ಸಾರಾಂಶ
ಕನ್ನಡಪ್ರಭವಾರ್ತೆ ತೀರ್ಥಹಳ್ಳಿ ಭಾರತ ದೇಶದ ಸಂವಿಧಾನ ಆಶಯದಂತೆ ಪ್ರತಿಯೊಬ್ಬ ಪ್ರಜೆಗೂ ಸಮಾನವಾಗಿ ಬದುಕುವ ಹಕ್ಕಿದೆ. ಆದರೂ, ಆಹಾರ, ಆಚರಣೆ, ಭಾಷೆ, ಉಡುಪು ಮುಂತಾದ ವಿಚಾರಗಳಲ್ಲಿ ಸಹಿಷ್ಣುತೆ ಮೀರಿ ವರ್ತಿಸುತ್ತಿದ್ದೇವೆ. ಪ್ರಸಕ್ತ ಸನ್ನಿವೇಶದಲ್ಲಿ ಉದ್ಭವ ಆಗಿರುವ ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಸಮಸ್ಯೆಗಳಿಗೆ ಸಂವಿಧಾನ ಒಂದೇ ಪರಿಹಾರವಾಗಿದೆ ಎಂದು ನ್ಯಾ. ನಾಗಮೋಹನ ದಾಸ್ ಹೇಳಿದರು.
ತಾಲೂಕಿನ ಕುಪ್ಪಳಿಯಲ್ಲಿ ಭಾನುವಾರ ಮಲೆನಾಡು- ಕರಾವಳಿ ಜನಪರ ಒಕ್ಕೂಟ ವತಿಯಿಂದ ನಡೆಯುತ್ತಿರುವ ಎರಡು ದಿನಗಳ ನಾಯಕತ್ವ ಶಿಬಿರದಲ್ಲಿ ಭಾರತ ಸಂವಿಧಾನದ ರಚನೆ, ಮೂಲತತ್ವಗಳು ಹಾಗೂ ಸವಾಲುಗಳ ಆಶಯದ ಕುರಿತು ಅವರು ಮಾತನಾಡಿದರು. ದೇಶದಲ್ಲಿ ಬದುಕುತ್ತಿರುವ ಎಲ್ಲ ಧರ್ಮದವರಿಗೂ ಸಂವಿಧಾನವೇ ಶ್ರೇಷ್ಠ ಗ್ರಂಥವಾಗಿದೆ ಎಂದೂ ಅಭಿಪ್ರಾಯ ಪಟ್ಟಿದ್ದಾರೆ.ಜನರಿಗೆ ಸಂವಿಧಾನವನ್ನು ಅರಿಯಬೇಕೆಂಬ ಹಸಿವೂ ಇದೆ. ದೇಶವನ್ನು ಸಮಗ್ರವಾಗಿ ಅರಿಯದೇ ಸಂವಿಧಾನದ ಮೂಲತತ್ವವನ್ನು ಅರಿಯುವುದು ಅಸಾಧ್ಯ. ನಮ್ಮಲ್ಲೇ ದೋಷ ಇಟ್ಟುಕೊಂಡು ಸಂವಿಧಾನ ಸರಿ ಇಲ್ಲ ಎನ್ನುವುದು ಹಾಗೂ ಇದನ್ನು ಬದಲಾಯಿಸುವುದೇ ನಮ್ಮ ಉದ್ದೇಶ ಎಂಬ ನಿಲುವು ಕೂಡ ಸರಿಯಲ್ಲ ಎಂದರು.
