ಸಾರಾಂಶ
ಸಂವಿಧಾನ ಜಾಗೃತಿ ಜಾಥಾವು ಸೋಮವಾರ ತೆಕ್ಕಟ್ಟೆಗೆ ಆಗಮಿಸಿದ್ದು, ತೆಕ್ಕಟ್ಟೆ ಗ್ರಾ.ಪಂ. ವತಿಯಿಂದ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಶಾಸಕ ಕಿರಣ್ ಕುಮಾರ್ ಕೊಡ್ಗಿ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಸಂವಿಧಾನ ದಿನಾಚರಣೆಯ ಅಂಗವಾಗಿ ಸಾರ್ವಜನಿಕರಲ್ಲಿ ಸಂವಿಧಾನ ಕುರಿತು ಜಾಗೃತಿ ಮೂಡಿಸುವ ಸಂವಿಧಾನ ಜಾಗೃತಿ ಜಾಥಾವು ಸೋಮವಾರ ತೆಕ್ಕಟ್ಟೆಗೆ ಆಗಮಿಸಿದ್ದು, ತೆಕ್ಕಟ್ಟೆ ಗ್ರಾ.ಪಂ. ವತಿಯಿಂದ ಅದ್ಧೂರಿಯಾಗಿ ಸ್ವಾಗತಿಸಲಾಯಿತು.ಸಂವಿಧಾನ ಜಾಗೃತಿ ಜಾಥಾಕ್ಕೆ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಚಾಲನೆ ನೀಡಿ, ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿ, ಸಮ್ಮ ದೇಶವೂ ಸಂವಿಧಾನದ ಆಶಯದ ಮೇಲೆ ನಡೆಯುತ್ತಿದೆ. ಸಂವಿಧಾನದ ಮಹತ್ವ ಮತ್ತು ಮೌಲ್ಯವನ್ನು ಪ್ರತಿಯೊಬ್ಬರು ಅರಿವನ್ನು ಹೊಂದಬೇಕು. ಸಂವಿಧಾನದ ಚೌಕಟ್ಟಿನಲ್ಲಿ ಎಲ್ಲರೂ ಸಮಾನರು ಈ ಜಾಥಾ ಕಾರ್ಯಕ್ರಮಕ್ಕೆ ಗ್ರಾಮೀಣ ಪ್ರದೇಶದಲ್ಲಿ ಪ್ರತಿಯೊಬ್ಬರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು.
ಮಹಾಲಿಂಗೇಶ್ವರ ದೇವಸ್ಥಾನದಿಂದ ತೆಕ್ಕಟ್ಟೆ ಗ್ರಾ.ಪಂ. ವರೆಗೆ ಚಂಡೆ ಮತ್ತು ವಾದ್ಯಗಳೊಂದಿಗೆ ಕುಂದಾಪುರ ಸಹಾಯಕ ಕಮೀಷನರ್ ರಶ್ಮಿ, ತಹಸೀಲ್ದಾರ್ ಶೋಭಾಲಕ್ಷ್ಮೀ, ಕಾರ್ಯನಿರ್ವಹಣಾ ಅಧಿಕಾರಿ ಪ್ರಶಾಂತ್ ರಾವ್, ತೆಕ್ಕಟ್ಟೆ ಪಂಚಾಯತ್ ಅಧ್ಯಕ್ಷೆ ಟಿ.ಶೋಭನಾ, ಪಂ. ಅಭಿವೃದ್ಧಿ ಅಧಿಕಾರಿ ಸುನಿಲ್ ಕುಮಾರ್, ಅಧಿಕಾರಿ ಹಾಗೂ ಸಿಬ್ಬಂದಿ, ಸ್ಥಳೀಯ ಶಾಲೆಯ ಶಿಕ್ಷಕ ಹಾಗೂ ವಿದ್ಯಾರ್ಥಿಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಎಸ್.ಎಲ್.ಆರ್.ಎಂ ಘಟಕದ ಕಾರ್ಯಕರ್ತರು, ಸಂಜೀವಿನಿ ಸಂಘದ ಸದಸ್ಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.ಕಾರ್ಯಕ್ರಮಕ್ಕೂ ಮುನ್ನ ಸೈಕಲ್ ಜಾಥಾದಲ್ಲಿ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಕುಂದಾಪುರ ಸಹಾಯಕ ಕಮೀಷನರ್ ರಶ್ಮಿ, ತಹಸೀಲ್ದಾರ್ ಶೋಭಾಲಕ್ಷ್ಮೀ ಭಾಗಿಯಾದರು.