ದೇಶದ ತಾಯಿ ಸಂವಿಧಾನ, ಅದನ್ನು ಯಥಾಸ್ಥಿತಿ ಕಾಪಾಡಿ: ದಲಿತ ಮುಖಂಡ ವೆಂಕಟರಮಣಸ್ವಾಮಿ

| Published : Nov 23 2024, 12:30 AM IST

ದೇಶದ ತಾಯಿ ಸಂವಿಧಾನ, ಅದನ್ನು ಯಥಾಸ್ಥಿತಿ ಕಾಪಾಡಿ: ದಲಿತ ಮುಖಂಡ ವೆಂಕಟರಮಣಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದ ಅಖಂಡತೆಗೆ, ಸಾರ್ವಭೌಮತ್ವಕ್ಕೆ ಪೂರಕವಾದ ಲಿಖಿತ ಸಂವಿಧಾನವನ್ನು ಬರೆದು ಅಂಬೇಡ್ಕರ್ ಭಾರತದಂತಹ ಬೃಹತ್ ರಾಷ್ಟçಕ್ಕೆ ಅರ್ಪಿಸಿದ್ದಾರೆ ಎಂದು ಅಂಬೇಡ್ಕರ್ ಪ್ರಶಸ್ತಿ ಪುರಸ್ಕೃತ, ಹಿರಿಯ ದಲಿತ ಮುಖಂಡ ವೆಂಕಟರಮಣಸ್ವಾಮಿ (ಪಾಪು) ಸಲಹೆ ನೀಡಿದರು. ಚಾಮರಾಜನಗರದಲ್ಲಿ ಸಂವಿಧಾನ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಂವಿಧಾನ ಅರಿವು । ಜನಹಿತಾಶಕ್ತಿ ಹೋರಾಟ ವೇದಿಕೆ, ಕನ್ನಡ, ಸಂಸ್ಕೃತಿ ಇಲಾಖೆ ಆಯೋಜನೆ ಸಂವಿಧಾನ ಪೀಠಿಕೆ ಬೋಧನೆ

ಕನ್ನಡಪ್ರಭ ವಾರ್ತೆ ಚಾಮರಾಜನಗರ

ದೇಶದ ಅಖಂಡತೆಗೆ, ಸಾರ್ವಭೌಮತ್ವಕ್ಕೆ ಪೂರಕವಾದ ಲಿಖಿತ ಸಂವಿಧಾನವನ್ನು ಬರೆದು ಅಂಬೇಡ್ಕರ್ ಭಾರತದಂತಹ ಬೃಹತ್ ರಾಷ್ಟçಕ್ಕೆ ಅರ್ಪಿಸಿದ್ದಾರೆ ಎಂದು ಅಂಬೇಡ್ಕರ್ ಪ್ರಶಸ್ತಿ ಪುರಸ್ಕೃತ, ಹಿರಿಯ ದಲಿತ ಮುಖಂಡ ವೆಂಕಟರಮಣಸ್ವಾಮಿ (ಪಾಪು) ಸಲಹೆ ನೀಡಿದರು.

ನಗರದ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಜನಹಿತಾಶಕ್ತಿ ಹೋರಾಟ ವೇದಿಕೆ, ಬೆಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜೆಎಸ್‌ಎಸ್ ಮಹಿಳಾ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಸಹಯೋಗದಲ್ಲಿ ಆಯೋಜಿಸಿದ್ದ ಸಂವಿಧಾನ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ದೇಶದ ತಾಯಿ ಸಂವಿಧಾನ, ಅದನ್ನು ಯಥಾಸ್ಥಿತಿ ಕಾಪಾಡುವ ಮಹತ್ವದ ಜವಾಬ್ದಾರಿ ಎಲ್ಲರ ಮೇಲಿದೆ, ಆದರೆ ಈಚೆಗೆ ಸಂವಿಧಾನ ಬದಲಾವಣೆ ಮಾಡುವ ಹೇಳಿಕೆಗಳು ಬರುತ್ತಿರುವುದು ಆತಂಕಕಾರಿ, ಭಾರತದಂತಹ ಬೃಹತ್ ರಾಷ್ಟ್ರದಲ್ಲಿ ನಾನಾ ಭಾಷೆ, ಧರ್ಮ, ವಿವಿಧ ಜಾತಿಯ ಜನರಿದ್ದು, ಇವರ ಅಭಿವೃದ್ದಿಗೆ ಪೂರಕವಾದ ಸಂವಿಧಾನ ರಚನೆಯಾಗಿರುವುದು ಖುಷಿಯ ವಿಚಾರ ಎಂದರು.

