ಕಾಂಗ್ರೆಸ್ಸಿನ ಶೂನ್ಯ ಸಾಧನೆಯ ಸಮಾವೇಶ: ರಾಜು ಕುರುಡಗಿ ಟೀಕೆ

| Published : May 20 2025, 01:26 AM IST

ಸಾರಾಂಶ

2 ವರ್ಷದ ಹಿಂದೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಯಾವುದೇ ಸಾಧನೆಯನ್ನು ಮಾಡದೇ ಮೇ 20ರಂದು ನಡೆಯುವ ಸಾಧನಾ ಸಮಾವೇಶವು, ಶೂನ್ಯ ಸಾಧನೆಯ ಸಮಾವೇಶ ಇದಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ತೋಟಪ್ಪ(ರಾಜು) ಕುರುಡಗಿ ಹೇಳಿದರು.

ಗದಗ: 2 ವರ್ಷದ ಹಿಂದೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಯಾವುದೇ ಸಾಧನೆಯನ್ನು ಮಾಡದೇ ಮೇ 20ರಂದು ನಡೆಯುವ ಸಾಧನಾ ಸಮಾವೇಶವು, ಶೂನ್ಯ ಸಾಧನೆಯ ಸಮಾವೇಶ ಇದಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ತೋಟಪ್ಪ(ರಾಜು) ಕುರುಡಗಿ ಹೇಳಿದರು.ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಬಹಳಷ್ಟು ಭರವಸೆಗಳೊಂದಿಗೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದುಕೊಂಡಿಲ್ಲ, 5 ಗ್ಯಾರಂಟಿಗಳನ್ನು ನೀಡಿ ಇದನ್ನೇ ಬಹಳಷ್ಟು ಪ್ರಚಾರ ಮಾಡುತ್ತಿರುವರು. ಕೇವಲ 5 ಗ್ಯಾರಂಟಿಗಳಿಂದ ರಾಜ್ಯದ ಅಭಿವೃದ್ಧಿ ಆಗುವುದಿಲ್ಲ, 2 ವರ್ಷಗಳ ಅವಧಿಯಲ್ಲಿ ರಾಜ್ಯ ಸರ್ಕಾರದ ಯಾವುದೇ ಇಲಾಖೆಯಲ್ಲಿ ಅಭಿವೃದ್ಧಿಗಳೇ ನಡೆದಿಲ್ಲ, ಯಾವುದೇ ಅಭಿವೃದ್ಧಿ ಮಾಡದೇ ಇದ್ದರೂ ಕೂಡಾ ಪ್ರತಿ ದಿವಸ ಕೋಟ್ಯಂತರ ರು. ಖರ್ಚು ಮಾಡಿ ಜಾಹೀರಾತುಗಳನ್ನು ಏತಕ್ಕಾಗಿ ನೀಡುತ್ತಿರುವರು? ಒಂದು ವೇಳೆ ನೀವು ಅಭಿವೃದ್ಧಿ ಮಾಡಿದ್ದರೆ ಜನತೆಯೇ ನಿಮ್ಮನ್ನು ಹೊಗಳುತ್ತಿದ್ದರು. ಸಮಾಜದಲ್ಲಿರತಕ್ಕಂತ ಮಹಿಳೆಯರಿಗಾಗಲಿ, ಯುವಕರಿಗಾಗಲಿ, ಹಿಂದುಳಿದ ವರ್ಗದವರಿಗಾಗಲಿ, ದಲಿತರಿಗಾಗಲಿ, ಸಮಾಜದಲ್ಲಿ ತುಳಿತಕ್ಕೆ ಒಳಗಾದ ಯಾವುದೇ ಸಮಾಜದ ಸಮುದಾಯಕ್ಕೂ ಕೂಡಾ ಈ ಸರ್ಕಾರದಿಂದ ಯಾವುದೇ ಒಳ್ಳೆಯ ಅಭಿವೃದ್ಧಿ ಕಾರ್ಯಗಳು ಆಗಿರುವುದಿಲ್ಲ ಎಂದರು.

ಎಸ್.ಸಿ, ಎಸ್.ಟಿಗಾಗಿ ಮೀಸಲಿಟ್ಟಿದ್ದ 38 ಸಾವಿರ ಕೋಟಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗಾಗಿ ಬಳಸಿಕೊಂಡಿದ್ದು ಆ ಸಮಾಜಕ್ಕೆ ಈ ಸರ್ಕಾರ ದೊಡ್ಡ ಆಘಾತವನ್ನೇ ನೀಡಿದೆ. ಒಂದು ವೇಳೆ ಈ ಹಣವನ್ನು ಎಸ್.ಸಿ, ಎಸ್.ಟಿ ಸಮಾಜದ ಅಭಿವೃದ್ಧಿಗಾಗಿ ಬಳಸಿಕೊಂಡಿದ್ದಲ್ಲಿ ಆ ಸಮಾಜ ಉದ್ಧಾರವಾಗುತ್ತಿತ್ತು. ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದ್ದು ಗುತ್ತಿಗೆದಾರರ ಸಂಘದ ಅಧ್ಯಕ್ಷರೆ ನೇರವಾಗಿ ಶೇ 60% ರಷ್ಟು ಕಮಿಷನ್ ಈ ಸರ್ಕಾರಕ್ಕೆ ಕೊಡಬೇಕಾಗಿದೆ ಎಂದು ಆರೋಪ ಮಾಡಿದ್ದು ಇಂತಹ ಕೆಟ್ಟ ಸರ್ಕಾರ ರಾಜ್ಯದಲ್ಲಿ ಇದೂವರೆಗೂ ಕೂಡ ಬಂದಿರುವುದಿಲ್ಲಾ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಹೋಗಿದೆ. ಹಿಂದುಗಳ ಮೇಲೆ ಸಾಕಷ್ಟು ಹತ್ಯೆಗಳಾಗಿರುವವು. ಪ್ರತಿಯೊಂದು ವಸ್ತುವಿನ ಬೆಲೆಯನ್ನು ಏರಿಸಿದ್ದು ಈ ಸರ್ಕಾರದ ಸಾಧನೆಯಾಗಿದೆ ಎಂದು ತೀವ್ರವಾಗಿ ಟೀಕಿಸಿದರು.

ಆಡು ಮುಟ್ಟದ ಗಿಡವಿಲ್ಲ, ಸಿದ್ದರಾಮಯ್ಯನವರು ಬೆಲೆ ಏರಿಸಿದ ವಸ್ತುಗಳಿಲ್ಲ. ಅಲ್ಪಸಂಖ್ಯಾತರ ಮತಗಳ ಆಸೆಗೋಸ್ಕರ ಬಹುಸಂಖ್ಯಾತ ಹಿಂದುಗಳ ಮೇಲೆ ಈ ಸರ್ಕಾರದಿಂದ ದಬ್ಬಾಳಿಕೆ ಆಗುತ್ತಿರುವದು. ಅಲ್ಪಸಂಖ್ಯಾತರಿಗೆ ಮಾತ್ರ ಸಾಕಷ್ಟು ಯೋಜನೆಗಳನ್ನು ತಂದು ಬಹುಸಂಖ್ಯಾತ ಹಿಂದುಗಳಿಗೆ ಅನ್ಯಾಯ ಮಾಡಿರುವರು. ಕಾಂಗ್ರೆಸ್ ಪಕ್ಷದ ಶಾಸಕರುಗಳೇ ಸರ್ಕಾರ ಅನುದಾನ ನೀಡುತ್ತಿಲ್ಲಾ ಎಂದು ನೇರವಾಗಿ ಸರ್ಕಾರದ ವಿರುದ್ಧ ಆರೋಪ ಮಾಡಿರುವರು. ಯಾವ ಕ್ಷೇತ್ರದಲ್ಲಿಯೂ ಕೂಡಾ ಅಭಿವೃದ್ಧಿಗಳೇ ಕಾಣದಾಗಿದೆ. ಕಾಂಗ್ರೆಸ್ ಶಾಸಕರಾದ ಬಸವರಾಜ ರಾಯರಡ್ಡಿ ಅವರು ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಇಡೀ ದೇಶದಲ್ಲಿಯೇ ನಂಬರ್ 1ನೇ ಸ್ಥಾನದಲ್ಲಿ ಇದೆ ಎಂದು ಹೇಳಿರುವುದು ರಾಜ್ಯ ಸರ್ಕಾರದ ಕಾರ್ಯವೈಖರಿಗೆ ಸಾಕ್ಷಿಯಾಗಿದೆ. ಎಲ್ಲ ರಂಗದಲ್ಲಿಯೂ 2 ವರ್ಷದ ಅವಧಿಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದ್ದು ಶೂನ್ಯ ಸಾಧನೆಯನ್ನು ಮಾಡಿ ಯಾವ ಪುರುಷಾರ್ಥಕ್ಕಾಗಿ ಸಾಧನಾ ಸಮಾವೇಶ ಮಾಡಲು ಹೊರಟಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ ಮಲ್ಲಾಪೂರ, ಫಕೀರೇಶ ರಟ್ಟಿಹಳ್ಳಿ, ಆರ್.ಕೆ.ಚವಾಣ, ಜಿಲ್ಲಾ ವಕ್ತಾರ ಎಂ.ಎಂ. ಹಿರೇಮಠ, ಸುರೇಶ ಮರಳಪ್ಪನವರ, ಬೂದಪ್ಪ ಹಳ್ಳಿ, ಬಿ.ಎಸ್. ಚಿಂಚಲಿ ಹಾಗೂ ಮುಂತಾದವರು ಇದ್ದರು.