ಶಿಕ್ಷಣ ಕೇವಲ ಉದ್ಯೋಗ ಪಡೆಯಲು ಸೀಮಿತವಾಗದೆ, ಉತ್ತಮ ನಾಗರಿಕರಾದಾಗ ಮಾತ್ರ ಸಂವಿಧಾನ ದಿನ ಅರ್ಥಪೂರ್ಣವಾಗಲಿದೆ ಎಂದು ತಹಸೀಲ್ದಾರ್ ರವಿಕುಮಾರ್ ಕೊರವರ ಹೇಳಿದರು.
ಸವಣೂರು: ಶಿಕ್ಷಣ ಕೇವಲ ಉದ್ಯೋಗ ಪಡೆಯಲು ಸೀಮಿತವಾಗದೆ, ಉತ್ತಮ ನಾಗರಿಕರಾದಾಗ ಮಾತ್ರ ಸಂವಿಧಾನ ದಿನ ಅರ್ಥಪೂರ್ಣವಾಗಲಿದೆ ಎಂದು ತಹಸೀಲ್ದಾರ್ ರವಿಕುಮಾರ್ ಕೊರವರ ಹೇಳಿದರು.
ಪಟ್ಟಣದ ಡಾ. ವಿ.ಕೃ. ಗೋಕಾಕ ಸಾಂಸ್ಕೃತಿಕ ಭವನದಲ್ಲಿ ತಾಲೂಕು ಆಡಳಿತ, ತಾಪಂ, ಸಮಾಜ ಕಲ್ಯಾಣ ಇಲಾಖೆ, ಪುರಸಭೆ ಹಾಗೂ ವಿವಿಧ ದಲಿತ ಸಂಘಟನೆಗಳ ಒಕ್ಕೂಟಗಳ ಸಹಯೋಗದೊಂದಿಗೆ ಏರ್ಪಡಿಸಲಾಗಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇಡೀ ವಿಶ್ವದಲ್ಲಿಯೇ ನಮ್ಮ ದೇಶ ಅತ್ಯಂತ ಶ್ರೇಷ್ಠ ಸಂವಿಧಾನ ಹೊಂದಿದೆ. ನಮ್ಮ ಸಂವಿಧಾನವು ಕೇವಲ ಕಾನೂನು ಪುಸ್ತಕವಲ್ಲ; ಅದು ಜನರ ಆಶಯಗಳು, ಹಕ್ಕುಗಳು, ಜವಾಬ್ದಾರಿಗಳು ಮತ್ತು ಅಭಿವೃದ್ಧಿಯ ದಿಕ್ಕು ತೋರುವ ದೀಪಸ್ತಂಭವಾಗಿದೆ. ಡಾ. ಬಿ. ಆರ್. ಅಂಬೇಡ್ಕರ್ ಮಾರ್ಗದರ್ಶನದಲ್ಲಿ ರಚನೆಗೊಂಡ ನಮ್ಮ ಸಂವಿಧಾನ ವಿಶ್ವದಲ್ಲೇ ಅತ್ಯಂತ ದೊಡ್ಡ ಮತ್ತು ಪ್ರಗತಿಪರ ಸಂವಿಧಾನಗಳಲ್ಲಿ ಒಂದಾಗಿದೆ. ಅಂಬೇಡ್ಕರ್ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯೋಣ ಎಂದು ಕರೆ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಸುಭಾಸ ಮಜ್ಜಗಿ ಮಾತನಾಡಿ, ಮೇಲು, ಕೀಳು ಎಂಬ ಭೇದ-ಭಾವಗಳನ್ನು ಕಿತ್ತೊಗೆದು, ಸಮಾನತೆಯ ತತ್ವದ ಮೇಲೆ ದೇಶದ ಆಡಳಿತಯಂತ್ರ ಸಾಗಬೇಕು ಎಂಬುದು ಸಂವಿಧಾನದ ಗುರಿಯಾಗಿದೆ. ಮಕ್ಕಳು ಉತ್ತಮ ಶಿಕ್ಷಣ ಪಡೆದು ಭವಿಷ್ಯದಲ್ಲಿ ಉತ್ತಮ ನಾಗರಿಕರಾಗಿ ದೇಶದ ಅಭಿವೃದ್ಧಿಗೆ ಕಾರಣೀಭೂತರಾಗಬೇಕು ಎಂದು ಕರೆ ನೀಡಿದರು.
