆ ಎಂದು ಆರೋಪಿಸಿದರು. ಜಿಲ್ಲಾ ಬಿಜೆಪಿ ವಕ್ತಾರ ಮಹೇಶ್ ಜೈನಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಕೊಡಗಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ದರ್ಪ ಮಿತಿಮೀರಿದ್ದು, ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ. ಕಾರ್ಯಕರ್ತರು ಶಾಸಕರ ಹೆಸರು ಹೇಳಿಕೊಂಡು ಅಧಿಕಾರಿಗಳನ್ನು ಬೆದರಿಸುತ್ತಿದ್ದು, ದಲ್ಲಾಳಿಗಳಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು. ಇತ್ತೀಚೆಗೆ ನಡೆದ ದಸರಾ ದಶಮಂಟಪ ಸಭೆಗೆ ಆಗಮಿಸಿದ ಶಾಸಕರು, ದಸರಾ ಸಮಿತಿ ಮತ್ತು ಯಾವುದೇ ದೇವಾಲಯ ಸಮಿತಿಯಲ್ಲಿ ಗುರುತಿಸಿಕೊಂಡಿಲ್ಲದ ಕಾಂಗ್ರೆಸ್ ವ್ಯಕ್ತಿಯೊಬ್ಬರನ್ನು ವೇದಿಕೆಯಲ್ಲಿ ಕೂರಿಸಿ ಕಾಂಗ್ರೆಸ್ ಸಮಿತಿ ಸಭೆಯಂತೆ ಮಾಡಲು ಹೊರಟ್ಟಿದ್ದರು. ದಸರಾ ಸಭೆಗೆ ತನ್ನದೇ ಆದ ಗೌರವ ಇದ್ದು, ಅದನ್ನು ಈ ಹಿಂದಿನಿಂದಲೂ ಅರ್ಥಪೂರ್ಣವಾಗಿ ನಡೆಸಿಕೊಂಡು ಬರಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಿ.ಎ.ಅರುಣ್ ಕುಮಾರ್ ಹಾಗೂ ನಗರಾಧ್ಯಕ್ಷ ಮನು ಮಂಜುನಾಥ್ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.