ಸಾರಾಂಶ
ಮುನಿರಾಬಾದ್: ಸಂವಿಧಾನ ಜಾಥಾ ಮುನಿರಾಬಾದಿಗೆ ಪ್ರವೇಶಿಸುತ್ತಿದ್ದಂತೆ ಸ್ಥಳೀಯರು ಅದ್ಧೂರಿಯಾಗಿ ಸ್ವಾಗತಿಸಿದರು.ಅಂಬೇಡ್ಕರ ಪುತ್ಥಳಿಗೆ ಗ್ರಾಮಸ್ಥರು, ಗ್ರಾಪಂ ಸದಸ್ಯರಿಂದ ಹೂವಿನ ಸುರಿಮಳೆಗೈಯಲಾಯಿತು. ನಂತರ ಮೆರವಣಿಗೆಯಲ್ಲಿ ಸಂವಿಧಾನ ಜಾಥಾವನ್ನು ಗ್ರಾಪಂ ಕಾರ್ಯಾಲಯದಿಂದ ಬಸ್ ನಿಲ್ದಾಣದವರೆಗೆ ಕೊಂಡೊಯ್ಯಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ತಾಪಂ ಮಾಜಿ ಅಧ್ಯಕ್ಷ ಬಾಲಚಂದ್ರ, ಸಂವಿಧಾನವು ದೇಶದಲ್ಲಿ ಸಾವಿರಾರು ವರ್ಷಗಳಿಂದ ಬೀಡು ಬಿಟ್ಟಿದ್ದ ಜಾತಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ತೊಲಗಿಸುವ ನಿಟ್ಟಿನಲ್ಲಿ ಯಶಸ್ವಿಯಾಗಿದೆ. ಸಮಾಜದಲ್ಲಿ ಎಲ್ಲ ಜಾತಿಗಳಿಗೆ ಸಮಾನತೆ ನೀಡುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿದೆ ಎಂದರು.ಸ್ವಾತಂತ್ರ್ಯ ಪೂರ್ವದಲ್ಲಿ ಕುಂಬಾರನ ಮಗ ಕುಂಬಾರನಾಗಿಯೇ ಇರುತ್ತಿದ್ದ, ಚಪ್ಪಲಿ ಹೊಲಿಯುವ ಮಗ ಚಪ್ಪಲಿ ಹೊಲಿಯುವ ಕಸುಬನ್ನೇ ಅವಲಂಬಿಸಬೇಕಾದ ಪರಿಸ್ಥಿತಿ ಇತ್ತು. ಆದರೆ ಸ್ವಾತಂತ್ರ್ಯದ ನಂತರ ಡಾ.ಅಂಬೇಡ್ಕರ ದೇಶಕ್ಕೆ ನೀಡಿದ ಸಂವಿಧಾನದ ಫಲಶ್ರುತಿಯಿಂದ ಕುಂಬಾರನ ಮಗ, ಚಪ್ಪಲಿ ಹೊಲಿಯುವವನ ಮಗ ಸರ್ಕಾರದ ಉನ್ನತ ಹುದ್ದೆಗಳಿಗೆ ತೆರಳುತ್ತಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು ರಾಜಕೀಯದಲ್ಲಿ ಉನ್ನತ ಸ್ಥಾನಕ್ಕೆ ಏರಲು ಸಾಧ್ಯ ಎಂದರು. ಇದು ಸಂವಿಧಾನದ ಶಕ್ತಿ ಎಂದರು.ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಅಜೀಜ್ ಖಾನ್, ಉಪಾಧ್ಯಕ್ಷೆ ಸೌಭಾಗ್ಯ, ಸರ್ಕಾರಿ ಪ್ರೌಢಶಾಲೆಯ ಮುಖ್ಯಗುರು ರಾಜಸಾಬ್, ಹಿರಿಯ ಶಿಕ್ಷಕರಾದ ಮಾರ್ತಾಂಡರಾವ್ ದೇಸಾಯಿ, ಪಂಚಾಯಿತಿ ಸದಸ್ಯರು ಹಾಗೂ ಗ್ರಾಮದ ಹಿರಿಯರು ಮತ್ತು ಸಂಘ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.