ಸಂವಿಧಾನ ಜಾಗೃತಿ ಜಾಥಾ : ಬೆಳಗಾವಿ ತೃತೀಯ

| Published : Feb 13 2024, 12:49 AM IST

ಸಾರಾಂಶ

ಭಾರತೀಯ ಪ್ರಜೆಗಳಿಗೆ ಭಾರತದ ಸಂವಿಧಾನವೇ ಮೂಲ. ಆದರೆ, ಬಹಳಷ್ಟು ಜನರಿಗೆ ಸಂವಿಧಾನದ ಬಗ್ಗೆ ಅರಿವಿಲ್ಲ. ಆದ್ದರಿಂದ ಭಾರತದ ಸಂವಿಧಾನ ಅಂಗೀಕಾರವಾಗಿ 75 ವರ್ಷಗಳಾಗಿರುವ ಹಿನ್ನೆಲೆ ಜಾಗೃತಿ ನಡೆಯುತ್ತಿದೆ. ಜಿಲ್ಲೆಯಲ್ಲಿ ಎಲ್ಲ ಜನಪ್ರತಿನಿಧಿಗಳು, ವಿವಿಧ ಇಲಾಖೆ ಅಧಿಕಾರಿ-ಸಿಬ್ಬಂದಿ ಸಕ್ರೀಯವಾಗಿ ಪಾಲ್ಗೊಂಡ ಕಾರಣ ರಾಜ್ಯದಲ್ಲಿಯೇ ಬೆಳಗಾವಿ 3ನೇ ಸ್ಥಾನ ಪಡೆದಿರುವುದು ಹೆಮ್ಮೆ ತಂದಿದೆ.

ರವಿ ಕಾಂಬಳೆ

ಕನ್ನಡಪ್ರಭ ವಾರ್ತೆ ಹುಕ್ಕೇರಿ

ಸಂವಿಧಾನದ ಮೌಲ್ಯ ಮತ್ತು ಆಶಯಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ವಿವಿಧ ಇಲಾಖೆಗಳ ಸಹಯೋಗದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ನಡೆದ ಸಂವಿಧಾನ ಜಾಗೃತಿ ಜಾಥಾಗೆ ಬೆಳಗಾವಿ ಜಿಲ್ಲೆಯಲ್ಲಿ ಅಭೂತಪೂರ್ವ ಬೆಂಬಲ, ಯಶಸ್ಸು ಕಂಡಿದೆ. ರಾಜ್ಯದ 31 ಜಿಲ್ಲೆಗಳಲ್ಲಿ ಸಂವಿಧಾನ ಜಾಗೃತಿ ಜಾಥಾ ಮಾಡುವಲ್ಲಿ ಬೆಳಗಾವಿ ಜಿಲ್ಲೆ ತೃತೀಯ ಸ್ಥಾನದಲ್ಲಿದೆ.

ಜ.26 ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲೆಯಾದ್ಯಂತ ಸಂಚರಿಸಲು ಎರಡು ಮಾರ್ಗಗಳಲ್ಲಿ ಸ್ತಬ್ಧ ಚಿತ್ರಗಳನ್ನೊಳಗೊಂಡ ಎರಡು ವಿಶೇಷ ರಥವುಳ್ಳ ವಾಹನಗಳಿಗೆ ಏಕಕಾಲಕ್ಕೆ ಚಾಲನೆ ನೀಡಲಾಗಿದೆ. ಪ್ರಸ್ತುತ ಫೆ.10 ರವರೆಗೆ ಜಿಲ್ಲೆಯ 289 ಗ್ರಾ.ಪಂಗಳು ಹಾಗೂ 22 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಈ ಜಾಥಾ ಯಶಸ್ವಿಯಾಗಿ ಸಾಗಿದೆ. ತನ್ಮೂಲಕ ಇಡೀ ರಾಜ್ಯದಲ್ಲಿಯೇ ಬೆಳಗಾವಿ ಮೂರನೇ ಸ್ಥಾನ ಪಡೆದಿದೆ.

ಸಾಮಾನ್ಯ ಜನರಿಗೆ ಈ ಜಾಥಾ ಯಾವ ರೀತಿ ಪರಿಣಾಮಕಾರಿಯಾಗಿ ಸಂವಿಧಾನವನ್ನು ತಿಳಿದುಕೊಳ್ಳಲು ಸಹಕಾರಿಯಾಗಿದೆ? ಸಂವಿಧಾನ ಜಾಗೃತಿ ಜಾಥಾ ಯಶಸ್ವಿಗೊಳ್ಳಲು ಸಮಿತಿ ರಚನೆ, ಅವರ ಕ್ರಿಯಾಶೀಲತೆ ಹೇಗಿದೆ? ಸೈಕಲ್, ಬೈಕ್, ಟ್ರ್ಯಾಕ್ಟರ್ ಸೇರಿದಂತೆ ಹಲವು ರೀತಿಯ ಜಾಥಾಗಳನ್ನು ಹೇಗೆ ಮಾಡಲಾಗಿದೆ? ಪತ್ರಿಕೆ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಜಾಗೃತಿ ಯಾವ ರೀತಿಯ ಪ್ರಭಾವ ಬೀರಿದೆ ಸೇರಿ ಹಲವು ಅಂಶಗಳ ಆಧಾರದ ಮೇಲೆ ಜಿಲ್ಲೆಗಳಿಗೆ ಸ್ಥಾನಮಾನ ನೀಡಲಾಗಿದೆ. ಧಾರವಾಡ ಮತ್ತು ಕೋಲಾರ ಕ್ರಮವಾಗಿ ಪ್ರಥಮ, ದ್ವಿತೀಯ ಸ್ಥಾನದಲ್ಲಿದ್ದರೆ, ಬೆಳಗಾವಿ ಮೂರನೇ ಸ್ಥಾನದ ಪಟ್ಟಕ್ಕೇರಿದೆ.

