ಭಾರತದಲ್ಲಿ ಅರಾಜಕತೆ ಸೃಷ್ಟಿ ಮಾಡಲು ಇಂಡಿ ಒಕ್ಕೂಟದ ಪ್ರಯತ್ನ ನಡೆದಿದೆ. ಇದು ಸಂವಿಧಾನ ಬದ್ಧವಾಗಿ ಚುನಾವಣೆಯಲ್ಲಿ ಗೆಲ್ಲಲಾಗದವರ ಒಕ್ಕೂಟ ಎಂದು ಟೀಕಿಸಿದ ಅವರು, ಹಿಂದಿನ ಯುಪಿಎ ಸರ್ಕಾರ ಹಗರಣಗಳ ಸರ್ಕಾರವಾಗಿತ್ತು. ಇವರಿಗೆ ಪ್ರಜಾಪ್ರಭುತ್ವ ಬೇಡ; ಅರಾಜಕತೆಯೇ ಬೇಕಿದೆ.
ಕನ್ನಡಪ್ರಭ ವಾರ್ತೆ ಮೈಸೂರು
ಭಾರತದ ಸಂವಿಧಾನಕ್ಕೆ ಅಪಚಾರ ಮಾಡುವ ಹಾಗೂ ಅರಾಜಕತೆಯ ಷಡ್ಯಂತ್ರ ನಡೆಯುತ್ತಿದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಆಕ್ಷೇಪಿಸಿದರು.ನಗರದ ಪುರಭವನ ಆವರಣದಲ್ಲಿ ಶುಕ್ರವಾರ ನಡೆದ ‘ಪ್ರಜಾಪ್ರಭುತ್ವ ಉಳಿಸಿ ಅರಾಜಕತೆ ಅಳಿಸಿ - ಪಾದಯಾತ್ರೆ’ ಸಂದರ್ಭದಲ್ಲಿ ಅವರು ಮಾತನಾಡಿದರು. ಎಸ್ಐಕಆರ್ ವೇಳೆ 13 ಕೋಟಿ ಜನರ ಹೆಸರು ಮತಪಟ್ಟಿಯಿಂದ ತೆಗೆಯಲಾಗಿದೆ. ಸ್ಥಳಾಂತರ ಹೊಂದಿದವರು, ಮೃತರು, ನಕಲಿ ಮತದಾರರನ್ನು ಕೈಬಿಡಲಾಗಿದೆ. ಈ ಸ್ಪಷ್ಟ ಮಾಹಿತಿ ಇದ್ದರೂ ಬೇಕೆಂದೇ ನಾಟಕ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಭಾರತದಲ್ಲಿ ಅರಾಜಕತೆ ಸೃಷ್ಟಿ ಮಾಡಲು ಇಂಡಿ ಒಕ್ಕೂಟದ ಪ್ರಯತ್ನ ನಡೆದಿದೆ. ಇದು ಸಂವಿಧಾನ ಬದ್ಧವಾಗಿ ಚುನಾವಣೆಯಲ್ಲಿ ಗೆಲ್ಲಲಾಗದವರ ಒಕ್ಕೂಟ ಎಂದು ಟೀಕಿಸಿದ ಅವರು, ಹಿಂದಿನ ಯುಪಿಎ ಸರ್ಕಾರ ಹಗರಣಗಳ ಸರ್ಕಾರವಾಗಿತ್ತು. ಇವರಿಗೆ ಪ್ರಜಾಪ್ರಭುತ್ವ ಬೇಡ; ಅರಾಜಕತೆಯೇ ಬೇಕಿದೆ ಎಂದು ದೂರಿದರು.ಕಾಂಗ್ರೆಸ್ಸಿನವರು ಅರಾಜಕತೆಯ ವಕ್ತಾರರು. ಕೇಂದ್ರದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಇಲ್ಲಿಯೂ ಎನ್ಡಿಎ ಸರ್ಕಾರ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಸಂಸದ ಪ್ರತಾಪಸಿಂಹ ಮಾತನಾಡಿ, ವಂದೇ ಮಾತರಂ ಗೀತೆಯನ್ನು ಪೂರ್ಣವಾಗಿ ಹಾಡಬೇಕೆಂಬ ಗೊತ್ತುವಳಿಯನ್ನು ಕೇಂದ್ರ ಸರ್ಕಾರ ಅಂಗೀಕರಿಸಿದಾಗ ಅದನ್ನು ಕಾಂಗ್ರೆಸ್ ವಿರೋಧಿಸಿತ್ತು. ದುರ್ಗೆ, ಲಕ್ಷ್ಮೀ ಮತ್ತು ಸರಸ್ವತಿಯ ಪ್ರಸ್ತಾಪ ಬರುತ್ತದೆ ಎಂಬ ಕಾರಣಕ್ಕೆ ವಿರೋಧಿಸಿದರು. ಅಂತವರು ಎಸ್ಐಆರ್ ವಿರೋಧಿಸುವುದರಲ್ಲಿ ಆಶ್ಚರ್ಯವಿಲ್ಲ. ಈ ಮುಂಚೆ ಕೇಂದ್ರದಲ್ಲಿ ಸಮ್ಮಿಶ್ರ ಸರ್ಕಾರಗಳು ಆಡಳಿತ ನಡೆಸಿವೆ. ಅಂತಹ ಹಂಗು ಬೇಡ ಎಂದು ಜನತೆ ಕಳೆದ ಮೂರು ಬಾರಿಯಿಂದ ಬಿಜೆಪಿಗೆ ಬಹುಮತ ನೀಡುತ್ತ ಬಂದಿದ್ದಾರೆ ಎಂದರು.