ಸಾರಾಂಶ
ಬಳ್ಳಾರಿ : ರಾಜ್ಯ ಸರ್ಕಾರ ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದಲ್ಲಿ ಸೋಮವಾರ ಹಮ್ಮಿಕೊಂಡಿರುವ ಸಮರ್ಪಣೆ ಸಂಕಲ್ಪ ಸಮಾವೇಶ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ನಾಯಕರು, ಕಾಂಗ್ರೆಸ್ ಯಾವ ಸಾಧನೆ ಮಾಡಿದೆ ಎಂದು ಸಮಾವೇಶ ಮಾಡುತ್ತಿದೆ ಎಂದು ಪ್ರಶ್ನಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರದ ಸಮಾವೇಶ ಸಮರ್ಪಣೆ ಸಂಕಲ್ಪ ಸಮಾವೇಶವಲ್ಲ; ಅಭಿವೃದ್ಧಿ ಶೂನ್ಯ, ಜನ ವಂಚನೆಯ ಸಮಾವೇಶ ಎಂದು ಕಟುವಾಗಿ ಟೀಕಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ ಹಾಗೂ ಪಕ್ಷದ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಮೋಕಾ, ಕಾಂಗ್ರೆಸ್ ಸಮಾವೇಶ ಹಮ್ಮಿಕೊಂಡಿರುವುದು ನಾಚಿಕೆಗೇಡು. ರಾಜ್ಯವನ್ನು ಅಭಿವೃದ್ಧಿ ಶೂನ್ಯವಾಗಿಸಿ ಸಮಾವೇಶ ಮಾಡಿದರೆ ಲಾಭವೇನು ? ಎಂದು ಪ್ರಶ್ನಿಸಿದರು.ಸರಕಾರದ ಹಣ ಗ್ಯಾರಂಟಿ ಯೋಜನೆಗಳಿಗೆ ಹೋಗುತ್ತಿವೆ. ಎಸ್ಸಿ, ಎಸ್ಟಿ ಹಣ ದುರ್ಬಳಕೆಯಾಗಿದೆ. ಪರಿಶಿಷ್ಟರ ಹಣವನ್ನು ದುರ್ಬಳಕೆ ಮಾಡಿಕೊಂಡ ಕಾಂಗ್ರೆಸ್ ನಾಯಕರು ಸಮಾವೇಶದ ಮುಂದಾಳುತ್ವ ವಹಿಸಿದ್ದಾರೆ ಎಂದು ವ್ಯಂಗ್ಯವಾಡಿದರು.
ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಕಳೆದ 8 ತಿಂಗಳಿನಿಂದ ಬಳ್ಳಾರಿಗೆ ಬಂದಿಲ್ಲ. ಜಿಲ್ಲಾ ಸಚಿವರು ಇಲ್ಲದೆ ಜಿಲ್ಲೆಯಲ್ಲಿ ಆಡಳಿತ ನಡೆಯುತ್ತಿರುವುದು ವಿಪರ್ಯಾಸ. ಸಚಿವರನ್ನು ಕರೆ ತರುವ ಕಾಳಜಿ ಈ ಜಿಲ್ಲೆಯ ಯಾವ ಶಾಸಕರಿಗೂ ಬೇಕಾಗಿಲ್ಲ. ಅಭಿವೃದ್ಧಿಯ ಬಗ್ಗೆ ಗಮನ ನೀಡದ ಸರ್ಕಾರ ನಿಲುವುಗಳಿಂದಾಗಿಯೇ ಸಚಿವ ಜಮೀರ್ ಅಹಮದ್ ಜಿಲ್ಲೆಯಿಂದ ದೂರ ಉಳಿದಿದ್ದಾರೆ. ಜಿಲ್ಲಾ ಸಚಿವರನ್ನು ಹುಡುಕಿ ಕೊಡಿ ಎಂದು ಅಭಿಯಾನ ಆರಂಭಿಸಿ, ಹೋರಾಟ ಕೈಗೆತ್ತಿಕೊಳ್ಳಲಿದ್ದೇವೆ. ಕಾಣೆಯಾಗಿದ್ದಾರೆ ಎಂಧು ಎಫ್‌ಆರ್‌ಐ ದಾಖಲು ಮಾಡಿಸುತ್ತೇವೆ ಎಂದು ತಿಳಿಸಿದರು.
ಬಳ್ಳಾರಿ ನಗರ ಶಾಸಕರು ಭ್ರಷ್ಟಾಚಾರ ಮುಕ್ತ ಆಡಳಿತ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ, ಕ್ಷೇತ್ರದಲ್ಲಿ ಭ್ರಷ್ಟಾಚಾರ ಎಲ್ಲಿ ಮುಕ್ತ ಮಾಡಿದ್ದಾರೆ ಎಂಬುದೇ ಗೊತ್ತಾಗುತ್ತಿಲ್ಲ. ಮರಳು ದಂಧೆ, ಪೊಲೀಸ್, ಆರ್‌ಟಿಒಗಳಲ್ಲಿ ಹಣವಿಲ್ಲದೇ ಏನೂ ನಡೆಯುತ್ತಿಲ್ಲ. ಬುಡಾದಲ್ಲಿ ಶೀಥಲ ಸಮರ ನಡೆಯುತ್ತಿದೆ. ರಿಯಲ್ ಎಸ್ಟೇಟ್ ಉದ್ಯಮಿಗಳ ಬಳಿ ಹಣ ಕೀಳಲು ಸಂಚು ನಡೆಯುತ್ತಿದೆ. ಹೀಗಾಗಿ ಉದ್ಯಮಿಗಳು ಆತ್ಮಹತ್ಯೆ ಮಾಡಿಕೊಳ್ಳುವ ಹಂತಕ್ಕೆ ಹೋಗಿದ್ದಾರೆ. ಭ್ರಷ್ಟಾಚಾರ ಮುಕ್ತಗೊಳಿಸುವ ಭರವಸೆ ನೀಡಿದ ಶಾಸಕರು ತಮ್ಮ ಅಧಿಕಾರ ಬಳಸಿ ಯಾವ ಕ್ರಮ ಕೈಗೊಂಡಿದ್ದಾರೆ ಎಂಬುದು ಈವರೆಗೆ ತಿಳಿದು ಬಂದಿಲ್ಲ.
ಕಾಂಗ್ರೆಸ್ ಶಾಸಕರಿಗೇ ಅನುದಾನವಿಲ್ಲ. ವಾಲ್ಮೀಕಿ ನಿಗಮದಲ್ಲಿ ಹಗರಣ ನಡೆಸಿದ ಶಾಸಕರನ್ನೇ ಪಕ್ಕದಲ್ಲಿ ಇಟ್ಟುಕೊಂಡು ಇವರು ಭ್ರಷ್ಟಾಚಾರದ ಸಮಾವೇಶ ಮಾಡಲು ಹೊರಟಿದ್ದಾರೆ. ಜಿಲ್ಲೆಯ ಕಾಂಗ್ರೆಸ್ ಶಾಸಕರು, ಸಂಸದರು ಅಧಿಕಾರಕ್ಕಾಗಿ ಹೊಡೆದಾಡಿದ್ದಾರೆ. ಬಳ್ಳಾರಿಯ ಹಿತಕ್ಕೆ ಏನೂ ಮಾಡಿಲ್ಲ. ಬಳ್ಳಾರಿ ವಿಶ್ವವಿದ್ಯಾಲಯದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಕುಲಪತಿ, ಕುಲಸಚಿವರ ನಡುವೆ ಹೊಂದಾಣಿಕೆ ಇಲ್ಲ. ಹೀಗೆ ಬಳ್ಳಾರಿಯ ಸಮಸ್ಯೆಗಳ ಪಟ್ಟಿ ಮಾಡುತ್ತಾ ಹೋದರೆ ನೂರರ ಅಂಕಿ ದಾಟುತ್ತದೆ. ಆದರೆ, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಹಾಗೂ ಅಭಿವೃದ್ಧಿ ನೆಲೆಯಲ್ಲಿ ಯಾವುದೇ ಕೆಲಸ ಮಾಡದ ಈ ಜಿಲ್ಲೆಯ ಶಾಸಕರು ಹಾಗೂ ರಾಜ್ಯ ಸರ್ಕಾರದ ಈ ಸಮಾವೇಶದಿಂದ ಜನರಿಗೆ ಬಂದ ಲಾಭವೇನು? ಎಂದು ಕೇಳಿದರು.
ಬಿಜೆಪಿ ಮುಖಂಡರಾದ ಬಿ.ಕೆ.ಸುಂದರ್, ಎಸ್.ಗುರುಲಿಂಗನಗೌಡ, ಡಾ.ಅರುಣಾ ಕಾಮಿನೇನಿ, ಕೆ.ಮಲ್ಲೇಶ ಮಲ್ಲೇಶ್ ಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.