ಇನ್‌ಸ್ಪೆಕ್ಟರ್‌, ಎಸಿಪಿಯನ್ನು ಇರಿದು ಕೊಲ್ಲುವುದಾಗಿ ಪೇದೆ ಬೆದರಿಕೆ?

| Published : May 22 2024, 01:18 AM IST

ಇನ್‌ಸ್ಪೆಕ್ಟರ್‌, ಎಸಿಪಿಯನ್ನು ಇರಿದು ಕೊಲ್ಲುವುದಾಗಿ ಪೇದೆ ಬೆದರಿಕೆ?
Share this Article
  • FB
  • TW
  • Linkdin
  • Email

ಸಾರಾಂಶ

ಎಸಿಪಿ ಮತ್ತು ಇನ್‌ಪೆಕ್ಟರ್ ಅವರಿಗೆ ಚಾಕುವಿನಿಂದ ಇರಿದು ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿರುವುದಾಗಿ ಬಾಣಸವಾಡಿ ಠಾಣೆ ಕಾನ್‌ಸ್ಟೇಬಲ್‌ವೊಬ್ಬರ ವಿರುದ್ಧ ಆರೋಪ ಕೇಳಿ ಬಂದಿರುವುದು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಇತ್ತೀಚೆಗೆ ರೌಡಿ ಕಾರ್ತಿಕೇಯನ್‌ ಕೊಲೆ ಪ್ರಕರಣ ಸಂಬಂಧ ತಮ್ಮನ್ನು ಕರ್ತವ್ಯ ಲೋಪದಡಿ ಅಮಾನತು ಶಿಕ್ಷೆಗೆ ಶಿಫಾರಸು ಮಾಡಿದ್ದರು ಎಂದು ಎಸಿಪಿ ಮತ್ತು ಇನ್‌ಪೆಕ್ಟರ್ ಅವರಿಗೆ ಚಾಕುವಿನಿಂದ ಇರಿದು ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿರುವುದಾಗಿ ಬಾಣಸವಾಡಿ ಠಾಣೆ ಕಾನ್‌ಸ್ಟೇಬಲ್‌ವೊಬ್ಬರ ವಿರುದ್ಧ ಆರೋಪ ಕೇಳಿ ಬಂದಿದೆ.

ಕಾನ್‌ಸ್ಟೇಬಲ್ ರೇಣುಕ ನಾಯಕ್‌ ಮೇಲೆ ಆರೋಪ ಬಂದಿದ್ದು, ಈ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವಹಿಸಿ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಆದೇಶಿಸಿದ್ದಾರೆ.

ಇತ್ತೀಚೆಗೆ ಬಾಣಸವಾಡಿ ವ್ಯಾಪ್ತಿಯಲ್ಲಿ ರೌಡಿ ಕಾರ್ತಿಕೇಯನ್‌ ಕೊಲೆಯಾಗಿತ್ತು. ಈ ಕೃತ್ಯದಲ್ಲಿ ಕರ್ತವ್ಯ ಲೋಪವೆಸಗಿದ ಆರೋಪದ ಮೇರೆಗೆ ಕಾನ್‌ಸ್ಟೇಬಲ್‌ಗಳಾದ ಸಂತೋಷ್‌, ಪುಟ್ಟಸ್ವಾಮಿ ಹಾಗೂ ವಿನೋದ್ ಅವರನ್ನು ಪೂರ್ವ ವಿಭಾಗದ ಡಿಸಿಪಿ ಕುಲದೀಪ್ ಕುಮಾರ್‌.ಆರ್‌.ಜೈನ್‌ ಅಮಾನತುಗೊಳಿಸಿದ್ದರು. ಆದರೆ ಅಮಾನತು ಶಿಕ್ಷೆಗೆ ಶಿಫಾರಸುಗೊಂಡಿದ್ದ ರೇಣುಕ ನಾಯಕ್ ಅವರಿಗೆ ಮಾತ್ರ ಕಡ್ಡಾಯ ರಜೆ ಶಿಕ್ಷೆ ವಿಧಿಸಲಾಗಿತ್ತು. ಇದರ ಹಿಂದೆ ಕಾನ್‌ಸ್ಟೇಬಲ್ ಬೆದರಿಕೆ ಕಾರಣವಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ.

ತನ್ನ ಹೆಸರನ್ನು ಅಮಾನತು ಶಿಕ್ಷೆಗೆ ಶಿಫಾರಸು ಮಾಡಿದ ಕಾರಣಕ್ಕೆ ಬಾಣಸವಾಡಿ ಉಪ ವಿಭಾಗದ ಎಸಿಪಿ ಹಾಗೂ ಇನ್‌ಸ್ಪೆಕ್ಟರ್ ಅವರಿಗೆ ರೇಣುಕ ಕೊಲೆ ಬೆದರಿಕೆ ಹಾಕಿದ್ದರು. ಇದರಿಂದ ಆತಂಕಗೊಂಡು ಎಸಿಪಿ ಅವರು, ಕೊನೆ ಕ್ಷಣದಲ್ಲಿ ತಮ್ಮ ಶಿಫಾರಸು ವರದಿಯನ್ನು ಹಿಂಪಡೆದಿದ್ದಾರೆ ಎನ್ನಲಾಗಿದೆ.