ಇದನ್ನು ಸಹಿಸದವರು ಮೊದಲಿಗೆ ಅಸಹಿಷ್ಣುತೆ ಹೆಸರಿನಲ್ಲಿ ಪ್ರಶಸ್ತಿಗಳನ್ನು ಹಿಂದಿರುಗಿಸಿದರು, ನಂತರ ಭೂ ಸ್ವಾಧೀನ ಕಾಯ್ದೆ, ಅಪನಗೀಧರಣ ವಿರೋಧಿಸಿದರೂ, ಆದರೂ ಉತ್ತರ ಪ್ರದೇಶದಲ್ಲಿ ಜನ ಬಿಜೆಪಿಗೆ ಅಧಿಕಾರ ನೀಡಿದಾಗ ಕಾಂಗ್ರೆಸ್ ನವರು ಬಾಯಿ ಮುಚ್ಚಿದ್ದಾಗಿ ಟೀಕಿಸಿದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್ ಮಾತನಾಡಿ, ಮತದಾರರ ಪಟ್ಟಿಯಲ್ಲಿ ಯಾರ ಯಾರ ಹೆಸರು ಎರಡೆರಡು ಕಡೆ ಇದೆಯೋ ಅಲ್ಲಿ ಡಿಲಿಟ್ ಆಗಿದೆ. ಎಲ್ಲಾ ಕಡೆ ಡಿಲಿಟ್ಆಗಿದ್ದರೆ ನಿಮ್ಮ ಬಿಎಲ್ಒಗೆ ಅರ್ಜಿ ನೀಡಿದರೆ ಪರಿಶೀಲಿಸಿ ಸೇರಿಸುತ್ತಾರೆ. ಅದನ್ನು ಬಿಟ್ಟು ಜಂತರ್ ಮಂತರ್, ಫ್ರೀಡಂ ಪಾರ್ಕ್ ನಲ್ಲಿ ಕುಳಿತರೆ ಪ್ರಯೋಜನವಿಲ್ಲ. ಅದು ಮತಗಟ್ಟೆ ಅಲ್ಲ ಎಂದರು.ಸೋತು ಸೋತು ಸುಣ್ಣವಾದ ಕಾಂಗ್ರೆಸ್ ನವರು ದೇಶದಲ್ಲಿ ಅರಾಜಕತೆ ಸೃಷ್ಟಿಸುತ್ತಿದ್ದಾರೆ. ಸಂವಿಧಾನ ರಚನಾ ಸಮಿತಿಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಕೊನೆಯ ಭಾಷಣವನ್ನು ಕೇಳದವರಿಗೆ ಜೈ ಭೀಮ್ ಎನ್ನುವ ಹಕ್ಕು ಇಲ್ಲ ಎಂದು ಅವರು ಟೀಕಿಸಿದರು.
ಮಾಜಿ ಸಭಾಪತಿ ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ ಸದಸ್ಯ ರಘು ಕೌಟಿಲ್ಯ ಮಾತನಾಡಿದರು.ಮೆರವಣಿಗೆ:
ನಗರದ ಪುರಭವನದಿಂದ ಆರಂಭವಾದ ಮೆರವಣಿಗೆಗೆ ಬಿ.ವೈ. ವಿಜಯೇಂದ್ರ ಅವರು ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಚಾಲನೆ ನೀಡಿದರು. ಮೆರವಣಿಗೆಯು ದೊಡ್ಡಗಡಿಯಾರ , ಗಾಂಧಿ ಚೌಕ, ಕೆ.ಟಿ. ಸ್ಟ್ರೀಟ್, ಇರ್ವಿನ್ ರಸ್ತೆ, ನೆಹರು ವೃತ್ತ, ಅಶೋಕ ರಸ್ತೆಯ ಮೂಲಕ ಮತ್ತೆ ಪುರಭವನ ತಲುಪಿತು.ಪ್ರತಾಪ ಸಿಂಹಗೆ ಸ್ವಾಗತಿಸಲು ಒತ್ತಾಯ
ವೇದಿಕೆ ಕಾರ್ಯಕ್ರಮ ನಡೆಯುತ್ತಿರುವಾಗ ಬಿಜೆಪಿ ನಗರಾಧ್ಯಕ್ಷ ಎಲ್. ನಾಗೇಂದ್ರ ಸ್ವಾಗತಿಸಲು ಮುಂದಾದರು. ಈ ವೇಳೆ ಸ್ವಾಗತ ಭಾಷಣದ ಮಧ್ಯದಲ್ಲಿಯೇ ಪ್ರತಾಪ ಸಿಂಹ ಅವರನ್ನು ಸ್ವಾಗತಿಸುವಂತೆ ಕಾರ್ಯಕರ್ತನೋರ್ವ ಮುಗಿಬಿದ್ದ.ಪಕ್ಷದ ರಾಜ್ಯಾಧ್ಯಕ್ಷರ ಸಮ್ಮುಖದಲ್ಲಿಯೇ ಈ ಘಟನೆ ಕೆಲಾಕಲ ಗೊಂದಲದ ವಾತಾವರಣ ಸೃಷ್ಟಿಸಿತು. ಬಳಿಕ ಪೊಲೀಸರು ಆತನನ್ನು ಪಕ್ಕಕ್ಕೆ ಕರೆದೊಯ್ದರು. ಆಗ ನಾಗೇಂದ್ರ ಪ್ರತಾಪ ಸಿಂಹಗೆ ಸ್ವಾಗತಿಸಿದರು. ಬಳಿಕ ಉಳಿದ ಅನೇಕರನ್ನು ಸ್ವಾಗತಿಸಿದರು.