ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಶ್ರೀ ಲಕ್ಷ್ಮೀನರಸಿಂಹಸ್ವಾಮಿ ರಥೋತ್ಸವದ ಹಿಂದಿನ ದಿನ ವ್ಯವಸ್ಥಿತವಾಗಿ ಗೊಂದಲ ಸೃಷ್ಠಿಸಿದ್ದರು. ಘಟನೆ ಸಂಬಂಧ ಎಸಿ, ತಹಸೀಲ್ದಾರ್ ಅವರು ೧೪೪ ಸೆಕ್ಷನ್ ಜಾರಿ ಮಾಡಲು ಲಿಖಿತದಲ್ಲಿ ನೀಡಿದ್ದಾರೆ ಮತ್ತು ಲಾಠಿ ಚಾರ್ಜ್ ಮಾಡಿಸಿ, ರಥೋತ್ಸವ ನಿಲ್ಲಿಸುವ ಜತೆಗೆ ನನ್ನ ಮರ್ಯಾದೆ ತೆಗೆಯುವ ಸಂಚು ರೂಪಿಸಿದ್ದರು. ಆದರೆ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ರಥೋತ್ಸವ ಸುಸೂತ್ರವಾಗಿ ನಡೆಯಲಿ ಎಂದು ಅನಿವಾರ್ಯವಾಗಿ ಹೂವಿನ ಅಲಂಕಾರಕ್ಕೆ ಒಪ್ಪಬೇಕಾಯಿತು ಎಂದು ಶಾಸಕ ಎಚ್.ಡಿ. ರೇವಣ್ಣ ತಿಳಿಸಿದರು. ಪಟ್ಟಣದ ತಮ್ಮ ನಿವಾಸದಲ್ಲಿ ಗುರುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಹಿಂದಿನ ವರ್ಷಗಳಲ್ಲಿ ೨೦ ಸಾವಿರಕ್ಕೂ ಹೆಚ್ಚು ಜನರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗುತ್ತಿತ್ತು. ಅದು ಬೇಡ ಎಂದು ಎರಡು ವರ್ಷದ ಹಿಂದೆ ಹೇಳಿದರು, ರಥೋತ್ಸವ ಹಾಗೂ ಜನರಿಗೆ ತೊಂದರೆ ಆಗಬಾರದೆಂದು ಒಪ್ಪಿಕೊಂಡಿದ್ದೆ. ಪೂರ್ವಭಾವಿ ಸಭೆಯಲ್ಲಿ ರಥಕ್ಕೆ ಮುಂದಿನ ವರ್ಷ ಹೊಸ ಬಟ್ಟೆ ತೊಡಿಸಲು ತೀರ್ಮಾನಿಸಲಾಗಿತ್ತು. ಆದರೆ ತಾಲೂಕಿನ ಶಾಸಕರ ಗಮನಕ್ಕೆ ಬಾರದೇ ರಥಕ್ಕೆ ತೊಡಿಸಿದ್ದ ಬಟ್ಟೆಯನ್ನು ತಹಸೀಲ್ದಾರ್ ಸೋಮವಾರ ಏಕೆ ತೆಗೆಯಲು ಹೋದರು ಮತ್ತು ಹೂವಿನ ಅಲಂಕಾರಕ್ಕೆ ಸಲಹೆ ನೀಡಿದವರು ಯಾರು? ಡಿಸಿ ನೀಡಿದ್ದರೇ ನನ್ನ ಗಮನಕ್ಕೆ ತರಬೇಕಲ್ವ. ಶ್ರೀ ಲಕ್ಷ್ಮೀ ನರಸಿಂಹಸ್ವಾಮಿಯ ಬ್ರಹ್ಮರಥಕ್ಕೆ ಬಟ್ಟೆ ತೊಡಿಸುವ ವಿಚಾರದಲ್ಲಿ ಗೊಂದಲ ಸೃಷ್ಠಿಯಾಗಿ ರಥೋತ್ಸವ ನಿಲ್ಲಬಾರದೆಂದು ಸೋಮವಾರ ರಾತ್ರಿ ೧೦ ಗಂಟೆ ಸುಮಾರಿನಲ್ಲಿ ಹೂವಿನ ಅಲಂಕಾರಕ್ಕೆ ಒಪ್ಪಿಗೆ ನೀಡಲಾಯಿತು. ರಥಕ್ಕೆ ಹೂವಿನ ಅಲಂಕಾರಕ್ಕೆ ಅಗತ್ಯದಷ್ಟು ಹೂವೇ ಇರಲಿಲ್ಲಾರೀ, ನಮ್ಮ ಹುಡುಗರು ಫೋನ್ ಮಾಡಿ ತಿಳಿಸಿದ ನಂತರ ನಾನು ಬೆಂಗಳೂರಿನಿಂದ ೫೦ ಸಾವಿರ ರು. ನೀಡಿ, ಹೂ ತರಿಸಿಕೊಟ್ಟು ರಥಕ್ಕೆ ಅಲಂಕಾರ ಮಾಡಿಸಬೇಕಾಯಿತು. ಆದರೆ ಜನರ ಮನದಲ್ಲಿ ನಮ್ಮನ್ನು ಕೆಟ್ಟವರನ್ನಾಗಿ ಬಿಂಭಿಸುವ ಹುನ್ನಾರ ನಡೆಯುತ್ತಿದೆ ಎಂದು ಶಾಸಕ ಎಚ್. ಡಿ. ರೇವಣ್ಣ ಬೇಸರ ವ್ಯಕ್ತಪಡಿಸಿದರು. ೧೯೮೯ ಮತ್ತು ೧೯೯೯ರಲ್ಲಿ ತಾಲೂಕಿನಲ್ಲಿ ಎರಡು ಅವಧಿಯಲ್ಲಿ ಕಾಂಗ್ರೆಸ್ ಆಡಳಿತದಲ್ಲಿ ಮತ್ತು ೨೦೨೪ರಲ್ಲಿ ಗೆದ್ದ ಕಾಂಗ್ರೆಸ್ ಸಂಸದರು ೨೦೨೫ನೇ ಸಾಲಿನಲ್ಲಿ ರಥಕ್ಕೆ ಹೊಸ ಬಟ್ಟೆ ತೊಡಿಸಲು ತಿಳಿಸದೇ ಈ ವರ್ಷ ಏಕೆ ಪ್ರಸ್ತಾಪಿಸಿದ್ದಾರೆ ಎಂಬ ಪ್ರಶ್ನೆಗೆ ಮಾತನಾಡಿ ಏಕೆ ಹೀಗೆ ಅಂತ ಗೊತ್ತಿಲ್ಲ, ಅವರು ತಿಳಿಸಿರುವಂತೆ ೨ ಲಕ್ಷ ರು. ಕೊಟ್ಟಿರುವ ವಿಚಾರ ನನಗೆ ಗೊತ್ತಿಲ್ಲ ಮತ್ತು ಪೂರ್ವಭಾವಿ ಸಭೆಯಲ್ಲೂ ಹೇಳಿಲ್ಲ, ನಮ್ಮೂರ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿಯ ರಥೋತ್ಸವ ವೈಭವದಿಂದ ನಡೆಯುತ್ತಿತ್ತು, ಆದರೆ ಈ ಸಲ ಹೂವಿನ ಅಲಂಕಾರದಿಂದಾಗಿ ರಥ ಖಾಲಿಖಾಲಿಯಾಗಿದೆ ಎಂದು ಬೇಸರದಿಂದ ನುಡಿದು, ರಥ ನಿರ್ಮಾಣಕ್ಕೆ ೧.೨೦ ಲಕ್ಷ ರು. ಖರ್ಚು ತೋರಿಸುತ್ತಾರೆ, ಆದರೆ ರಥ ನಿರ್ಮಾಣ ಕಾರ್ಯಕ್ಕೆ ಪ್ರತಿದಿನ ೧೦ ಪೌರ ಕಾರ್ಮಿಕರನ್ನು ಬಳಸಿಕೊಂಡು ನಿರ್ಮಾಣ ಮಾಡುವ ರಥಕ್ಕೆ ೧.೨೦ ಲಕ್ಷ ರು. ಖರ್ಚು ಏಕೆ ಎಂದು ಪ್ರಶ್ನಿಸಿ, ಇದು ಇಂದಿನ ವ್ಯವಸ್ಥೆ ಎಂದರು.ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲದೇ ಘೋಷಿತ ಯೋಜನೆಗಳು ಸಹ ನಿಂತಿದೆ. ಇಂತಹ ಪರಿಸ್ಥಿತಿಯಲ್ಲಿ ನಾವು ಏನು ಮಾಡಲು ಸಾಧ್ಯ. ಆಡಳಿತ ಸಂಪೂರ್ಣ ಕುಸಿದಿದೆ ಎಂದು ಆಕ್ರೋಶದಿಂದ ನುಡಿದರು.====ಫೋಟೊ ೨ : ಶಾಸಕ ಎಚ್.ಡಿ.ರೇವಣ್ಣ.