ಸಂವಿಧಾನ ದಿನದ ಕುರಿತಾಗಿ ಏರ್ಪಡಿಸಿದ್ದ ಚಿತ್ರಕಲೆ, ಭಾಷಣ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಿ ವಿಜೇತರಾದ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಹಾಗೂ ಸಂವಿಧಾನ ಪೀಠಿಕೆಯ ಸ್ಮರಣಿಕೆ ನೀಡಿ ಗೌರವಿಸಲಾಯಿತು.ಶ್ರೀಮತಿ ಲಲಿತಾದೇವಿ ಗುರುಸಿದ್ದಪ್ಪ ಸಿಂಧೂರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಮಹೇಂದ್ರ ದೊಡ್ಡಮನಿ ಸಂವಿಧಾನದ ಕುರಿತು ಉಪನ್ಯಾಸ ನೀಡಿದರು.
ಇದಕ್ಕೂ ಪೂರ್ವದಲ್ಲಿ ಅಂಬೇಡ್ಕರ್ ವೃತ್ತದಲ್ಲಿ ತಾಲೂಕು ಆಡಳಿತ ವತಿಯಿಂದ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ತದನಂತರ ಶಾಲಾ ವಿದ್ಯಾರ್ಥಿಗಳಿಂದ ಸಂವಿದಾನದ ಕುರಿತು ಭಿತ್ತಿಪತ್ರಗಳನ್ನು ಪ್ರದರ್ಶಿಸುವ ಮೂಲಕ ತಹಸೀಲ್ದಾರ್ ಕಾರ್ಯಾಲಯದ ವರೆಗೂ ಮೆರವಣಿಗೆ ಕೈಗೊಳ್ಳಲಾಯಿತು.ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಜೀವನ್ ಪಮ್ಮಾರ, ಎಸ್‌ಐ ರಂಗನಾಥ ಅಂತರಗಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಫ್. ಬಾರ್ಕಿ, ಕೃಷಿ ಸಹಾಯಕ ನಿರ್ದೇಶಕಿ ಸವಿತಾ ಚಕ್ರಸಾಲಿ, ಶಿರಸ್ತೇದಾರ್ ಎಸ್.ಎಸ್. ಪಾಟೀಲ, ದಲಿತ ಮುಖಂಡರಾದ ಉಮೇಶ್ ಮೈಲಮ್ಮನವರ, ಸಿದ್ದಪ್ಪ ಬಾಲಪ್ಪನವರ, ರಂಗಣ್ಣ ಮಲ್ಲಮ್ಮನವರ, ಪ್ರವೀಣ್ ಬಾಲೆಹೊಸೂರ್, ನಾಗರಾಜ್ ಹರಿಜನ, ಮಲ್ಲೇಶ್ ಹರಿಜನ, ಕರವೇ ತಾಲೂಕಾಧ್ಯಕ್ಷ ಸುರೇಶ್ ತಳವಾರ, ರಾಘವೇಂದ್ರ ಬಾಲೆಹೊಸೂರ, ನಮ್ಮ ಕರ್ನಾಟಕ ಸೇನೆ ತಾಲೂಕಾಧ್ಯಕ್ಷ ಪರಶುರಾಮ ಈಳಗೇರ ಇದ್ದರು. ನಿಲಯ ಮೇಲ್ವಿಚಾರಕರಾದ ಶಶಿಧರ ಚರಂತಿಮಠ ಕಾರ್ಯಕ್ರಮ ನಿರೂಪಿಸಿದರು. ಸರೋಜಾ ಕುಂಬಾರ ಸ್ವಾಗತಿಸಿ, ವಂದಿಸಿದರು.