ಸಂವಿಧಾನ ಭಾರತದ ಪಾಲಿನ ಪವಿತ್ರ ಗ್ರಂಥ : ಸುರೇಶ್‌

| Published : Apr 30 2024, 02:03 AM IST

ಸಾರಾಂಶ

ಸಂವಿಧಾನ ಭಾರತದ ಪಾಲಿನ ಪವಿತ್ರ ಗ್ರಂಥ. ಈ ಗ್ರಂಥದ ಮೂಲಕ ಪ್ರಜಾಪ್ರಭುತ್ವಕ್ಕೊಂದು ಅರ್ಥ ಕಲ್ಪಿಸಿಕೊಡುವ ವ್ಯವಸ್ಥೆಯನ್ನು ಜಾರಿಗೆ ತಂದು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಪ್ರೇರಣೆ ಅಂಬೇಡ್ಕರ್ ಜೀವನ ಎಂದು ಸಾಮಾಜಿಕ ಹೋರಾಟಗಾರ ಡಿ.ಸುರೇಶ್ ಹೇಳಿದರು.

ಧರಗುಣಿ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ.

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಸಂವಿಧಾನ ಭಾರತದ ಪಾಲಿನ ಪವಿತ್ರ ಗ್ರಂಥ. ಈ ಗ್ರಂಥದ ಮೂಲಕ ಪ್ರಜಾಪ್ರಭುತ್ವಕ್ಕೊಂದು ಅರ್ಥ ಕಲ್ಪಿಸಿಕೊಡುವ ವ್ಯವಸ್ಥೆಯನ್ನು ಜಾರಿಗೆ ತಂದು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಪ್ರೇರಣೆ ಅಂಬೇಡ್ಕರ್ ಜೀವನ ಎಂದು ಸಾಮಾಜಿಕ ಹೋರಾಟಗಾರ ಡಿ.ಸುರೇಶ್ ಹೇಳಿದರು.ತಾಲೂಕಿನ ಧರಗುಣಿ ಗ್ರಾಮದಲ್ಲಿ ಜೈ ಭೀಮ್ ಯುವಕರ ಸಂಘದಿಂದ ಏರ್ಪಡಿಸಿದ್ದ 133ನೇ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು. ಸಮಾನತೆಯ ಹರಿಕಾರ, ಸಂವಿಧಾನ ಶಿಲ್ಪಿ, ಹೊಸ ಭಾರತದ ನಿರ್ಮಾತೃ ದೇಶ ಕಂಡ ಮಹಾನ್ ಚೇತನ ಇವರು. ಇಡೀ ಭಾರತಕ್ಕೆ ಸ್ಫೂರ್ತಿ ತುಂಬಿದವರು. ಅಸ್ಪೃಶ್ಯತೆ, ಅಸಮಾನತೆ ವಿರುದ್ಧ ಹೋರಾಡಿದ ಮಾರ್ಗದರ್ಶಿ. ಮಹಿಳಾ ಸಮಾನತೆ, ಪ್ರಗತಿಯ ಕನಸು ಕಂಡ ನಾಯಕ. ಇಂತಹ ಮೇರು ವ್ಯಕ್ತಿತ್ವ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರದು ಎಂದು ಹೇಳಿದರು.

ಅಂಬೇಡ್ಕರ್ ಬಾಲ್ಯದ ದಿನಗಳಲ್ಲಿ ಬರೀ ಕಷ್ಟವನ್ನೇ ಕಂಡಿದ್ದವರು. ಅಸ್ಪೃಶ್ಯತೆ ಎಂಬ ಭೂತ ಬಲವಾಗಿ ಬೇರೂರಿದ್ದ ಆ ಕಾಲದಲ್ಲಿ ಅಂಬೇಡ್ಕರ್ ತುಂಬಾ ನೋವುಂಡಿದ್ದರು. ಇದೇ ನೋವಿನ ಜೀವನ ಅವರನ್ನು ಒಬ್ಬ ಹೋರಾಟಗಾರರನ್ನಾಗಿ ರೂಪಿಸಿತ್ತು. ಹೀಗೆ ಛಲದಿಂದ ಭವ್ಯ ಭಾರತದ ಕನಸು ಕಾಣುತ್ತಾ ಕಷ್ಟದ ನಡುವೆಯೂ ಬೆಳೆದು ದೇಶದ ನಾಯಕರಲ್ಲಿ ಒಬ್ಬರಾದವರು ಎಂದರು.ಗ್ರಂಥಾಪಾಲಕ ಅರುಣ್‌ಕುಮಾರ್ ಮಾತನಾಡಿ, ಸಾಮಾಜಿಕ ಸಮಾನತೆಗೆ ಜೀವನವನ್ನೆ ಮುಡಿಪಿಟ್ಟು, ನಮಗೆಲ್ಲಾ ವಾಕ್ ಸ್ವಾತಂತ್ರ್ಯ, ಸಮಾನವಾಗಿ ಬದುಕುವ ಸ್ವಾತಂತ್ರ್ಯ ನೀಡಲು ಮುಂದಾದ ಅಂಬೇಡ್ಕರ್ ಜೀವನ ಮತ್ತು ಸಾಧನೆ ನಮಗೆಲ್ಲಾ ಪ್ರೇರಣೆ ಎಂದು ತಿಳಿಸಿದರು.

