ಶಿಕ್ಷಣ ಸ್ಥಂಸ್ಥೆಗಳಿಂದ ಜಯಪುರದಲ್ಲಿ ಸಂವಿಧಾನ ಜಾಗೃತಿ ಜಾಥಾ

| Published : Mar 06 2024, 02:18 AM IST

ಸಾರಾಂಶ

ಭಾರತದ ಸಂವಿಧಾನವು ಹಲವಾರು ತಜ್ಞರ ಪರಿಶ್ರಮ ಹಾಗೂ ವಿವಿಧ ಕ್ಷೇತ್ರಗಳ ಪ್ರಾವೀಣ್ಯ ವ್ಯಕ್ತಿಗಳ ತಂಡದ ಅಧ್ಯಯನ, ತಜ್ಞತೆ ಹಾಗೂ ಹಲವು ಚರ್ಚೆಗಳ ಪರಿಣಾಮ ರಚನೆಯಾಗಿದ್ದು ಕರಡು ಸಮಿತಿ ಅಧ್ಯಕ್ಷರಾಗಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಕೊಡುಗೆ ಭಾರತದ ಸಂವಿಧಾನದ ರಚನೆಯಲ್ಲಿ ಅವಿಸ್ಮರಣೀಯವಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ತಾಲೂಕಿನ ಜಯಪುರದಲ್ಲಿ ಗ್ರಾಸ್ ರೂಟ್ಸ್ ರೀಸರ್ಚ್ ಅಂಡ್ ಅಡ್ವಕೆಸಿ ಮೂಮೆಂಟ್ (ಗ್ರಾಮ್) ಗ್ರಾಪಂ ಮತ್ತು ರಾಘವೇಂದ್ರ ವಿದ್ಯಾಪೀಠ ಪ್ರೌಢಶಾಲೆಯು ಸಂವಿಧಾನ ಜಾಗೃತಿ ಜಾಥಾ ಆಯೋಜಿಸಿತ್ತು.

ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಪ್ರಾಸ್ತಾವಿಕ ಭಾಷಣ ಮಾಡಿದ ಗ್ರಾಮ್ ಸಂಸ್ಥೆಯ ಕಾರ್ಯ ನಿರ್ವಾಹಕ ನಿರ್ದೇಶಕ ಡಾ.ಬಸವರಾಜು ಆರ್.ಶ್ರೇಷ್ಠ, ಭಾರತದ ಸಂವಿಧಾನವು ಹಲವಾರು ತಜ್ಞರ ಪರಿಶ್ರಮ ಹಾಗೂ ವಿವಿಧ ಕ್ಷೇತ್ರಗಳ ಪ್ರಾವೀಣ್ಯ ವ್ಯಕ್ತಿಗಳ ತಂಡದ ಅಧ್ಯಯನ, ತಜ್ಞತೆ ಹಾಗೂ ಹಲವು ಚರ್ಚೆಗಳ ಪರಿಣಾಮ ರಚನೆಯಾಗಿದ್ದು ಕರಡು ಸಮಿತಿ ಅಧ್ಯಕ್ಷರಾಗಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಕೊಡುಗೆ ಭಾರತದ ಸಂವಿಧಾನದ ರಚನೆಯಲ್ಲಿ ಅವಿಸ್ಮರಣೀಯವಾಗಿದೆ ಎಂದರು.

ಭಾರತದ ಪ್ರಜೆಗಳಾದ ನಾವು ಭಾರತದ ಸಂವಿಧಾನವು ನಮ್ಮ ಹೆಮ್ಮೆಯಾಗಿದ್ದು, ಅದನ್ನು ಸಂಭ್ರಮಿಸುವ ಕೆಲಸ ಆಗಬೇಕಿದೆ. ರಾಷ್ಟ್ರ ನಿರ್ಮಾಣದಲ್ಲಿ ನಮ್ಮೆಲ್ಲರ ಕರ್ತವ್ಯ ನಿರಂತರವಾಗಿ ಇರಬೇಕೆಂದು ತಿಳಿಸಿದರು.

