ಸಾರಾಂಶ
ಕನ್ನಡಪ್ರಭ ವಾರ್ತೆ, ಶಿರಾಳಕೊಪ್ಪ
ಅಯೋಧ್ಯೆಯಲ್ಲಿ ರಾಮಂದಿರ ಉದ್ಘಾಟನೆ ಹಾಗೂ ಬಾಲರಾಮನ ಪ್ರತಿಷ್ಠಾಪನೆ ನೆರವೇರುತಿದ್ದಂತೆಯೇ ಭಕ್ತರು ಪಟ್ಟಣದ ರಾಮದೇವರ ದೇವಸ್ಥಾನದಲ್ಲಿ ವಿವಿಧ ಪೂಜೆ, ಪಟ್ಟಣದ ವಿವಿಧ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ಇದರಿಂದ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಈ ಸಂದರ್ಭ ಪ್ರಸಾದ ವಿನಿಯೋಗ ನಡೆಯಿತು.ಪಟ್ಟಣದ ಸಂತೆ ಮೈದಾನದ ರಾಮದೇವರ ಬೀದಿಯ ರಾಮಂದಿರದಲ್ಲಿ ವಿಶೇಷ ಅಲಂಕಾರದಿಂದ ಪೂಜೆ ನಡೆಸಲಾಯಿತು. ಬೆಳಗ್ಗೆ ಹೊಂಡದ ಆಂಜನೇಯಸ್ವಾಮಿ ದೇವಾಲಯ ಬಳಿ ಭಾರಿ ಸಂಖ್ಯೆಯಲ್ಲಿ ರಾಮಭಕ್ತರು ಪಾಲ್ಗೊಂಡಿದ್ದರು. ನೂರಾರು ಮಂದಿ ಕೇಸರಿ ಬಣ್ಣದ ಸೀರಿ, ಶಾಲು ಹೊದ್ದು ಕುಂಭ, ಆರತಿ ತಟ್ಟೆಯೊಂದಿಗೆ ರಾಮದೇವರ ಉತ್ಸವ ಮೂರ್ತಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಪುಟ್ಟಮಕ್ಕಳು ಜೈ ಶ್ರೀರಾಮ ಘೋಷಣೆ ಕೂಗುತ್ತಿದ್ದರು. ರಾಮ, ಸೀತೆ, ಲಕ್ಷ್ಮಣ, ಆಂಜನೇಯನ ವೇಷಹಾಕಿ ಮೆರವಣಿಗೆಗೆ ವಿಶೇಷ ಮೆರಗನ್ನು ತಂದರು.
ವಿಶೇಷವೆಂದರೆ, ಆಂಜನೇಯ ದೇವಸ್ಥಾನದಿಂದ ಪ್ರಾರಂಭವಾದ ಮೆರವಣಿಗೆಯಲ್ಲಿ ಆಕಳು ಕರುವೊಂದು ಮೆರವಣಿಗೆಯಲ್ಲಿ ಬಂದು ನಂತರ ಭಜನೆ ಪೂಜೆ ಮಾಡುವವರೆಗೂ ಜೊತೆಯಲ್ಲಿದ್ದು, ಎಲ್ಲರೂ ಆಶ್ಚರ್ಯಪಡುವಂತೆ ಮಾಡಿತು. ಅನಂತರ ಮೆರವಣಿಗೆ ರಾಮ ದೇವಸ್ಥಾನಕ್ಕೆ ಆಗಮಿಸಿತು.ಅನಂತರ ಮಹಿಳೆಯರು ರಾಮದೇವರ ಭಜನೆ ಮಾಡಿದರು. ಭಕ್ತರು ಚಪ್ಪಾಳೆ ತಟ್ಟುತ್ತಾ ಭಜನೆ ಮಾಡಿ, ಸಂತಸಪಟ್ಟರು. ಶ್ರೀರಾಮ ಪ್ರತಿಷ್ಠಾಪನೆ ಹಿನ್ನೆಲೆ ರಾಮದೇವರಿಗೆ ವಿಶೇಷ ಅಲಂಕಾರ ಮಾಡಿ, ಪೂಜೆ ಸಲ್ಲಿಸಲಾಯಿತು. ಅನಂತರ ಆಗಮಿಸಿದ ಭಕ್ತರಿಗೆ ವಿಶೇಷ ಪ್ರಸಾದ ವಿತರಿಸಲಾಯಿತು.
ಪಟ್ಟಣದ ಕೆಳಗಿನ ಕೇರಿ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ರುದ್ರಾಭಿಷೇಕ, ವಿಶೇಷ ಅಲಂಕಾರ ಮಾಡಿ ಪೂಜೆಸಲ್ಲಿಸಲಾಯಿತು.ಹತ್ತಿರದ ಆಂಜನೇಯ ಸ್ವಾಮಿಗೆ ವಿಶೇಷ ಕುಂಕುಮ ಪೂಜೆ,ವಿಶೇಷ ಅಲಂಕಾರ ಮಾಡಿ ಪ್ರಸಾದ ವಿನಿಯೋಗಿಸಲಾಯಿತು. ವರ್ತಕರು 22ರಂದು ಸೋಮವಾರ ವ್ಯವಹಾರವನ್ನು ಸಂಪೂರ್ಣ ಬಂದ್ ಮಾಡಿ, ಬಸ್ ನಿಲ್ದಾಣ ವೃತ್ತದ ಬಳಿ ಪೂಜೆ ಸಲ್ಲಿಸಿ, ರಾಮೋತ್ಸವದಲ್ಲಿ ಪಾಲ್ಗೊಂಡರು. ಪ್ರಸಾದ ವಿತರಿಸಲಾಯಿತು.ಕಾರ್ಯಕ್ರಮ ನೇತೃತ್ವವನ್ನು ಆದಿತ್ಯ ಗ್ಯಾಸ್ ಏಜೆನ್ಸಿ ಮಾಲೀಕ ಅಗಡಿ ಅಶೋಕ, ಚೆನ್ನವೀರಶೆಟ್ಟಿ, ಪವನ್ ಕಲಾಲ್ ಪಂಪಹೌಸ್ ಮಂಜು, ಮಲ್ಲಿಕ್ ಕಲಾಲ್, ಚಂದ್ರಶೇಖರ ಮಂಚಾಲಿ, ಅಗಡಿ ಆದಿತ್ಯ, ನಾಗೇಂದ್ರ, ಗೌರಮ್ಮ ಅಗಡಿ, ನಿವೇದಿತಾ ರಾಜು, ಆಶಾ ಮಂಜುನಾಥ, ವಸಂತಮ್ಮ ಸೇರಿದಂತೆ ಹಲವಾರು ಪ್ರಮುಖರು ಪಾಲ್ಗೊಂಡಿದ್ದರು.
- - --22ಕೆ.ಎಸ್ ಎಚ್ಆರ್1: ಶಿರಾಳಕೊಪ್ಪ ಪಟ್ಟಣದಲ್ಲಿ ಅಯೋಧ್ಯೆ ಶ್ರೀರಾಮ ಮಂದಿರ ಪ್ರತಿಷ್ಠಾಪನೆ ಅಂಗವಾಗಿ ಪಟ್ಟಣದಲ್ಲಿ ರಾಮದೇವರ ಮೆರವಣಿಗೆ ನಡೆಸಲಾಯಿತು.