2012ರಲ್ಲಿ ಚೀನಾ ಭಾರತದ ಜಾಗವನ್ನು ವಶಕ್ಕೆ ಪಡೆದರೂ, ದೇಶವಿರೋಧಿ ಘೋಷಣೆ ಕೂಗಿದರೂ ಅಂದಿನ ಕಾಂಗ್ರೆಸ್‌ ಸರ್ಕಾರ ಯಾವುದೇ ಕ್ರಮಕೈಗೊಳ್ಳಲಿಲ್ಲ. ಇದೀಗ ಅಂತಹ ವ್ಯಕ್ತಿಗಳ ವಿರುದ್ಧ ನರೇಂದ್ರ ಮೋದಿ ಸರ್ಕಾರ ಕ್ರಮಕೈಗೊಳ್ಳುತ್ತಿದ್ದಂತೆ ಕಾಂಗ್ರೆಸ್‌ ಬಣ್ಣ ಬಯಲಾಗುತ್ತಿದೆ.

ಹುಬ್ಬಳ್ಳಿ:

ದೇಶವನ್ನು ತುಂಡು ತುಂಡು ಮಾಡುವುದಾಗಿ ಘೋಷಿಸಿದ್ದ ಉಮರ್‌ ಖಾಲೀದ್‌ಗೆ ಸುಪ್ರೀಕೋರ್ಟ್‌ ಜಾಮೀನು ಸಹ ನೀಡಿಲ್ಲ. ಹೀಗಿದ್ದಾಗ್ಯೂ ಕಾಂಗ್ರೆಸ್‌ ಖಾಲೀದ್‌ ಪರ ಹೇಳಿಕೆ ನೀಡುತ್ತಿರುವುದು ಖಂಡನೀಯ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಿಡಿಕಾರಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2012ರಲ್ಲಿ ಚೀನಾ ಭಾರತದ ಜಾಗವನ್ನು ವಶಕ್ಕೆ ಪಡೆದರೂ, ದೇಶವಿರೋಧಿ ಘೋಷಣೆ ಕೂಗಿದರೂ ಅಂದಿನ ಕಾಂಗ್ರೆಸ್‌ ಸರ್ಕಾರ ಯಾವುದೇ ಕ್ರಮಕೈಗೊಳ್ಳಲಿಲ್ಲ. ಇದೀಗ ಅಂತಹ ವ್ಯಕ್ತಿಗಳ ವಿರುದ್ಧ ನರೇಂದ್ರ ಮೋದಿ ಸರ್ಕಾರ ಕ್ರಮಕೈಗೊಳ್ಳುತ್ತಿದ್ದಂತೆ ಕಾಂಗ್ರೆಸ್‌ ಬಣ್ಣ ಬಯಲಾಗುತ್ತಿದೆ ಎಂದರು.

ನಾಯಕರಿಗೆ ಅವಮಾನ:

ವಂದೇ ಮಾತರಂ ಗೀತೆಯನ್ನು ಸಂಪೂರ್ಣವಾಗಿ ಹಾಡುವುದನ್ನು ಕೇಂದ್ರ ಸರ್ಕಾರ ಸಂವಿಧಾನಾತ್ಮಕವಾಗಿ ಕಡ್ಡಾಯಗೊಳಿಸಿದೆ. ಇದನ್ನು ಒಪ್ಪದ ಕಾಂಗ್ರೆಸ್‌ನವರು ಮೊದಲಿನ ಎರಡು ಚರಣ ಹಾಡುವ ಮೂಲಕ ಬಂಕಿಮಚಂದ್ರ ಚಟರ್ಜಿ, ಮಹಾತ್ಮ ಗಾಂಧಿ, ರವೀಂದ್ರನಾಥ್‌ ಟ್ಯಾಗೋರ್‌ ಅವರಿಗೆ ಅಪಮಾನ ಮಾಡುತ್ತಿದ್ದಾರೆ ಎಂದರು.

ಜನರಿಗೆ ಎಫೆಕ್ಟ್‌ ಇಲ್ಲ:

ಕೇಂದ್ರ ಸರ್ಕಾರ ಹಣಕಾಸಿನ ಸುರಕ್ಷತೆ ದೃಷ್ಟಿಯಿಂದ ಡಿಜಿಟಲ್‌ ಪೇಮೆಂಟ್‌ಗೆ ಒತ್ತು ನೀಡುತ್ತಿದೆ. ಯುಪಿಐ ಶುಲ್ಕದಿಂದ ಸಣ್ಣ-ಪುಟ್ಟ ವ್ಯಾಪಾರಸ್ಥರು ಹಾಗೂ ಬೀದಿ ಬದಿ ವ್ಯಾಪಾರಸ್ಥರು, ಶೇ.96ರಷ್ಟು ಹಣ ವರ್ಗಾವಣೆ ಮಾಡುವ ಜನರಿಗೆ ತೊಂದರೆ ಆಗಲ್ಲ. ಅದರಲ್ಲೂ ನಿಯಮಿತ ₹ 2 ಸಾವಿರ ಒಳಗಿನ ವರ್ಗಾವಣೆಗೆ ತೊಂದರೆ ಇಲ್ಲ ಎಂದು ಸ್ಪಷ್ಟಪಡಿಸಿದ ಜೋಶಿ, ಡಿಜಿಟಲ್‌ ಪೇಮೆಂಟ್‌ ಉತ್ತೇಜಿಸುವ ನಿಟ್ಟಿನಲ್ಲಿ ಅದರ ಸಾವಿರಾರು ಕೋಟಿ ರುಪಾಯಿ ಶುಲ್ಕವನ್ನು ಸರ್ಕಾರವೇ ಪಾವತಿಸುತ್ತಿದೆ. ಆದರೆ, ದೊಡ್ಡ ವ್ಯಾಪಾರಿಗಳಿಗೆ ಕೊಂಚ ಶುಲ್ಕ ಪಾವತಿ ಹೊರೆ ಆಗಲಿದೆ. ಜನರ ಅನುಕೂಲಕ್ಕಾಗಿ ಡಿಜಿಟಲ್‌ ಪೇಮೆಂಟ್‌ ವ್ಯವಸ್ಥೆ ಬಲಪಡಿಸಲು, ವೇಗವಾಗಿಸಲು, ದೇಶಾದ್ಯಂತ ಇದನ್ನು ವಿಸ್ತರಿಸಲು ಈ ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದರು.