ಸುಪ್ರೀಂಕೋರ್ಟ್‌, ಹೈಕೋರ್ಟ್‌ಗಳ ತೀರ್ಪು ಓದುವ ರೂಢಿ ಬೆಳೆಸಿಕೊಳ್ಳಬೇಕು. ಸಂವಹನ ಕಲೆ, ನಿರಂತರ ಕಲಿಕೆ ಮತ್ತು ನ್ಯಾಯದ ಪರ ಅಚಲವಾದ ಬದ್ಧತೆ, ಸಮಯ ಪ್ರಜ್ಞೆ ಹಾಗೂ ವೃತ್ತಿಪರ ಪ್ರವೃತ್ತಿ ಕೈಗೊಳ್ಳಬೇಕಿದೆ.

ಧಾರವಾಡ:

ಸಂವಿಧಾನ ಕೇವಲ ಕಾಯ್ದೆ, ಕಾನೂನು ಅಲ್ಲ. ಧ್ವನಿ ಇಲ್ಲದವರ ಮತ್ತು ಮೂಲಭೂತ ಹಕ್ಕುಗಳ ವಂಚಿತರನ್ನು ರಕ್ಷಿಸುವ ಮಹಾನಗ್ರಂಥ ಎಂದು ಹೈಕೋರ್ಟ್‌ ನ್ಯಾಯಮೂರ್ತಿ ಎಸ್. ಸುನಿಲದತ್ ಯಾದವ್ ಅಭಿಪ್ರಾಯಪಟ್ಟರು.

ಇಲ್ಲಿನ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕಾನೂನು ಶಾಲೆಯೂ ಏರ್ಪಡಿಸಿದ್ದ ರಾಜ್ಯಮಟ್ಟದ 12ನೇ ಕಲ್ಪಿತ ನ್ಯಾಯಾಲಯ ಸ್ಪರ್ಧೆಯನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ಸುಪ್ರೀಂಕೋರ್ಟ್‌, ಹೈಕೋರ್ಟ್‌ಗಳ ತೀರ್ಪು ಓದುವ ರೂಢಿ ಬೆಳೆಸಿಕೊಳ್ಳಬೇಕು. ಸಂವಹನ ಕಲೆ, ನಿರಂತರ ಕಲಿಕೆ ಮತ್ತು ನ್ಯಾಯದ ಪರ ಅಚಲವಾದ ಬದ್ಧತೆ, ಸಮಯ ಪ್ರಜ್ಞೆ ಹಾಗೂ ವೃತ್ತಿಪರ ಪ್ರವೃತ್ತಿ ಕೈಗೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ಮಾಡಿದರು.

ಚುನಾವಣಾ ಸಮಯದಲ್ಲಾಗುವ ಸಮಸ್ಯೆ, ಸ್ಥಳಾಂತರ ಮತ್ತು ಮರಣಹೊಂದಿದವರನ್ನು ಚುನಾವಣಾ ಪಟ್ಟಿಯಲ್ಲಿ ತೆಗೆದು ಹಾಕುವುದು, ತಾಂತ್ರಿಕ ದೋಷಗಳಿಂದ ಉಂಟಾಗುವ ಸಮಸ್ಯೆ ಬಗೆಹರಿಸಲು ನಿಖರವಾದ ವಿಶೇಷ ಸಮಗ್ರ ಪರಿಷ್ಕರಣೆ ಎಷ್ಟು ಅಗತ್ಯ ಎಂಬುದನ್ನು ವಿದ್ಯಾರ್ಥಿಗಳು ಚಿಂತಿಸಬೇಕು ಎಂದರು.

