ಸಾರಾಂಶ
ಗುಂಡ್ಲುಪೇಟೆ ತಾಲೂಕಿನ ಹಂಗಳ, ಮಂಗಲ, ಕಣ್ಣೇಗಾಲ ಗ್ರಾಪಂ ವ್ಯಾಪ್ತಿಯಲ್ಲಿ ಶನಿವಾರ ಸಂವಿಧಾನ ಜಾಗೃತಿ ಜಾಥಾಗೆ ಸಂಭ್ರಮದ ಸ್ವಾಗತ ನೀಡಲಾಯಿತು. ಹಂಗಳದಲ್ಲಿ ಸಂವಿಧಾನ ಜಾಗೃತಿ ಜಾಥಾದಲ್ಲಿ ಮೊದಲಿಗೆ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿಗೆ ಪುಷ್ಪಾರ್ಚನೆ ನೆರವೇರಿಸಲಾಯಿತು. ಕಲಾತಂಡಗಳೊಡನೆ ಸ್ತಬ್ದ ಚಿತ್ರದ ಮೆರವಣಿಗೆ ನಡೆಯಿತು
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಗುಂಡ್ಲುಪೇಟೆ ತಾಲೂಕಿನ ಹಂಗಳ, ಮಂಗಲ, ಕಣ್ಣೇಗಾಲ ಗ್ರಾಪಂ ವ್ಯಾಪ್ತಿಯಲ್ಲಿ ಶನಿವಾರ ಸಂವಿಧಾನ ಜಾಗೃತಿ ಜಾಥಾಗೆ ಸಂಭ್ರಮದ ಸ್ವಾಗತ ನೀಡಲಾಯಿತು. ಹಂಗಳದಲ್ಲಿ ಸಂವಿಧಾನ ಜಾಗೃತಿ ಜಾಥಾದಲ್ಲಿ ಮೊದಲಿಗೆ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿಗೆ ಪುಷ್ಪಾರ್ಚನೆ ನೆರವೇರಿಸಲಾಯಿತು. ಕಲಾತಂಡಗಳೊಡನೆ ಸ್ತಬ್ದ ಚಿತ್ರದ ಮೆರವಣಿಗೆ ನಡೆಯಿತು.ವಿವಿಧ ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಮತ್ತಷ್ಟು ಮೆರಗು ನೀಡಿದವು. ನೀಲಿ ಸೀರೆಯುಟ್ಟ ಮಹಿಳೆಯರು ಪೂರ್ಣಕುಂಭ ಹೊತ್ತು ಸಾಗಿದರು. ಶಾಲಾ ವಿದ್ಯಾರ್ಥಿಗಳು ಸಮವಸ್ತ್ರದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರವುಳ್ಳ ಧ್ವಜ ಹಿಡಿದು ಗಮನಸೆಳೆದರು. ಹಂಗಳದಲ್ಲಿ ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್. ನಂಜಪ್ಪ, ಗ್ರಾಪಂ ಅಧ್ಯಕ್ಷ ರೂಪಾ, ಉಪಾಧ್ಯಕ್ಷ ನಾಗರಾಜು, ಇನ್ನಿತರ ಸದಸ್ಯರು, ಪಂಚಾಯತ್ ಅಭಿವೃದ್ದಿ ಅಧಿಕಾರಿ ಶಾಂತಮಲ್ಲಪ್ಪ, ನೋಡಲ್ ಅಧಿಕಾರಿ ಮಧುಸೂದನ್, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡರು. ಮಂಗಲ ಗ್ರಾಮದಲ್ಲಿ ಎತ್ತಿನಗಾಡಿಗಳ ಮೆರವಣಿಗೆ, ಅಂಬೇಡ್ಕರ್ ವೇಷಭೂಷಣ ಧರಿಸಿದ ಮಕ್ಕಳು ಭಾಗವಹಿಸಿದ್ದು ವಿಶೇಷವಾಗಿತ್ತು. ಕಳಶ ಹೊತ್ತ ಮಹಿಳೆಯರು ಮೆರವಣಿಗೆಯಲ್ಲಿ ಪಾಲ್ಗೊಂಡರು. ಮಕ್ಕಳಿಂದ ನೃತ್ಯ ಹಾಗೂ ಭಾಷಣ ಕಾರ್ಯಕ್ರಮ ನಡೆದವು. ಪುಸ್ತಕ ಜೋಳಿಗೆ ಗಮನಸೆಳೆಯಿತು. ಮಂಗಲ ಗ್ರಾಪಂ ಅಧ್ಯಕ್ಷ ಬಿ.ಮಾದಪ್ಪ, ಉಪಾಧ್ಯಕ್ಷ ಕಮಲ, ಇನ್ನಿತರ ಸದಸ್ಯರು, ನೋಡಲ್ ಅಧಿಕಾರಿ ತಾಲೂಕು ಶಿಶು ಅಭಿವೃದ್ದಿ ಯೋಜನಾಧಿಕಾರಿ ಹೇಮಾವತಿ, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.ಕಣ್ಣೇಗಾಲ ಗ್ರಾಮದಲ್ಲಿ ಸಂವಿಧಾನ ಜಾಗೃತಿ ಜಾಥಾಗೆ ಅದ್ಧೂರಿ ಸ್ವಾಗತ ನೀಡಲಾಯಿತು. ಬೈಕ್ ರ್‍ಯಾಲಿ, ಅಲಂಕೃತ ಎತ್ತಿನಗಾಡಿಗಳು ಜಾಥಾದೊಂದಿಗೆ ಸಾಗಿದವು. ಅಕ್ಕ ಐಎಎಸ್ ಅಕಾಡೆಮಿಯ ಡಾ.ಶಿವಕುಮಾರ್, ಗ್ರಾಪಂ ಅಧ್ಯಕ್ಷ ಮಂಗಳಮ್ಮ, ಉಪಾಧ್ಯಕ್ಷ ಯಮುನ, ಇನ್ನಿತರ ಸದಸ್ಯರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಜಾಥಾವನ್ನು ಬರಮಾಡಿಕೊಂಡರು.
ಕಾರ್ಯಕ್ರಮದಲ್ಲಿ ಅಕ್ಕ ಐಎಎಸ್ ಅಕಾಡೆಮಿಯ ಡಾ. ಶಿವಕುಮಾರ್, ಮುಖ್ಯ ಭಾಷಣಕಾರ ಮಣಿಕಂಠಚಾರ್ ಪಾಲ್ಗೊಂಡು ಮಾತನಾಡಿದರು. ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್. ನಂಜಪ್ಪ, ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಸಹಾಯಕ ನಿರ್ದೇಶಕ ಮೋಹನ್ ಕುಮಾರ್, ಕಾರ್ಯಕ್ರಮದ ನೋಡಲ್ ಅಧಿಕಾರಿ ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಮೋಹನ್, ಪಂಚಾಯತ್ ಅಭಿವೃದ್ದಿ ಅಧಿಕಾರಿ ಪಾಲಾಕ್ಷಸ್ವಾಮಿ, ವಿವಿಧ ಸಂಘಟನೆಗಳ ಮುಖಂಡರು, ಇನ್ನಿತರ ಗಣ್ಯರು ಭಾಗವಹಿಸಿದ್ದರು.