ಸಾರಾಂಶ
ಸಮಾಜದ ರೀತಿ- ನೀತಿಗಳಿಗೆ ಕಟ್ಟುಪಾಡುಗಳನ್ನು ವಿಧಿಸಲು ಸಂವಿಧಾನದಲ್ಲಿ ಕೆಲವು ಕಾನೂನುಗಳನ್ನು ರೂಪಿಸಲಾಗಿದೆ. ದೇಶದ ಪ್ರತಿಯೊಬ್ಬರೂ ದೈನಂದಿನ ಜೀವನ ನಡೆಸುವ ಸಲುವಾಗಿ ಆ ಕಾನೂನುಗಳ ಪ್ರಜ್ಞೆ ಹೊಂದಿರಬೇಕು ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಪ್ರಮೀಳಾ ಅವರು ತಿಳಿಸಿದರು.
ಕನ್ನಡಪ್ರಭ ವಾರ್ತೆ ಮಧುಗಿರಿ
ಸಮಾಜದ ರೀತಿ- ನೀತಿಗಳಿಗೆ ಕಟ್ಟುಪಾಡುಗಳನ್ನು ವಿಧಿಸಲು ಸಂವಿಧಾನದಲ್ಲಿ ಕೆಲವು ಕಾನೂನುಗಳನ್ನು ರೂಪಿಸಲಾಗಿದೆ. ದೇಶದ ಪ್ರತಿಯೊಬ್ಬರೂ ದೈನಂದಿನ ಜೀವನ ನಡೆಸುವ ಸಲುವಾಗಿ ಆ ಕಾನೂನುಗಳ ಪ್ರಜ್ಞೆ ಹೊಂದಿರಬೇಕು ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಪ್ರಮೀಳಾ ಅವರು ತಿಳಿಸಿದರು.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಾಷ್ಟ್ರೀಯ ಸೇವಾ ಯೋಜನಾ ಘಟಕ, ಕ್ರೀಡಾ ಸಮಿತಿ, ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಹಾಗೂ ರಾಜ್ಯಶಾಸ್ತ್ರ ವಿಭಾಗದ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಯುವ ದಿನದ ಅಂಗವಾಗಿ ಏರ್ಪಡಿಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯುವಜನಾಂಗವು ಸ್ವಾಮಿ ವಿವೇಕಾನಂದರ ಆದರ್ಶ, ತತ್ವ, ಸಿದ್ಧಾಂತಗಳನ್ನು ಪಾಲಿಸುವ ಮೂಲಕ ಸುಭದ್ರ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗಬೇಕು. ವಿವೇಕಾನಂದರು ನೀಡಿದ ಸಂದೇಶ ಸಾರ್ವಕಾಲಿಕ, ಆ ನಿಟ್ಟಿನಲ್ಲಿ ಕಠಿಣ ಪರಿಶ್ರಮದೊಂದಿಗೆ ಉತ್ತಮ ಗುರಿ ಸಾಧಿಸಿ ಸಮಾಜಕ್ಕೆ ಆಸ್ತಿಯಾಗಬೇಕು ಎಂದು ಕರೆ ನೀಡಿದರು.ವಕೀಲರ ಸಂಘದ ಅಧ್ಯಕ್ಷ ಪಿ.ಸಿ.ಕೃಷ್ಣಾರೆಡ್ಡಿ ಮಾತನಾಡಿ, ಪ್ರತಿಯೊಬ್ಬ ನಾಗರಿಕನೂ ಕಾನೂನು ಶಿಕ್ಷಣ ಪಡೆದು ದೌರ್ಜನ್ಯಗಳಿಂದ ರಕ್ಷಣೆ ಪಡೆದು ಸಮಾಜದಲ್ಲಿ ಗೌರವಯುತ ಜೀವನ ನಡೆಸಲು ಕಾನೂನು ಪಾಲಿಸಿ ಎಂದು ಕರೆ ನೀಡಿದರು.
ವಕೀಲ ಆನಂದ್ ವಿಶೇಷ ಉಪನ್ಯಾಸ ನೀಡುತ್ತಾ, ಲೈಂಗಿಕ ದೌರ್ಜನ್ಯ ,ಕಿರುಕುಳ ಮತ್ತು ಅಶ್ಲೀಲತೆಯ ಅಪರಾಧಗಳಿಂದ ಮಹಿಳೆಯರು, ಮಕ್ಕಳ ರಕ್ಷಣೆಗಾಗಿ ಸದೃಢವಾದ ಕಾನೂನು ಚೌಕಟ್ಟನ್ನು ಒದಗಿಸಲು ಪೋಕ್ಸೋ ಕಾಯ್ದೆ ಬಗ್ಗೆ ವಿದ್ಯಾರ್ಥಿಗಳು ತಿಳಿವಳಿಕೆ ಪಡೆದು ಕಾನೂನಿನ ನೆರವಿನಿಂದ ದೌರ್ಜನ್ಯವನ್ನು ತಡೆಗಟ್ಟಲು ಮುಂದಾಗಿ ಎಂದರು.ಕಾಲೇಜಿನ ಪ್ರಾಂಶುಪಾಲ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದು ಆಧುನಿಕ ಮಾರ್ಗಗಳನ್ನು ಬಳಸಿಕೊಂಡು ಸೈಬರ್ ಪ್ರಕರಣಗಳು ಆರ್ಥಿಕ ಅಪರಾದಗಳ ಸಂಖ್ಯೆ ಹೆಚ್ಚುತ್ತಿದ್ದು, ಇಂತಹ ಪ್ರಕರಣಗಳ ಬಗ್ಗೆ ಜ್ಞಾನ ಪಡೆದು ವಂಚನೆಗಳಿಂದ ಪಾರಾಗಬೇಕು ಮತ್ತು ಇವುಗಳ ಬಗ್ಗೆ ಶ್ರೀಸಾಮಾನ್ಯರಲ್ಲಿ ಅರಿವು ಮೂಡಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ನೌಕರರ ಸಂಘದ ಕಾರ್ಯದರ್ಶಿ ಪ್ರೊ.ಮಂಜುನಾಥ್ ಬಿ., ರಾಷ್ಟ್ರೀಯ ಸೇವಾ ಯೋಜನಾ ಕಾರ್ಯಕ್ರಮಾಧಿಕಾರಿ ಪ್ರೊ.ಲೀಲಾವತಿ ಎಚ್., ಪ್ರಾಧ್ಯಾಪಕರಾದ ಮುರುಳೀಧರ ಕೆ.ಸಂಜೀವಮೂರ್ತಿ , ಡಾ.ರಂಜಿತಾ . ವೇದಲಕ್ಷ್ಮೀ, ರಾಮಮೂರ್ತಿ, ಡಾ.ದುರ್ಗಪ್ಪ, ಯೋಗಿಶ್ ಇದ್ದರು.