ಸಾರಾಂಶ
-ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಅನ್ಯಾಯ: ಆರೋಪ -ಐಜೂರು ವೃತ್ತದಲ್ಲಿ ಕೇಂದ್ರ, ಪ್ರಧಾನಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶಕನ್ನಡಪ್ರಭ ವಾರ್ತೆ ರಾಮನಗರ
ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಅನುದಾನ ನೀಡದೆ ಅನ್ಯಾಯ ಮಾಡಿದೆ ಎಂದು ಆರೋಪಿಸಿಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಖಾಲಿ ಚೊಂಬು ಪ್ರದರ್ಶಿಸಿ ಶನಿವಾರ ಪ್ರತಿಭಟನೆ ನಡೆಸಿದರು.
ರಾಮನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಮತ್ತು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ನಗರದ ಐಜೂರು ವೃತ್ತದಲ್ಲಿ ಪಕ್ಷದ ಕಾರ್ಯಕರ್ತರು ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಧಿಕ್ಕಾರದ ಘೋಷಣೆ ಕೂಗುತ್ತಾ ಖಾಲಿ ಚೊಂಬು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು.ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್‌ನಲ್ಲಿ ಕರ್ನಾಟಕ ರಾಜ್ಯಕ್ಕೆ ಬಿಡಿಗಾಸು ನೀಡದೆ ಅನ್ಯಾಯ ಮಾಡಿದೆ. ಅಧಿಕಾರದ ಕುರ್ಚಿ ಉಳಿಸಿಕೊಳ್ಳಲು ಬಿಹಾರ ಮತ್ತು ಆಂಧ್ರಪ್ರದೇಶಕ್ಕೆ ಹೆಚ್ಚಿನ ಅನುದಾನ ನೀಡಿದೆ. ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ತೋರಲಾಗಿದೆ ಎಂದು ಕಿಡಿಕಾರಿದರು.
ಶಾಸಕ ಇಕ್ಬಾಲ್ ಹುಸೇನ್ ಮಾತನಾಡಿ, ರಾಜ್ಯದಿಂದ ಚುನಾಯಿತರಾಗಿರುವ ಬಿಜೆಪಿ ಮತ್ತು ಜೆಡಿಎಸ್ ಸಂಸದರು ಹಾಗೂ ಐವರು ಕೇಂದ್ರ ಸಚಿವರು ಕರ್ನಾಟಕ ರಾಜ್ಯಕ್ಕೆ ನಿರೀಕ್ಷಿತ ಅನುದಾನ ತರುವಲ್ಲಿ ವಿಫಲರಾಗಿದ್ದಾರೆ. ಕರ್ನಾಟಕ ಪ್ರತಿನಿಧಿಸುವ ರಾಜ್ಯಸಭೆ ಸಂಸದೆ ಹಾಗೂ ಹಣಕಾಸು ಸಚಿವೆ ನಿರ್ಮಲಾಸೀತಾರಾಮನ್ ರಾಜ್ಯಕ್ಕೆ ಯಾವುದೇ ನೂತನ ಕೇಂದ್ರೀಯ ಯೋಜನೆ, ನೀರಾವರಿ, ರಸ್ತೆ , ರೈಲ್ವೆ ಯೋಜನೆಗಳಿಗೆ ಅನುದಾನ ನೀಡದೆ ಮಲತಾಯಿ ಧೋರಣೆ ಅನುಸರಿಸಿದ್ದಾರೆ ಎಂದು ಟೀಕಿಸಿದರು.ಕೇಂದ್ರ ಬಜೆಟ್ ಪೂರ್ವದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಾಜ್ಯದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿ ಸಮಸ್ಯೆಗೆ ಸ್ಪಂದಿಸಲು ಮನವಿ ಮಾಡಿದ್ದರು. ಆದರೂ ಭದ್ರಾ ಮೇಲ್ದಂಡೆ, ಮೇಕೆದಾಟು ನೀರಾವರಿ ಯೋಜನೆಗಳಿಗೆ ಅನುದಾನ ಘೋಷಣೆ ಮಾಡಿಲ್ಲ. ಬಡವರು ಮತ್ತು ರೈತ ವಿರೋಧಿ ನೀತಿಯನ್ನು ಎನ್ ಡಿಎ ಸರ್ಕಾರ ಅನುಸರಿಸುತ್ತಿದೆ ಎಂದು ದೂರಿದರು.
ದೇಶದಲ್ಲಿ ಅತಿ ಹೆಚ್ಚು ಜಿಎಸ್‌ಟಿ ಪಾವತಿಸುತ್ತಿರುವ ರಾಜ್ಯ ಕರ್ನಾಟಕವಾಗಿದೆ. ಆದರೂ ಸಹ ತಾರತಮ್ಯ ಮಾಡಲಾಗುತ್ತಿದೆ. ಬರ ಪರಿಹಾರ ಹಣ ನೀಡದೆ ವಿಳಂಬ ಮಾಡಿದಾಗ ಪರಿಹಾರ ಪಡೆಯಲು ಸರ್ವೋಚ್ಚ ನ್ಯಾಯಾಲಯಕ್ಕೆ ಹೋಗಬೇಕಾಯಿತು. ನ್ಯಾಯಾಲಯ ಛೀಮಾರಿ ಹಾಕಿದ ನಂತರ ಇದೀಗ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅನುದಾನ ಹಂಚುವಲ್ಲಿ ರಾಜ್ಯದ ಜನತೆಯನ್ನು ಸಂಪೂರ್ಣ ವಂಚಿಸಿದೆ ಎಂದು ಇಕ್ಬಾಲ್ ಹುಸೇನ್ ಟೀಕಿಸಿದರು.ಮಾಜಿ ಶಾಸಕ ಕೆ.ರಾಜು ಮಾತನಾಡಿ, ರಾಜ್ಯದಿಂದ ಆಯ್ಕೆಯಾದ 19 ಬಿಜೆಪಿ ಮತ್ತು 2 ಜೆಡಿಎಸ್ ಸಂಸದರಿದ್ದು, ಐವರು ಕೇಂದ್ರ ಸಚಿವರಿದ್ದರೂ ಬಜೆಟ್ ನಲ್ಲಿ ಕರ್ನಾಟಕಕ್ಕೆ ನಿರೀಕ್ಷಿತ ಅನುದಾನ ತರುವಲ್ಲಿ ವಿಫಲರಾಗಿದ್ದಾರೆ. ಕರ್ನಾಟಕ ಪ್ರತಿನಿಧಿಸುವ ರಾಜ್ಯಸಭೆ ಸಂಸದೆ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯಕ್ಕೆ ಯಾವುದೇ ಕೊಡುಗೆ ನೀಡದೆ ಮಲತಾಯಿ ಧೋರಣೆ ಅನುಸರಿಸಿದ್ದಾರೆ. ಹಾಗಾಗಿ ಮುಂದಿನ ಚುನಾವಣೆಯಲ್ಲಿ ರಾಜ್ಯವನ್ನು ತೊರೆದು ಆಂಧ್ರಪ್ರದೇಶದಿಂದ ಸ್ಪರ್ಧೆ ಮಾಡಿ ತೋರಿಸಲಿ ಎಂದು ಸವಾಲು ಹಾಕಿದರು.
ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯವನ್ನು ಕೇಂದ್ರ ಸಚಿವರು ಹಾಗೂ ಬಿಜೆಪಿ - ಜೆಡಿಎಸ್ ಸಂಸದರು ಸರಿ ಪಡಿಸಬೇಕು. ಇಲ್ಲದಿದ್ದರೆ ಅವರೆಲ್ಲರ ಮನೆ ಮುಂದೆ ಪ್ರತಿಭಟನೆ ನಡೆಸಬೇಕಾಗುತ್ತದೆ. ಕೇಂದ್ರ ಸಚಿವ ಕುಮಾರಸ್ವಾಮಿ ಬೂಟಾಟಿಕೆ ಮತ್ತು ನಯವಂಚನೆ ಮಾತುಗಳನ್ನಾಡುವುದನ್ನು ಬಿಡಬೇಕು. ಕೇಂದ್ರದಿಂದ ಆಗಿರುವ ಅನ್ಯಾಯವನ್ನು ಸರಿಪಡಿಸಲು ಹೋರಾಟ ನಡೆಸಬೇಕು ಎಂದು ಹೇಳಿದರು.ಪ್ರತಿಭಟನೆಯಲ್ಲಿ ಮಾಜಿ ಶಾಸಕ ಎಂ.ಸಿ.ಅಶ್ವತ್ಥ್ , ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಗಾಣಕಲ್ ನಟರಾಜ್, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್, ಮಾಜಿ ಅಧ್ಯಕ್ಷ ಸಿ.ಎನ್ . ಆರ್.ವೆಂಕಟೇಶ್, ನಿರ್ದೇಶಕ ಪರ್ವೇಜ್ ಪಾಷ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ್ , ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ದೀಪಾ ಮುನಿರಾಜು, ನಗರಸಭೆ ಮಾಜಿ ಅಧ್ಯಕ್ಷರಾದ ಪಾರ್ವತಮ್ಮ, ಸದಸ್ಯರಾದ ಆಯಿಷಾ, ಮುಖಂಡರಾದ ನರಸಿಂಹಯ್ಯ,ರಾಜಶೇಖರ್, ಜಗದೀಶ್, ವಿ.ಎಚ್.ರಾಜು, ಸಮದ್ ಮತ್ತಿತರರು ಭಾಗವಹಿಸಿದ್ದರು.