ಪ್ರಜೆಗಳಾಗಿ ನಾವು ಭಾರತದ ರಾಷ್ಟ್ರ ನಿರ್ಮಾಣದಲ್ಲಿ ಕೈಜೋಡಿಸಬೇಕಾಗಿದ್ದು ನಮ್ಮ ಕರ್ತವ್ಯ ಪಾಲಿಸುವ ಮೂಲಕ ಭಾರತದ ಸಂವಿಧಾನಕ್ಕೆ ಗೌರವಿಸುವ ಹಾಗೂ ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ತೊಡಗಬೇಕಿದೆ. ಭಾರತದಲ್ಲಿ ನಡೆಯುವ ಯಾವುದೇ ಸಾರ್ವತ್ರಿಕ ಚುನಾವಣೆಯಲ್ಲಿ ಭಾಗವಹಿಸುವ ಮೂಲಕ, ಸಾರ್ವಜನಿಕ ಆಸ್ತಿಪಾಸ್ತಿ ರಕ್ಷಿಸುವುದು, ರಾಷ್ಟ್ರಗೀತೆ ಹಾಗೂ ರಾಷ್ಟ್ರ ಧ್ವಜವನ್ನು ಗೌರವಿಸುವ ಹಾಗೂ ಭಾರತದ ಕಾನೂನು ಪಾಲಿಸುವ ಪ್ರಜೆಗಳಾಗಿ ಭಾರತದ ಸಂವಿಧಾನವನ್ನು ಪ್ರತಿದಿನ ಸಂಭ್ರಮಿಸುವ ಪ್ರಾಮಾಣಿಕ ವ್ಯಕ್ತಿಗಳಾಗಿ ಬದುಕಿದ್ದರೆ ರಾಷ್ಟ್ರ ನಿರ್ಮಾಣದಲ್ಲಿ ಕೈಜೋಡಿಸಿದಂತೆ ಹಾಗೂ ನಾವು ಯಾವುದೇ ವಲಯದಲ್ಲಿ ಕೆಲಸ ಮಾಡಿದರು. ಅದನ್ನು ಪ್ರಾಮಾಣಿಕವಾಗಿ ರಾಷ್ಟ್ರ ನಿರ್ಮಾಣದ ಕಾರ್ಯವಾಗಿದೆ ಎಂದು ಭಾವಿಸಿದಲ್ಲಿ ರಾಷ್ಟ್ರ ನಿರ್ಮಾಣದಲ್ಲಿ ಕೈಜೋಡಿಸಿದಂತೆ ಎಂದು ವಿದ್ಯಾರ್ಥಿಗಳಿಗೆ ಪ್ರೇರಣಾತ್ಮಕ ನುಡಿಗಳನ್ನಾಡಿದರು.

ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷ ಮಹದೇವಯ್ಯ, ಜಯಪುರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಎಸ್ಐ ಜಯರಾಮು, ಎಎಸ್ಐ ಪ್ರಕಾಶ್, ಶಿಕ್ಷಣ ಇಲಾಖೆ ಸಮೂಹ ಸಂಪನ್ಮೂಲ ವ್ಯಕ್ತಿ ಮಹೇಶ್, ರಾಘವೇಂದ್ರ ವಿದ್ಯಾಪೀಠ ಪ್ರೌಢಶಾಲೆಯ ಮುಖ್ಯ ಶಿಕ್ಷಕ ವೈದ್ಯನಾಥನ್, ಗ್ರಾಪಂ ಲೆಕ್ಕ ಸಹಾಯಕ ಆನಂದೇಗೌಡ, ಕಂದಾಯ ಇಲಾಖೆ ಭಾಸ್ಕರ್, ಗ್ರಾಮ್ ಸಂಸ್ಥೆಯ ಸಮುದಾಯ ಸಮೋಲೋಚನಾ ವಿಭಾಗದ ಡಾ. ರಾಜೇಂದ್ರ ಪ್ರಸಾದ್ ಇದ್ದರು.