ಸ್ವಾತಂತ್ರ್ಯ ಬಂದು 75 ವರ್ಷಗಳೇ ಕಳೆದರೂ ನಾವು ಸಂವಿಧಾನವನ್ನು ತಿಳಿದಿಲ್ಲ. ಈ ಬಗ್ಗೆ ಸಮಗ್ರವಾಗಿ ಅರಿವು ಮೂಡಿಸುವ ಪ್ರಯತ್ನ ಕೂಡ ಆಡಳಿತದ ವ್ಯವಸ್ಥೆಯಿಂದ ನಡೆದಿಲ್ಲ. ಈ ದೇಶದಲ್ಲಿ ಸಂವಿಧಾನವನ್ನು ಓದದ ವಕೀಲರು ಮತ್ತು ನ್ಯಾಯಾಧೀಶರು ಸಹ ಇದ್ದಾರೆ. ಸಂವಿಧಾನವನ್ನು ಅನುಸರಿಸಿ ಸೌಹಾರ್ದತೆಯಿಂದ ನಡೆಯುವ ಬದಲಿಗೆ ಸಂಕುಚಿತ ಮನೋಭಾವದಿಂದ ಜನರ ನಡುವೆ ದ್ವೇಷದ ಗೋಡೆ ಕಟ್ಟುತ್ತಿರುವುದು ವಿಷಾದನೀಯ. ಎಲ್ಲದಕ್ಕೂ ಸಂವಿಧಾನ ಒಂದೇ ಪರಿಹಾರ ಎಂದೂ ಹೇಳಿದರು.ವಿಧಿ 370 ಕಾಯ್ದೆಗೆ ಸಂಬಂಧಿಸಿ ಸರ್ವೋಚ್ಚ ನ್ಯಾಯಾಲಯ ಆ ರಾಜ್ಯದ ಚುನಾಯಿತ ಸರ್ಕಾರ ಮತ್ತು ಜನರ ಅಭಿಪ್ರಾಯವನ್ನು ಕಡೆಗಣಿಸಿ ತಪ್ಪು ಮಾಡಿದೆ. ಈ ವಿಚಾರಕ್ಕೆ ಸಂಬಂಧಿಸಿ ಸರ್ಕಾರದ ಕಿವಿ ಹಿಂಡುವ ಸುವರ್ಣಾವಕಾಶವನ್ನು ಕೂಡ ಕೈ ಚೆಲ್ಲಿದೆ. ಇದೇ ಮಾನದಂಡದ ಆಧಾರದಲ್ಲಿ ಯಾವ ರಾಜ್ಯವನ್ನೂ ಬೇಕಾದರೂ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಬಹುದಾಗಿದೆ ಎಂದು ಸುಪ್ರೀಂ ಕೋರ್ಟ್‌ನ ತೀರ್ಪು ಬಗ್ಗೆ ಸಭಿಕರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.
ಕಾರ್ಯಕ್ರಮದಲ್ಲಿ ಕೆ.ಪಿ. ಶ್ರೀಪಾಲ್, ಜ್ಯೋತಿ ಮುಕ್ತೇಶ್ ಪಟೀಲ್, ಮನೋರಾಜ್, ಪ್ರೊ. ಸುದೀಪ್ ಹೆಗ್ಡೆ, ಮಲೆನಾಡು- ಕರಾವಳಿ ಜನಪರ ಒಕ್ಕೂಟದ ಸಂಚಾಲಕ ಅನಿಲ್ ಹೊಸಕೊಪ್ಪ, ಡಾ.ಸುಬ್ರಮಣ್ಯ ಹಾಗೂ ಶಿವಕುಮಾರ್ ಇದ್ದರು. ಸುಧೀರ್‌ಕುಮಾರ್ ಮುರೊಳ್ಳಿ ಕಾರ್ಯಕ್ರಮ ನಿರ್ವಹಿಸಿದರು.- - - -17ಟಿಟಿಎಚ್01: ತೀರ್ಥಹಳ್ಳಿ ತಾಲೂಕು ಕುಪ್ಪಳಿಯಲ್ಲಿ ನಡೆದ ನಾಯಕತ್ವ ಶಿಬಿರದಲ್ಲಿ ನ್ಯಾ. ನಾಗಮೋಹನ ದಾಸ್ ಮಾತನಾಡಿದರು.