ಸಾರಾಂಶ
ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳು ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಶಾಲಾ- ಕಾಲೇಜುಗಳು ಮಕ್ಕಳಿಗೆ ನಾಟಕ, ಪ್ರಬಂಧ, ಚರ್ಚಾ ಸ್ಪರ್ಧೆಗಳನ್ನು ನಡೆಸಿ ಸಂವಿಧಾನದ ಆಶಯಗಳನ್ನು ತಿಳಿಸಲಾಗಿದೆ
ಹೊಸಪೇಟೆ: ರಾಜ್ಯದಲ್ಲಿ ಸಂವಿಧಾನದ ಆಶಯಗಳನ್ನು ಈಡೇರಿಸುವ ಹಾಗೂ ಸಮ ಸಮಾಜವನ್ನು ನಿರ್ಮಿಸುವ ಧ್ಯೇಯೋದ್ದೇಶದೊಂದಿಗೆ ಸಂವಿಧಾನದ ಜಾಗೃತಿ ಜಾಥಾ ನಡೆಸಲಾಗುತ್ತಿದ್ದು, ವಿಜಯನಗರ ಜಿಲ್ಲಾದ್ಯಂತ ಯಶಸ್ವಿಯಾಗಿ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ತಿಳಿಸಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಸ್ತಬ್ದಚಿತ್ರ, ಸೈಕಲ್ ಜಾಥಾ, ಮೋಟಾರ್ ಬೈಕ್, ಡೊಳ್ಳು, ಕಹಳೆ, ನಂದಿಕೋಲು ಕುಣಿತ ತಮಟೆ ಮುಂತಾದ ಕಲಾತಂಡಗಳು ಸಹ ಪಾಲ್ಗೊಂಡಿವೆ. ಸಂವಿಧಾನದ ಪೀಠಿಕೆಯ 50 ಸಾವಿರ ಹಸ್ತಪ್ರತಿಗಳನ್ನು ತಾಲೂಕಿನ ಸಾರ್ವಜನಿಕರಿಗೆ ವಿತರಣೆ ಮಾಡಲಾಗಿದೆ. ಈಗಾಗಲೇ ಜಿಲ್ಲೆಯ 90 ಗ್ರಾಮ ಪಂಚಾಯಿತಿ, 9 ನಗರ ಸ್ಥಳೀಯ ಸಂಸ್ಥೆಗಳಲ್ಲಿ ನಡೆದಿದೆ. ಹರಪನಹಳ್ಳಿ ಹಾಗೂ ಕೊಟ್ಟೂರಿನ ತಾಲೂಕು ವ್ಯಾಪ್ತಿಯಲ್ಲಿ ನಡೆಯಬೇಕಿದೆ. ಫೆ. 23ರ ವರೆಗೂ ಜಿಲ್ಲೆಯಲ್ಲಿ ಜಾಥಾ ನಡೆಯಲಿದೆ ಎಂದರು.ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳು ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಶಾಲಾ- ಕಾಲೇಜುಗಳು ಮಕ್ಕಳಿಗೆ ನಾಟಕ, ಪ್ರಬಂಧ, ಚರ್ಚಾ ಸ್ಪರ್ಧೆಗಳನ್ನು ನಡೆಸಿ ಸಂವಿಧಾನದ ಆಶಯಗಳನ್ನು ತಿಳಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಒಂದನೇ ತರಗತಿಯಿಂದ ಹತ್ತನೆ ತರಗತಿಯವರೆಗೆ 2,38 ಲಕ್ಷ ಮಕ್ಕಳಿಗೆ ಶಾಲೆಯಲ್ಲಿ ನಿತ್ಯವೂ ಸಂವಿಧಾನದ ಪೀಠಿಕೆಯನ್ನು ಬೋಧಿಸಲಾಗುತ್ತಿದೆ. ರಾಜ್ಯದಲ್ಲಿ ಬಸವಣ್ಣ, ಅಂಬೇಡ್ಕರ್ ಅವರ ಆಶಯಗಳನ್ನು ಪ್ರಚುರಪಡಿಸಲಾಗುತ್ತಿದೆ. ಸಮಾನತೆಯನ್ನು ಸಾರಲಾಗುತ್ತಿದೆ. ಇದರ ನಿಮಿತ್ತ ಜಿಲ್ಲೆಯಲ್ಲಿ ಸಂವಿಧಾನದ ಆಶಯದಂತೆ ನಡೆದುಕೊಳ್ಳಲು ಶಾಲಾ ಮಕ್ಕಳಿಗೆ ತಿಳಿ ಹೇಳಲಾಗುತ್ತಿದೆ. ಜಾಥಾಕ್ಕೆ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ದೊರೆಯುತ್ತಿದೆ ಎಂದರು.ಜಿಪಂ ಸಿಇಒ ಸದಾಶಿವ ಪ್ರಭು, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಂಜುನಾಥ ಎಚ್.ವಿ. ಇದ್ದರು.