ವಿಶೇಷ ರಥಗಳಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ ಮೂರ್ತಿಯೊಂದಿಗೆ ಎಲ್‌ಇಡಿ ಪರದೆ ಅಳವಡಿಸಿ ಈಗಾಗಲೇ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಂವಿಧಾನದ ಜಾಗೃತಿ ಮೂಡಿಸಲಾಗುತ್ತಿದೆ. ವಿವಿಧ ಕಲಾ ತಂಡಗಳ ವೈಭವ, ಮಹಿಳೆಯರ ಕುಂಭ, ಆರತಿ, ಪಂಜಿನ ಮೆರವಣಿಗೆ, ಕ್ಯಾಂಡಲ್ ಮಾರ್ಚ್, ಸಂವಿಧಾನ ಅರಿತ ತಜ್ಞರಿಂದ ಜನರನ್ನು ಒಗ್ಗೂಡಿಸಿ ಉಪನ್ಯಾಸ ನೀಡಲಾಗಿದೆ. ಗಾಮೀಣದಲ್ಲಿ ಎತ್ತಿನ ಗಾಡಿ, ಟ್ರ್ಯಾಕ್ಟರ್ ಜಾಥಾ ಮಾಡಿ ಜನರ ಗಮನ ಸೆಳೆಯಲಾಗಿದೆ. ಅಲ್ಲದೇ ಶಾಲಾ - ಕಾಲೇಜುಗಳಲ್ಲಿ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಸಂವಿಧಾನದ ಶ್ರೇಷ್ಠತೆ, ಮಹತ್ವ ತಿಳಿಸಲಾಗಿದೆ.

ಸಂವಿಧಾನ ಪೀಠಿಕೆ, ನ್ಯಾಯ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ, ಡಾ.ಬಿ.ಆರ್.ಅಂಬೇಡ್ಕರ ಅವರ ಪರಿಕಲ್ಪನೆ, ಬಸವಣ್ಣನವರ ವಚನಗಳು, ಜಿಲ್ಲೆಯ ಸಾಧಕರು, ಐತಿಹಾಸಿಕ ಸ್ಥಳಗಳು, ಸಾಹಿತ್ಯ ದಿಗ್ಗಜರು, ಕಲಾವಿದರು, ಸಂಸ್ಕತಿ ಬಗ್ಗೆಯೂ ಜನರಲ್ಲಿ ಅರಿವು ಮೂಡಿಸಲಾಗಿದೆ. ಸಂವಿಧಾನ ಪೀಠಿಕೆ ಮುದ್ರಿಸಿ ವಿತರಣೆ ಮಾಡಲಾಗುತ್ತಿದೆ. ಈ ಮೂಲಕ ಪ್ರತಿ ಪ್ರಜೆ ತನ್ನ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಅರಿವು ಮೂಡಿಸಲಾಗಿದೆ.

ಪ್ರತಿ ಮನೆ-ಮನೆಗಳಿಗೂ ಸಂವಿಧಾನ ಬಗ್ಗೆ ಅರಿವು ಮೂಡಿಸುವುದು ಈ ಜಾಥಾದ ಮೂಲ ಧ್ಯೇಯವಾಗಿದೆ ಎಂದು ಜಾಥಾ ಜವಾಬ್ದಾರಿ ವಹಿಸಿಕೊಂಡ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಲಕ್ಷ್ಮಣ ಬಬಲಿ ಕನ್ನಡಪ್ರಭಕ್ಕೆ ಮಾಹಿತಿ ನೀಡಿದ್ದಾರೆ.

ಕೋಟ್

ಭಾರತೀಯ ಪ್ರಜೆಗಳಿಗೆ ಭಾರತದ ಸಂವಿಧಾನವೇ ಮೂಲ. ಆದರೆ, ಬಹಳಷ್ಟು ಜನರಿಗೆ ಸಂವಿಧಾನದ ಬಗ್ಗೆ ಅರಿವಿಲ್ಲ. ಆದ್ದರಿಂದ ಭಾರತದ ಸಂವಿಧಾನ ಅಂಗೀಕಾರವಾಗಿ 75 ವರ್ಷಗಳಾಗಿರುವ ಹಿನ್ನೆಲೆ ಜಾಗೃತಿ ನಡೆಯುತ್ತಿದೆ. ಜಿಲ್ಲೆಯಲ್ಲಿ ಎಲ್ಲ ಜನಪ್ರತಿನಿಧಿಗಳು, ವಿವಿಧ ಇಲಾಖೆ ಅಧಿಕಾರಿ-ಸಿಬ್ಬಂದಿ ಸಕ್ರೀಯವಾಗಿ ಪಾಲ್ಗೊಂಡ ಕಾರಣ ರಾಜ್ಯದಲ್ಲಿಯೇ ಬೆಳಗಾವಿ 3ನೇ ಸ್ಥಾನ ಪಡೆದಿರುವುದು ಹೆಮ್ಮೆ ತಂದಿದೆ.

ಬಸವರಾಜ ರಾಯವ್ವಗೋಳ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರು