ಕನ್ನಡಪ್ರಭ ವಾರ್ತೆ ಶಿವಮೊಗ್ಗ

ದೇಶದ ಹಿತದೃಷ್ಟಿಯಿಂದ ಹಾಗೂ ಮುಂಬರುವ ಪೀಳಿಗೆಯ ಸುಸ್ಥಿರ ಭವಿಷ್ಯಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು ಜನರಲ್ಲಿ ಶಿಸ್ತು ಮತ್ತು ಮಿತವ್ಯಯದ ಬಗ್ಗೆ ಮಾಡಿರುವ ಮನವಿಯನ್ನು ಕಾಂಗ್ರೆಸ್ ನಾಯಕರು ವೈಫಲ್ಯ ಎಂದು ಕರೆಯುತ್ತಿರುವುದು ಅತ್ಯಂತ ಹಾಸ್ಯಾಸ್ಪದ ಸಂಗತಿ ಎಂದು ಬಿಜೆಪಿ ಶಾಸಕ ಎಸ್‌.ಎನ್‌.ಚನ್ನಬಸಪ್ಪ ಟೀಕಿಸಿದ್ದಾರೆ.

ಚುನಾವಣೆ ಮುಗಿದ ಮೇಲೆ ದೇಶದ ವಾಸ್ತವ ಸ್ಥಿತಿಯನ್ನು ಮರೆಮಾಚದೆ, ಜನರನ್ನು ಜವಾಬ್ದಾರಿಯುತವಾಗಿ ಮುನ್ನಡೆಸುವ ಸಾಹಸ ಕೇವಲ ಮೋದಿಯವರಿಗೆ ಮಾತ್ರ ಸಾಧ್ಯ. ಆದರೆ ಸ್ವಾರ್ಥ ರಾಜಕಾರಣದಲ್ಲಿ ಮುಳುಗಿರುವ ಕಾಂಗ್ರೆಸ್ಸಿಗರಿಗೆ ದೇಶದ ಆರ್ಥಿಕ ಸ್ವಾವಲಂಬನೆ ಎನ್ನುವುದು ವೈಫಲ್ಯದಂತೆ ಕಾಣುತ್ತಿರುವುದು ಅವರ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ ಎಂದಿದ್ದಾರೆ.

ಕಾಂಗ್ರೆಸ್ ನಾಯಕರು ಮೋದಿಯವರನ್ನು ಪ್ರಶ್ನಿಸುವ ಮೊದಲು ತಮ್ಮ ಪಕ್ಷದ ಆಡಳಿತಾವಧಿಯ ಕರಾಳ ಇತಿಹಾಸವನ್ನು ಒಮ್ಮೆ ನೆನಪಿಸಿಕೊಳ್ಳಲಿ.

ಮೋದಿಯವರು ಮೆಟ್ರೋ ಬಳಸಿ ಅಥವಾ ಇಂಧನ ಉಳಿಸಿ ಎಂದು ಕರೆ ನೀಡುತ್ತಿರುವುದು ಕೇವಲ ಪೆಟ್ರೋಲ್ ಉಳಿಸಲು ಮಾತ್ರವಲ್ಲ, ಅದು ಮುಂದಿನ ತಲೆಮಾರಿಗೆ ಮಾಲಿನ್ಯಮುಕ್ತ ಪರಿಸರವನ್ನು ನೀಡುವ ಉದ್ದೇಶವನ್ನು ಹೊಂದಿದೆ. ರೈತರಿಗೆ ಕಡಿಮೆ ರಸಗೊಬ್ಬರ ಬಳಸಿ ಎಂದು ಹೇಳುತ್ತಿರುವುದು ಮಣ್ಣಿನ ಫಲವತ್ತತೆಯನ್ನು ಕಾಪಾಡಲು ಮತ್ತು ವಿಷಮುಕ್ತ ಕೃಷಿಯನ್ನು ಉತ್ತೇಜಿಸಲೆಂದೇ ಹೊರತು ಗೊಬ್ಬರದ ಕೊರತೆಯಿಂದಲ್ಲ. ಇತಿಹಾಸದುದ್ದಕ್ಕೂ ಹಗರಣಗಳಲ್ಲೇ ಮುಳುಗಿ, ದೇಶದ ಬೊಕ್ಕಸವನ್ನು ಲೂಟಿ ಮಾಡಿ, ಭಾರತವನ್ನು ವಿಶ್ವದ ಮುಂದೆ ಭಿಕ್ಷಾಪಾತ್ರೆಯೊಂದಿಗೆ ನಿಲ್ಲಿಸಿದ್ದ ಕಾಂಗ್ರೆಸ್ಸಿಗರಿಗೆ ಇಂದು ದೇಶಭಕ್ತಿ ಮತ್ತು ಶಿಸ್ತಿನ ಪಾಠ ಅರ್ಥವಾಗುತ್ತಿಲ್ಲ ಎಂದು ಕುಟುಕಿದ್ದಾರೆ.


ದೇಶಕ್ಕಾಗಿ ಜೋಳಿಗೆ ಹಿಡಿದು ಹೊರಡಲು ಸಿದ್ಧವಿರುವ ಮೋದಿಯವರ ತ್ಯಾಗದ ಬಗ್ಗೆ ಮಾತನಾಡುವ ನೈತಿಕತೆ, ವಿದೇಶಿ ಮಣ್ಣಿನಲ್ಲಿ ನಿಂತು ಸ್ವದೇಶವನ್ನು ನಿಂದಿಸುವ ರಾಹುಲ್ ಗಾಂಧಿಯವರಿಗಾಗಲಿ ಅಥವಾ ಅವರ ಗುಲಾಮರಿಗಾಗಲಿ ಖಂಡಿತ ಇಲ್ಲ. ಹನ್ನೆರಡು ವರ್ಷಗಳ ಆಡಳಿತದ ನಂತರವೂ ನಮಗೆ ಮಾರ್ಗದರ್ಶನ ನೀಡುವ ಪ್ರಧಾನಿ ಬೇಕೇ ಹೊರತು, ಹನ್ನೆರಡು ನಿಮಿಷವೂ ದೇಶದ ಹಿತದೃಷ್ಟಿಯಿಂದ ಯೋಚಿಸದ ಇಂತಹ ದಿವಾಳಿ ಕಾಂಗ್ರೆಸ್ ನಾಯಕರು ಬೇಕಿಲ್ಲ ಎಂದು ಹರಿಹಾಯ್ದಿದ್ದಾರೆ.