ಚಾಮರಾಜನಗರ ಗಡಿಭಾಗದಲ್ಲಿ 60 ವರ್ಷಗಳ ಹಿಂದೆ ಸುತ್ತೂರು ಮಠಾಧೀಶರು ಜೆಎಸ್‌ಎಸ್ ಸಂಸ್ಥೆ ಶಿಕ್ಷಣ ಸಂಸ್ಥೆ ತೆರೆದು, ಸಾವಿರಾರು ಮಂದಿಗೆ ವಿದ್ಯಾದಾನ ಮಾಡಿ, ಅವರು ನೆಮ್ಮದಿಯಿಂದ ಜೀವನ ಸಾಗಿಸುವಂತಹ ವಾತಾವರಣ ನಿರ್ಮಾಣ ಮಾಡಿದ್ದಾರೆ. ಹಾಗೆಯೇ ಶಿಕ್ಷಣತಜ್ಞ ಕೆ.ಸಿ.ರಂಗಯ್ಯ ಅವರು ವಸತಿನಿಲಯ ಸ್ಥಾಪಿಸಿ ತಳಸಮುದಾಯದ ಜನರು ಶಿಕ್ಷಣ ಪಡೆಯುವ ಮಹತ್ವದ ಅವಕಾಶ ನೀಡಿದರು ಎಂದು ಪ್ರಶಂಸಿಸಿದರು.

ವಿಚಾರಮಂಡನೆ ಮಾಡಿದ ಭೋಗಾಪುರ ವಸತಿಯುಕ್ತ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಪಿ.ದೇವರಾಜು ಮಾತನಾಡಿ, ನಮ್ಮ ದೇಶದಲ್ಲಿ 7530 ಜಾತಿಗಳಿದ್ದು, ಅನೇಕ ವೈರುಧ್ಯಗಳಿವೆ, ಸಾವಿರಾರು ಭಾಷೆ ಮಾತನಾಡುವ ಜನರಿದ್ದಾರೆ, ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳೇ ಉರುಳಿದರೂ ಸಂವಿಧಾನಕ್ಕೆ ಯಾವುದೇ ಅಪಚಾರವಾಗಿಲ್ಲ. ಪ್ರಪಂಚದ 44 ದೇಶಗಳಲ್ಲಿ ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನದ ಬಗ್ಗೆ ಆಮೂಲಾಗ್ರ ಚರ್ಚೆಗಳಾಗುತ್ತಿರುವುದು ಸಂವಿಧಾನದ ಪವಿತ್ರತೆಯಿಂದ ಎಂದು ತಿಳಿಸಿದರು.

ಇಂದಿಗೂ ನಮ್ಮದೇಶದ ಮಹಿಳೆಯರು ಗೌರವದಿಂದ ಬದುಕುತ್ತಿದ್ದಾರೆ ಎಂದರೆ ಅದಕ್ಕೆ ಅಂಬೇಡ್ಕರ್ ಬರೆದ ಸಂವಿಧಾನವೇ ಕಾರಣ, ಅಂಬೇಡ್ಕರ್ ಅವರನ್ನು ಅರ್ಥ ಮಾಡಿಕೊಂಡರೆ ಸಂವಿಧಾನ ಸುಲಭವಾಗಿ ಅರ್ಥವಾಗುತ್ತದೆ. ಸಂವಿಧಾನ ಅರಿವು ಆಚರಣೆ ತೋರಿಕೆಗೆ ಸೀಮಿತವಾಗಬಾರದು, ಅದರ ಮೂಲ ಉದ್ದೇಶಗಳನ್ನು ಮಾನವೀಯ ನೆಲೆಗಟ್ಟಿನಲ್ಲಿ ಜನಪ್ರತಿನಿಧಿಗಳಾದವರು ತಮ್ಮ ಅವಧಿಯಲ್ಲಿ ಅನುಷ್ಠಾನಗೊಳಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಪ್ರಾಂಶುಪಾಲ ಡಾ.ಎನ್.ಮಹದೇವಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಿದ್ದಾರ್ಥ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸಿ,ರಂಗಸ್ವಾಮಿ ಸಂವಿಧಾನ ಪೀಠಿಕೆ ಬೋಧಿಸಿದರು.

ಈ ಸಂದರ್ಭದಲ್ಲಿ ಕೆಆರ್‌ಐಡಿಎಲ್ ಎಇಇ ಚಿಕ್ಕಲಿಂಗಯ್ಯ, ದಸಂಸ ಜಿಲ್ಲಾಸಂಯೋಜಕ ಕೆ.ಎಂ.ನಾಗರಾಜು, ಜಿಲ್ಲಾ ಜನಹಿತಾಶಕ್ತಿ ಹೋರಾಟ ವೇದಿಕೆ ಅಧ್ಯಕ್ಷ ರಾಮಸಮುದ್ರ ಸುರೇಶ್, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಎ.ಆರ್.ಸುಷ್ಮ, ಜೆಎಸ್‌ಎಸ್ ಶಿಕ್ಷಣ ಸಂಸ್ಥೆ ಸಾರ್ವಜನಿಕ ಸಂಪರ್ಕಾಧಿಕಾರಿ ಆರ್.ಎಂ.ಸ್ವಾಮಿ, ವಿದ್ಯಾರ್ಥಿನಿಯರು ಭಾಗವಹಿಸಿದ್ದರು.