ಸಂವಿಧಾನದ ಫಲವಾಗಿ ನಾವುಗಳು ಗೌರವದಿಂದ ಬದುಕು ನಡೆಸುತ್ತಿದ್ದೆವೆ. ಎಲ್ಲರೂ ಸಮಾನರು ಅನ್ನುವ ದೃಷ್ಟಿಯಿಟ್ಟುಕೊಂಡು ರಚನೆಯಾದ ನಮ್ಮ ಸಂವಿಧಾನ ಜಗತ್ತಿನ ಅತ್ಯಂತ ಶ್ರೇಷ್ಠ ಸಂವಿಧಾನ ಎಂದರೆ ತಪ್ಪಾಗಲಾರದು. ಅಂತಹ ಸಂವಿಧಾನ ನೀಡಿದ ಅಂಬೇಡ್ಕರ್‌ ಯಾವಾಗಲೂ ಮನಸ್ಸಿನಲ್ಲಿ ನೆಲೆಯೂರಿರುತ್ತಾರೆ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜೈ ಭೀಮ್ ಯುವಕರ ಸಂಘದ ಅಧ್ಯಕ್ಷ ಪಿ.ಉಮೇಶ್, ಅಂಬೇಡ್ಕರ್ ಎಂದರೆ ಶಕ್ತಿ, ಧ್ವನಿ ಇಲ್ಲದವರಿಗೆ ಧ್ವನಿಯಾಗಿ, ಶಕ್ತಿ ಇಲ್ಲದವರಿಗೆ ಆತ್ಮಸ್ಥೈರ್ಯ ತುಂಬುವ ಸಂವಿಧಾನದ ಮೂಲಕ ಅಂಬೇಡ್ಕರ್ ತತ್ವ, ಆದರ್ಶಗಳು ಉಳಿಸಿಕೊಟ್ಟಿದ್ದಾರೆ ಎಂದರು.ಇದೇ ವೇಳೆ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರದೊಂದಿಗೆ ಯುವಕರು ಧರಗುಣಿ, ಹಿರೇಕೊಳಲೆ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಬೈಕ್ ಜಾಥಾ ನಡೆಸಿದರು.ಈ ಸಂದರ್ಭದಲ್ಲಿ ಯುವಕರ ಸಂಘದ ವಿಜಯಕುಮಾರ್, ಲೋಹಿತ್, ಗಿರೀಶ್, ಪರಮೇಶ್, ಸಂತೋಷ್, ಹರೀಶ್, ರವಿ, ಮನುಕುಮಾರ್, ಶ್ರೀಕಾಂತ್, ಮುಖಂಡರಾದ ಉಮೇಶ್‌ಕುಮಾರ್, ಚಂದ್ರಶೇಖರ್, ಸುರೇಶ್, ಹಾಲಪ್ಪ, ಕಾಳಮ್ಮ, ಮನುಕುಮಾರ್ ಹಾಜರಿದ್ದರು. 29 ಕೆಸಿಕೆಎಂ 1ಚಿಕ್ಕಮಗಳೂರು ತಾಲೂಕಿನ ಧರಗುಣಿ ಗ್ರಾಮದಲ್ಲಿ ಜೈ ಭೀಮ್ ಯುವಕರ ಸಂಘದಿಂದ ಏರ್ಪಡಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿಯನ್ನು ಸುರೇಶ್‌ ಉದ್ಘಾಟಿಸಿದರು. ಉಮೇಶ್‌, ಅರುಣ್‌ಕುಮಾರ್‌, ಲೋಹಿತ್‌, ಗಿರೀಶ್‌ ಇದ್ದರು.