‘ಮೊದಲ ಹಂತದ ಸಂಪುಟ ರಚನೆ ವೇಳೆ ಆಡಿಯೋ ಬಿಡುಗಡೆ ಆಗಿ ನನಗೆ ಹಿನ್ನಡೆ ಆಯಿತು. ಎರಡನೇ ಪಟ್ಟಿಯಲ್ಲಿ ಅವಕಾಶ ಸಿಗುವ ನಿರೀಕ್ಷೆಯಿದೆ. ದಾವಣಗೆರೆ ಚುನಾವಣೆ ವಿಷಯದಲ್ಲಿ ನನ್ನಿಂದ ತಪ್ಪಾಗಿದ್ದರೆ ಕ್ಷಮಿಸಿ ಎಂದು ಎಲ್ಲಾ ನಾಯಕರಲ್ಲೂ ಕ್ಷಮೆ ಕೇಳಿದ್ದೇನೆ’ ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ, ಬೆಂಗಳೂರು
‘ಮೊದಲ ಹಂತದ ಸಂಪುಟ ರಚನೆ ವೇಳೆ ಆಡಿಯೋ ಬಿಡುಗಡೆ ಆಗಿ ನನಗೆ ಹಿನ್ನಡೆ ಆಯಿತು. ಎರಡನೇ ಪಟ್ಟಿಯಲ್ಲಿ ಅವಕಾಶ ಸಿಗುವ ನಿರೀಕ್ಷೆಯಿದೆ. ದಾವಣಗೆರೆ ಚುನಾವಣೆ ವಿಷಯದಲ್ಲಿ ನನ್ನಿಂದ ತಪ್ಪಾಗಿದ್ದರೆ ಕ್ಷಮಿಸಿ ಎಂದು ಎಲ್ಲಾ ನಾಯಕರಲ್ಲೂ ಕ್ಷಮೆ ಕೇಳಿದ್ದೇನೆ’ ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.ಸಚಿವ ಸಂಪುಟ ವಿಸ್ತರಣೆ ಸಮಯದಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ‘ನನ್ನ ಸಚಿವ ಸ್ಥಾನ ತಪ್ಪಿಸಲು ಎಐ ಆಡಿಯೋ ಸೃಷ್ಟಿಸಿ ಬಿಡುಗಡೆ ಮಾಡಿದರು. ಅದನ್ನು ಮಾಡಿದವರು ನಮ್ಮವರೇ (ಅಲ್ಪಸಂಖ್ಯಾತರು) ಅವರು ತಣ್ಣಗೆ ಇರಲಿ. ಸಂಪುಟ ವಿಸ್ತರಣೆ ಪಟ್ಟಿಯಲ್ಲಿ ನನಗೆ ಅವಕಾಶ ದೊರೆಯುವ ನಿರೀಕ್ಷೆಯಿದೆ. ದೊರೆಯದಿದ್ದರೂ ಪರವಾಗಿಲ್ಲ, ನಾನು ಪಕ್ಷ ತೊರೆಯುವುದಿಲ್ಲ’ ಎಂದಿದ್ದಾರೆ.
ದಾವಣಗೆರೆ ಚುನಾವಣೆ ವಿಷಯದಲ್ಲಿ ನಾನು ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದೇನೆ ಎಂದು ಸಿದ್ದರಾಮಯ್ಯ ಅವರ ತಲೆಗೆ ತುಂಬಿಬಿಟ್ಟಿದ್ದಾರೆ. ಹೀಗಾಗಿ ಅವರು ನನ್ನ ಬಗ್ಗೆ ಅಸಮಾಧಾನದಿಂದ ಮಾತನಾಡಿದ್ದರು. ನಾನು ಸಿದ್ದರಾಮಯ್ಯ ಅವರ ಬಳಿ ನಾನು ತಪ್ಪು ಮಾಡಿಲ್ಲ, ದಾವಣಗೆರೆ ವಿಷಯದಲ್ಲಿ ತಪ್ಪಾಗಿದ್ದರೆ ಕ್ಷಮಿಸಿ ಎಂದು ಕ್ಷಮೆ ಕೋರಿದ್ದೇನೆ ಎಂದು ಹೇಳಿದರು.ಅಷ್ಟೇ ಅಲ್ಲ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ಅವರ ಬಳಿಯೂ ಕ್ಷಮೆ ಕೇಳಿದ್ದೇನೆ ಎಂದು ಹೇಳಿದರು.
ದಾವಣಗೆರೆ ಉಪಚುನಾವಣೆ ವಿಚಾರಕ್ಕೆ ಅಪಪ್ರಚಾರ ಮಾಡಿದ್ದಾರೆ. ಮುಸ್ಲಿಂ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದು ನಿಜ. ಆದರೆ ಪಕ್ಷ ಶಾಮನೂರು ಶಿವಶಂಕರಪ್ಪ ಅವರ ಕುಟುಂಬಕ್ಕೆ ನೀಡಲು ತೀರ್ಮಾನಿಸದ ಬಳಿಕ ನಾನು ಕೆಲಸ ಮಾಡಿದ್ದೇನೆ.ಎಸ್.ಎಸ್.ಮಲ್ಲಿಕಾರ್ಜುನ ಅವರೇ ಜಮೀರ್ ಬರಬೇಕಿಲ್ಲ, ಅವರಿಗೆ ಇಲ್ಲೇನು ಕೆಲಸ ಎಂದಿದ್ದರು. ಆದರೂ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಹೋಗಿ ಸುದ್ದಿಗೋಷ್ಠಿ ನಡೆಸಿ ರೋಡ್ ಶೋ ನಡೆಸಿದ್ದೆ. ಆದರೂ ಸಂಪುಟ ರಚನೆ ಚರ್ಚೆಗೆ ಹೋಗುವ ದಿನ ಆಡಿಯೋ ಬಿಡುಗಡೆ ಮಾಡಿ ನನ್ನ ವಿರುದ್ಧ ಪಿತೂರಿ ಮಾಡಿದರು ಎಂದು ಜಮೀರ್ ದೂರಿದರು.