ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿಯಿರುವ ನೇರ ಪಾವತಿ ಪೌರಕಾರ್ಮಿಕರ ಹುದ್ದೆಗಳ ಆಯ್ಕೆಯಲ್ಲಿ ಪೌರ ವಾಹನ ಚಾಲಕರು ಹಾಗೂ ಸ್ಯಾನಿಟರಿ ಸೂಪರ್‌ವೈಸರ್‌ಗಳನ್ನು ಪರಿಗಣಿಸಬೇಕು.
ಹುಬ್ಬಳ್ಳಿ:
ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿಯಿರುವ ನೇರ ಪಾವತಿ ಪೌರಕಾರ್ಮಿಕರ ಹುದ್ದೆಗಳ ಆಯ್ಕೆಯಲ್ಲಿ ಪೌರ ವಾಹನ ಚಾಲಕರು ಹಾಗೂ ಸ್ಯಾನಿಟರಿ ಸೂಪರ್‌ವೈಸರ್‌ಗಳನ್ನು ಪರಿಗಣಿಸಬೇಕು. ಈ ಕುರಿತು ಪಾಲಿಕೆ ಆಯುಕ್ತರು ಕ್ರಮಕೈಗೊಳ್ಳಬೇಕು ಎಂದು ಬುಧವಾರ ಕರ್ನಾಟಕ ಪ್ರಗತಿಪರ ತ್ಯಾಜ್ಯ ಸಾಗಿಸುವ ವಾಹನ ಚಾಲಕರ ಮತ್ತು ಸಹಾಯಕರ ಸಂಘದ ಸದಸ್ಯರು(ಎಐಸಿಸಿಟಿಯು) ಮನವಿ ಮಾಡಿದರು.ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಕಳೆದ 8-10 ವರ್ಷಗಳಿಂದ ಘನತ್ಯಾಜ್ಯ ಸಾಗಿಸುವ ವಾಹನ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದು, ಕೋವಿಡ್ ಅವಧಿಯಲ್ಲೂ ರಜೆ ಪಡೆಯದೆ ಕರ್ತವ್ಯ ನಿರ್ವಹಿಸಿದ್ದೇವೆ. ಆದರೆ, ಸರ್ಕಾರದ ವಿವಿಧ ಆದೇಶಗಳಿದ್ದರೂ ಚಾಲಕರಿಗೆ ಅಗತ್ಯ ಮೂಲಸೌಕರ್ಯ ಹಾಗೂ ಸೌಲಭ್ಯಗಳನ್ನು ಕಲ್ಪಿಸಲಾಗಿಲ್ಲ ಎಂದು ಆರೋಪಿಸಿದರು.
ಪೌರ ವಾಹನ ಚಾಲಕರಿಗೆ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ ಜಾರಿಗೊಳಿಸಬೇಕು. ಪೌರಕಾರ್ಮಿಕರಿಗೆ ನೀಡುತ್ತಿರುವ ಉಪಹಾರ ಹಾಗೂ ಸಂಕಷ್ಟ ಭತ್ಯೆಯನ್ನು ಚಾಲಕರಿಗೂ ನೀಡಬೇಕು. ಅಪಘಾತ ಸಂದರ್ಭದಲ್ಲಿ ಚಾಲಕರಿಗೆ ₹20 ಲಕ್ಷದ ವಿಮಾ ಸೌಲಭ್ಯ ಕಲ್ಪಿಸಬೇಕು. ಹೈಕೋರ್ಟ್ ಆದೇಶದಂತೆ ಹೆಚ್ಚುವರಿ ವೇತನದ ಸೌಲಭ್ಯವನ್ನೂ ಜಾರಿಗೊಳಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.ಈ ಬೇಡಿಕೆಗಳನ್ನು ಶೀಘ್ರ ಈಡೇರಿಸದಿದ್ದರೆ ಘನತ್ಯಾಜ್ಯ ಸಾಗಿಸುವ ವಾಹನಗಳ ಸಂಚಾರ ಸ್ಥಗಿತಗೊಳಿಸಿ ಮಹಾನಗರ ಪಾಲಿಕೆ ಎದುರು ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಸಂಘದ ಅಧ್ಯಕ್ಷ ಚಂದ್ರಶೇಖರ ಶಿರಗುಂಪಿ, ಮಂಜುನಾಥ, ಮೈಲಾರಿ ದೊಡ್ಡಮನಿ, ಮಹೇಶ ಕದಂ, ದುರ್ಗೇಶ ಮಾಳಗಿಮನಿ, ಉಮೇಳ ಮಾಡೊಳ್ಳಿ ಸೇರಿದಂತೆ ಹಲವರಿದ್ದರು.