ಹಿಂದೆ ಕಾನೂನು ಪದವಿಯನ್ನು ವಿದ್ಯಾರ್ಥಿಗಳು ಎರಡನೇ ಆಯ್ಕೆಯಾಗಿ ಆರಿಸಿಕೊಳ್ಳುತ್ತಿದ್ದರು. ಆದರೆ, ಇಂದು ಕಾನೂನು ಪದವಿ ಮೊದಲನೆಯ ಆಯ್ಕೆಯಾಗಿ ಗುರುತಿಸಿಕೊಂಡಿದೆ. ಕಾನೂನು ವಿದ್ಯಾರ್ಥಿಗಳೆಲ್ಲರೂ ವೃತ್ತಿಯ ಬುನಾದಿ, ಪ್ರಾಮಾಣಿಕತೆ ಮತ್ತು ನಿಷ್ಠೆಯ ಪ್ರಮುಖ ಲಕ್ಷಣ ಮೈಗೂಡಿಸಿಕೊಳ್ಳಬೇಕು. ವೃತ್ತಿ ಕಠಿಣತೆಗೆ ಹೊಂದಿಕೊಂಡರೆ ಯಶಸ್ಸು ತಾನಾಗಿಯೇ ಸಿಗುತ್ತದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಾನೂನು ವಿವಿ ಕುಲಪತಿ ಪ್ರೊ. ಡಾ. ಸಿ. ಬಸವರಾಜು ಮಾತನಾಡಿ, ವಿದ್ಯಾರ್ಥಿಗಳಿಗೆ ಸಾಂಪ್ರದಾಯಿಕ ಶಿಕ್ಷಣ ನೀಡುವ ಜತೆಗೆ ಪ್ರಾಯೋಗಿಕ ಅರಿವು ನೀಡುತ್ತಿದೆ. ನಿಜ ನ್ಯಾಯಾಲಯದ ಅನುಭವ ವಿದ್ಯಾರ್ಥಿಗಳಿಗೆ ಆಗಬೇಕು ಎನ್ನುವ ನಿಟ್ಟಿನಲ್ಲಿ ಇಂತಹ ಕಲ್ಪಿತ ನ್ಯಾಯಾಲಯ ಸ್ಪರ್ಧೆ ಏರ್ಪಡಿಸಲಾಗುತ್ತದೆ. ಸಂವಿಧಾನ ಜಾರಿಗೆ ಬಂದು 57 ವರ್ಷಗಳಾಗಿದೆ. ಆದರೆ, ಸಮಾಜದಲ್ಲಿ ಅನಕ್ಷರತೆ, ಬಡತನ ಹಾಗೂ ಕನಿಷ್ಠ ಕಾನೂನು ಜ್ಞಾನವಿಲ್ಲದ ಲಕ್ಷಾಂತರ ಜನ ಇನ್ನೂ ಇದ್ದಾರೆ. ಇಂತಹ ಮುಗ್ಧ ಜನರಿಗೆ ಸಾಮಾಜಿಕ ನ್ಯಾಯ ಕೊಡಿಸುವುದೇ ಇಂದಿನ ಪೀಳಿಗೆಯ ನ್ಯಾಯವಾದಿಗಳ ಕರ್ತವ್ಯ ಎಂದರು.

ಕುಲಸಚಿವೆ ಗೀತಾ ಕೌಲಗಿ, ನಿರ್ದೇಶಕರು, ಮೌಲ್ಯಮಾಪನ ಕುಲಸಚಿವ ಪ್ರೊ. ಡಾ. ರತ್ನಾ ಆರ್ ಭರಮಗೌಡರ್, ಸಹಾಯಕ ಪ್ರಾಧ್ಯಾಪಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಹಿರಿಯ ಉಪನ್ಯಾಸಕರು, ಸಿಂಡಿಕೇಟ್ ಸದಸ್ಯರು, ಬೋಧಕ/ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು, ಸಂಯೋಜಿತ ಕಾನೂನು ಕಾಲೇಜುಗಳ ಸ್ಪರ್ಧಾಳುಗಳು ಇದ್ದರು. ಸ್ಪರ್ಧೆಯ ಸಂಯೋಜನೆಯನ್ನು ಕಾನೂನು ವಿವಿಯ ಸಹಾಯಕ ಪ್ರಾಧ್ಯಾಪಕ ಡಾ. ರಂಗಸ್ವಾಮಿ, ಡಾ. ಭೀಮಾಬಾಯಿ ಎಸ್. ಮೂಲಗೆ ಮತ್ತು ಡಾ. ಗಿರೀಶ್ ಕೆ.ಸಿ ಹಾಗೂ ಸಹಾಯಕ ಸಂಯೋಜಕರಾದ ಡಾ. ಪಾರ್ವತಿ ಎಂ.ಕೆ., ಮಹಾದೇವಿ ಯು. ಕುಸುಗಲ್ ನೆರವೇರಿಸಿದರು.