ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ರಾಜ್ಯ ಕಾಂಗ್ರೆಸ್ ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಸಂಚು ರೂಪಿಸಿವೆ ಎಂದು ಆರೋಪಿಸಿರುವ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕ, ಎರಡೂ ಪಕ್ಷಗಳನ್ನು ಕಾನೂನಿನ ಚೌಕಟ್ಟಿನಡಿ ನಿಯಂತ್ರಿಸುವಂತೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದೆ.ಸಮಿತಿ ಜಿಲ್ಲಾ ಸಂಯೋಜಕ ಜೆ.ಆರ್.ಪಾಲಾಕ್ಷ ಮಾತನಾಡಿ, ಜನಬಲ ಮತ್ತು ಬಹುಮತದಿಂದ ಆಯ್ಕೆಯಾಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ಸಂಚು ರೂಪಿಸಿವೆ. ಅಧಿಕಾರದ ದಾಹದಿಂದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಪ್ರಕರಣ ಮುಂದಿಟ್ಟು ಜನಸಾಮಾನ್ಯರಲ್ಲಿ ಗೊಂದಲ ಸೃಷ್ಟಿಸುತ್ತಿವೆ ಎಂದು ಆರೋಪಿಸಿದರು.
ರೈತ, ಕಾರ್ಮಿಕ, ಕೃಷಿ ಕ್ಷೇತ್ರ, ಬೆಲೆ ಏರಿಕೆ, ನಿರುದ್ಯೋಗ, ಆರೋಗ್ಯ ಸೇರಿದಂತೆ ಅನೇಕ ಮೂಲಭೂತ ಸಮಸ್ಯೆಗಳು ದೇಶವನ್ನು ಕಾಡುತ್ತಿವೆ. ಇದನ್ನು ಬಗೆ ಹರಿಸಲು ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ. ಸಮಸ್ಯೆಗಳನ್ನು ಮರೆ ಮಾಚಲು ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಗುರಿ ಮಾಡಿ ಕುತಂತ್ರ ರಾಜಕಾರಣ ಮಾಡಲಾಗುತ್ತಿದೆ ಎಂದು ಟೀಕಿಸಿದರು.ಸಮಿತಿ ಮುಖಂಡ ಜೆ.ಎಲ್.ಜನಾರ್ದನ್ ಮಾತನಾಡಿ, ದೇಶದ ಸಂವಿಧಾನದಡಿ ರೂಪುಗೊಂಡಿರುವ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳಾಗಿದ್ದಾರೆ. ಪ್ರಜೆಗಳಿಂದ ನ್ಯಾಯಸಮ್ಮತವಾಗಿ ಅತ್ಯಧಿಕ ಸ್ಥಾನಗಳಿಂದ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರವನ್ನು ವಾಮಮಾರ್ಗದ ಮೂಲಕ ಅಸ್ಥಿರಗೊಳಿಸಲು ಬಿಜೆಪಿ ಮತ್ತು ಜೆಡಿಎಸ್ ಮುಂದಾಗಿವೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾಗಿ ಈ ಎರಡು ಪಕ್ಷಗಳು ನಡೆದುಕೊಳ್ಳುತ್ತಿವೆ ಎಂದು ಆರೋಪಿಸಿದರು.
ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣಗೊಳಿಸಿ ದೇಶದ ಯುವ ಸಮೂಹದಲ್ಲಿ ಅಭದ್ರತೆಯನ್ನು ಸೃಷ್ಟಿಸಲಾಗುತ್ತಿದೆ. ಬಡವರ ಪರವಾಗಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ನಡೆಯುತ್ತಿರುವ ಕುತಂತ್ರಗಳಿಗೆ ಕೇಂದ್ರ ಕುಮ್ಮಕ್ಕು ನೀಡುತ್ತಿದೆ ಎಂದು ಟೀಕಿಸಿದರು.ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ಬಿಜೆಪಿ ಮತ್ತು ಜೆಡಿಎಸ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಜೆ.ಎಲ್.ಜನಾರ್ದನ್ ಒತ್ತಾಯಿಸಿದರು.
ದಲಿತ ಸಂಘರ್ಷ ಸಮಿತಿ ಮುಖಂಡರಾದ ವೀರೇಂದ್ರ ಪಾಟೀಲ್, ಯತೀಶ್ ಬಿದರೂರು, ಸದಸ್ಯರಾದ ನವೀನ್ ಕುಮಾರ್, ಮಂಜಯ್ಯ ಮತ್ತಿತರರು ಹಾಜರಿದ್ದರು. ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಮನವಿ ಪತ್ರ ಸ್ವೀಕರಿಸಿದರು.;Resize=(128,128))
;Resize=(128,128))
;Resize=(128,128))