ಸಾರಾಂಶ
ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ತಾಲ್ಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ ಹಾಗೂ ವಿವಿಧ ಸಂಘಟನೆಗಳ ಒಕ್ಕೂಟದ ಸಹಯೋಗದಲ್ಲಿ ಮಂಗಳವಾರ ಸಂವಿಧಾನ ಸಮರ್ಪಣಾ ದಿನವನ್ನು ಆಚರಿಸಲಾಯಿತು.ಈ ವೇಳೆ ತಹಸೀಲ್ದಾರ್ ಪ್ರಕಾಶ ಸಿಂದಗಿ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ರಚಿಸಿ, ನ.261949ರಂದು ದೇಶಕ್ಕೆ ಕೊಡುಗೆಯಾಗಿ ನೀಡಿದರು. ಆ ದಿನವನ್ನ ಸಂವಿಧಾನ ಸಮರ್ಪಣಾ ದಿನವಾಗಿ ಆಚರಿಸಲಾಗುತ್ತಿದೆ. ದೇಶದ ಪ್ರತಿಯೊಬ್ಬ ಪ್ರಜೆಗೆ ಸಂವಿಧಾನ ದಾರಿದೀಪ. ಕಾನೂನು, ನ್ಯಾಯ, ನೀತಿ, ಸಮಾನತೆ, ಸಹಬಾಳ್ವೆ ತತ್ವಗಳ ತಳಹದಿಯ ಮೇಲೆ ನಿಂತಿದ್ದು, ಎಲ್ಲರೂ ಸಂವಿಧಾನವನ್ನು ಗೌರವಿಸಿ ಪ್ರಜಾಪ್ರಭುತ್ವ ವ್ಯವಸ್ಥೆ ಬಲಪಡಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅರುಣ ಕೋರವಾರ ವಿಶೇಷ ಉಪನ್ಯಾಸ ನೀಡಿದರು. ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ತಾಲ್ಲೂಕು ಆಡಳಿತದ ವಿವಿಧ ಇಲಾಖೆಗಳ ಅಧಿಕಾರಿಗಳು, ವಿವಿಧ ಸಂಘಟನೆಗಳ ಮುಖಂಡರು ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಹಾಗೂ ಸಂವಿಧಾನ ಪೀಠಿಕೆಗೆ ಹೂವಿನ ಹಾರಹಾಕಿ ಗೌರವ ಸಲ್ಲಿಸಿದರು. ಅಲ್ಲದೇ, ಸಂವಿಧಾನ ಪೀಠಿಕೆ ಬೋಧಿಸಿ ಸಂವಿಧಾನ ಸಮರ್ಪಣಾ ದಿನ ಆಚರಿಸಿದರು.ಈ ವೇಳೆ ಪ.ಪಂ ಅಧ್ಯಕ್ಷರ ಪ್ರತಿನಿಧಿಯಾದ ಬಸವರಾಜ ದೇವಣಗಾಂವ, ಸದಸ್ಯರಾದ ಕಾಸುಗೌಡ ಬಿರಾದಾರ, ಕಸಾಪ ಅಧ್ಯಕ್ಷ ಜಿ.ಪಿ.ಬಿರಾದಾರ, ದಲಿತ ಸಂಘಟನೆಗಳ ಮುಖಂಡರಾದ ರಾವುತ್ ತಳಕೇರಿ, ಕಾಶೀನಾಥ ತಳಕೇರಿ, ಜಾನು ಗುಡಿಮನಿ, ಬಸವರಾಜ ತಳಕೇರಿ, ಯುವ ಮುಖಂಡರಾದ ಮುನೀರ್ ಅಹ್ಮದ್ ಮಳಖೇಡ, ವಿರೇಶ ಕುದುರಿ, ರಾಘವೇಂದ್ರ ಗುಡಿಮನಿ ಸೇರಿದಂತೆ ತಹಸೀಲ್ದಾರ್, ಪ.ಪಂ, ಪೊಲೀಸ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಂಘಟನೆಗಳ ಮುಖಂಡರು ಹಾಜರಿದ್ದರು. ಕಂದಾಯ ಇಲಾಖೆ ಶಿರಸ್ತೇದಾರ ಸುರೇಶ ಮ್ಯಾಗೇರಿ ಸ್ವಾಗತಿಸಿ, ವಂದಿಸಿದರು.