ಕಾಂಗ್ರೆಸ್ ದ್ವೇಷ ರಾಜಕಾರಣವನ್ನು ಮಾಡುವುದರಲ್ಲಿಯೇ ಕಾಲ ಕಳೆಯುತ್ತಿದೆ.

ಮಂಕಿ ಪಪಂ ಸದಸ್ಯರು ಮತದಾರರು, ಕಾರ್ಯಕರ್ತರಿಗೆ ಅಭಿನಂದನಾ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಹೊನ್ನಾವರ

ಕಾಂಗ್ರೆಸ್ ದ್ವೇಷ ರಾಜಕಾರಣವನ್ನು ಮಾಡುವುದರಲ್ಲಿಯೇ ಕಾಲ ಕಳೆಯುತ್ತಿದೆ. ಇದೇ ರಾಜ್ಯ ಸರಕಾರದ ಸಾಧನೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆರೋಪಿಸಿದರು. ತಾಲೂಕಿನ ಮಂಕಿ ಕೊಕ್ಕೇಶ್ವರ ರಾಮಕ್ಷತ್ರೀಯ ಸಭಾಭವನದಲ್ಲಿ ಬಿಜೆಪಿ ಮಂಕಿ ಮಂಡಲದ ನೂತನ ಮಂಕಿ ಪಪಂ ಸದಸ್ಯರಿಗೆ ಹಾಗೂ ಮತದಾರರಿಗೆ, ಕಾರ್ಯಕರ್ತರಿಗೆ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಂಕಿ ಪಪಂ ಗೆಲ್ಲಲು ಸ್ವತಃ ಉಸ್ತುವಾರಿ ಸಚಿವರೆ ಮುಂದೆ ನಿಂತಿದ್ದರು. ಆದರೆ ಇಲ್ಲಿನ ಮತದಾರ ಬಿಜೆಪಿಯ ಕೈಬಿಡಲಿಲ್ಲ. ಗ್ಯಾರಂಟಿಗೆ ಜನ ಮರಳು ಆಗುವುದಿಲ್ಲ. ಎಷ್ಟೆ ಹಣವನ್ನು ಸುರಿದರು ಮತದಾರ ಮಾತ್ರ ಆಮಿಷಕ್ಕೆ ಬಲಿಯಾಗದೆ ಬಿಜೆಪಿ ಗೆಲ್ಲಿಸಿದ್ದಾನೆ. ಹೊಸದಾಗಿ ಯಾವುದೇ ಯೋಜನೆಯನ್ನು ಜಾರಿಗೆ ತರಲು ಸರಕಾರದ ಬಳಿಯಲ್ಲಿ ಹಣವಿಲ್ಲ. ಹಿಂದೆ ಬಿಜೆಪಿ ಸರ್ಕಾರ ಮಂಜೂರಿ ಮಾಡಿದ್ದ ಯೋಜನೆಯನ್ನು ಈಗ ಜಾರಿಗೊಳಿಸುತ್ತಿರುವುದೇ ಇವರ ಸಾಧನೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು ಬಂದೂಕುಗಳನ್ನು ಕೈಯಲ್ಲಿ ರಾಜಾರೋಷವಾಗಿ ಹಇಡಿದುಕೊಂಡು ಓಡಾಡಲು ಕಿಡಿಗೇಡಿಗಳಿಗೆ ಸಾಧ್ಯವಾಗುತ್ತಿದೆ. ಅಧಿಕಾರಿಗಳು ಸರ್ಕಾರದ ಕೈಗೊಂಬೆಯಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಸಚಿವ ಶಿವಾನಂದ ನಾಯ್ಕ ಮಾತನಾಡಿ, ಮಂಕಿ ಪಪಂ ಚುನಾವಣೆ ಗೆಲವು ಮುಂದಿ‌ನ ಎಲ್ಲಾ‌‌ ಚುನಾವಣೆಗೆ ದಿಕ್ಸೂಚಿ ಆಗಲಿದೆ. ಗೆದ್ದ ಅಭ್ಯರ್ಥಿಗಳ ಮೇಲೆ ಜನರ ನಿರೀಕ್ಷೆ ಇದೆ. ಅವಕಾಶ ಸದ್ಬಳಕೆ ಮಾಡಿಕೊಳ್ಳಿ ಎಂದು ಪಪಂ ಸದಸ್ಯರಿಗೆ ಸಲಹೆ ನೀಡಿದರು.

ಮಾಜಿ ಶಾಸಕ ಸುನೀಲ ನಾಯ್ಕ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಎನ್‌.ಎಸ್. ಹೆಗಡೆ ಅಧ್ಯಕ್ಷೀಯ ಮಾತುಗಳನ್ನಾಡಿದರು.

ಪಪಂನಲ್ಲಿ ಅಮೋಘ ಜಯ ಸಾಧಿಸಿದ ಎಲ್ಲಾ 12 ಸದಸ್ಯರನ್ನು ಗೌರವಿಸಲಾಯಿತು. ಮುಖಂಡರಾದ ಪ್ರಶಾಂತ ನಾಯ್ಕ, ವೆಂಕಟೇಶ ನಾಯ್ಕ, ಈಶ್ವರ ನಾಯ್ಕ, ಗೋವಿಂದ ನಾಯ್ಕ, ದೀಪಕ ನಾಯ್ಕ, ರಾಜು ಬಂಡಾರಿ, ಶಿವಾನಿ ಶಾಂತಾರಾಮ, ಶ್ರೀಕಲಾ ಶಾಸ್ತ್ರಿ, ಬಿಜೆಪಿ ಮಂಕಿ ಮಂಡಲಾಧ್ಯಕ್ಷ ಮಂಜುನಾಥ ನಾಯ್ಕ, ಹೊನ್ನಾವರ ಮಂಡಲಾಧ್ಯಕ್ಷ ಯೊಗೇಶ್ ಮೇಸ್ತ, ಗಣಪತಿ ಗೌಡ ಚಿತ್ತಾರ, ಮಂಕಿ ಪಪಂ ನೂತನ ಸದಸ್ಯರು, ಕಾರ್ಯಕರ್ತರಿದ್ದರು.