ಸೂರ್ಯ ಚಂದ್ರ ಇರುವರೆಗೆ ಸಂವಿಧಾನ ಬದಲಾವಣೆ ಸಾಧ್ಯವಿಲ್ಲ

| Published : Apr 15 2024, 01:24 AM IST

ಸಾರಾಂಶ

ರಾಮನಗರ: ಕೆಲ ರಾಜಕೀಯ ನಾಯಕರು ಇತ್ತೀಚೆಗೆ ಸಂವಿಧಾನ ಬದಲಾವಣೆ ಮಾತುಗಳನ್ನಾಡುತ್ತಿದ್ದಾರೆ. ಆದರೆ, ಸೂರ್‍ಯ ಚಂದ್ರ ಇರುವ ತನಕ ದೇಶದ ಸಂವಿಧಾನ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಸಮತಾ ಸೈನಿಕ ದಳದ ರಾಜ್ಯ ಕಾರ್ಯಾಧ್ಯಕ್ಷ ಡಾ.ಜಿ. ಗೋವಿಂದಯ್ಯ ಹೇಳಿದರು.

ರಾಮನಗರ: ಕೆಲ ರಾಜಕೀಯ ನಾಯಕರು ಇತ್ತೀಚೆಗೆ ಸಂವಿಧಾನ ಬದಲಾವಣೆ ಮಾತುಗಳನ್ನಾಡುತ್ತಿದ್ದಾರೆ. ಆದರೆ, ಸೂರ್‍ಯ ಚಂದ್ರ ಇರುವ ತನಕ ದೇಶದ ಸಂವಿಧಾನ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಸಮತಾ ಸೈನಿಕ ದಳದ ರಾಜ್ಯ ಕಾರ್ಯಾಧ್ಯಕ್ಷ ಡಾ.ಜಿ. ಗೋವಿಂದಯ್ಯ ಹೇಳಿದರು.

ನಗರದ ಐಜೂರು ವೃತ್ತದಲ್ಲಿ ಆಯೋಜಿಸಲಾಗಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರ 133 ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಈ ದೇಶದ ಆಸ್ತಿಯಾಗಿದ್ದಾರೆ. ಅವರು ಕೊಟ್ಟಿರುವ ಸಂವಿಧಾನವನ್ನು ಸೂರ್‍ಯ ಚಂದ್ರ ಇರುವ ತನಕ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದರು.

ಬಾಬಾ ಸಾಹೇಬ್ ಅವರನ್ನು ಸೋಲಿಸಿದ ಪಕ್ಷವೇ ಇಂದು ಸಂವಿಧಾನ ಉಳಿಸುವ ಕೆಲಸಕ್ಕೆ ಮುಂದಾಗಿದೆ. ಮನಸ್ಥಿತಿ ಬದಲಾವಣೆ ಮಾಡಿಕೊಂಡಿರುವ ಹಿನ್ನೆಲೆ ಬದಲಾವಣೆಯಾಗುತ್ತಿದೆ. ಇದೇ ಪಕ್ಷ ಈ ಹಿಂದೆ ಸಂವಿಧಾನವನ್ನು ಮನ ಬಂದಂತೆ ತಿದ್ದುಪಡಿ ಮಾಡಿತ್ತು. ಸಂವಿಧಾನ ಬದಲಾವಣೆ ಮಾಡಲು ಮುಂದಾದರೆ, ದೇಶದಲ್ಲಿ ಮತ್ತೊಂದು ಕೋರೆಗಾಂವ್ ಘಟನೆ ನಡೆಯಲಿದೆ ಎಂದು ಎಚ್ಚರಿಸಿದರು.

ದೇಶದಲ್ಲಿ ಸಂವಿಧಾನ ಜಾರಿಗೆ ಬರುವುದಕ್ಕೂ ಮುನ್ನ ಮಹಿಳೆಯರು, ಶೂದ್ರರು, ಹಿಂದುಳಿದವರು, ಅಸ್ಪೃಶ್ಯರು ಪ್ರಾಣಿ ಪಕ್ಷಿಗಳಂತೆ ಹೀನಾಯ ಬದುಕನ್ನು ಸಾಗಿಸುತ್ತಿದ್ದೆವು. ಮನುಧರ್ಮಶಾಸ್ತ್ರದ ಸಂಪ್ರಾದಾಯಿಕ ನಿಯಮಗಳಿಂದ ಶೋಷಣೆಗೆ ಒಳಗಾಗಿದ್ದರು. ಈ ಜೀವವಿರೋಧಿ ಮನುಧರ್ಮಶಾಸ್ತ್ರವನ್ನು ಸುಟ್ಟು ಮಾನವತಾ ವಾದದ ಸಂವಿಧಾನವನ್ನು ರಚಿಸಿಕೊಟ್ಟು ನಮ್ಮೆಲ್ಲರ ಸ್ವಾಭಿಮಾನ ಸ್ವಾವಲಂಬನೆ ಮತ್ತು ಗೌರವಯುತ ಬದುಕಿಗೆ ಅಂಬೇಡ್ಕರ್ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಹೇಳಿದರು.

ಹೆರಿಗೆ ರಜೆ, ಸಮಾನ ವೇತನ, ಮತದಾನದ ಹಕ್ಕು, ಸಮಾನ ಅವಕಾಶ ನೀಡುವುದು ಬಾಬಾ ಸಾಹೇಬರ ಮುಖ್ಯ ಉದ್ದೇಶವಾಗಿತ್ತು. ದೇಶದ ಪ್ರಧಾನಿ ಹಾಗೂ ಸಾಮಾನ್ಯ ಪ್ರಜೆಗಳು ಒಂದು ಮತ ಚಲಾವಣೆಯ ಅಧಿಕಾರವನ್ನು ನೀಡಲಾಗಿದೆ. ಆಮೂಲಕ ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಸಮಾನರು ಎಂಬ ಅಂಶವನ್ನು ಎತ್ತಿ ತೋರಿಸಿದ್ದಾರೆ ಎಂದು ಗೋವಿಂದಯ್ಯ ಹೇಳಿದರು.

ಈ ವೇಳೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.

ಕಾರ್‍ಯಕ್ರಮದಲ್ಲಿ ಜಿಲ್ಲಾ ದಲಿತ ಸಂಘಟನೆಯ ಒಕ್ಕೂಟದ ಅಧ್ಯಕ್ಷ ಶಿವಕುಮಾರಸ್ವಾಮಿ, ಮುಖಂಡರಾದ ಚಲುವಾರಾಜು, ಲಕ್ಷಣ್, ಮರಳವಾಡಿ ಮಂಜು, ಗೋವಿಂದ, ಚಂದ್ರು ಮತ್ತಿತರರು ಹಾಜರಿದ್ದರು.14ಕೆಆರ್ ಎಂಎನ್ 4.ಜೆಪಿಜಿ

ರಾಮನಗರದ ಐಜೂರು ವೃತ್ತದಲ್ಲಿ ಭಾನುವಾರ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣೆ ಮಾಡಲಾಯಿತು.