ಸಾರಾಂಶ
- ಹೊನ್ನಾಳಿಯಲ್ಲಿ ಸಂವಿಧಾನ ಜಾಗೃತಿ ಕಾರ್ಯಕ್ರಮ । ನೆಹರು, ಇಂದಿರಾ ಗಾಂಧಿ, ಮನಮೋಹನ ಸಿಂಗ್‌ರಿಂದ ಜನಪರ ಯೋಜನೆ: ಹೇಳಿಕೆ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ಭಾರತದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಜನಿಸದೇ, ಸಂವಿಧಾನ ರಚಿಸದೇ ಇದ್ದಿದ್ದರೆ ಸಾಮಾನ್ಯ ಜನತೆಯ ಜೀವನ ಇಂದು ಊಹಿಸಲು ಆಗದಷ್ಟು ದುಸ್ತರವಾಗುತ್ತಿತ್ತು. ಇಂತಹ ಸಂವಿಧಾನವನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ ಎಂದು ಶಾಸಕ ಡಿ.ಜಿ.ಶಾಂತನಗೌಡ ಅಭಿಪ್ರಾಯಪಟ್ಟರು.ಪಟ್ಟಣದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಶನಿವಾರ ಸಂವಿಧಾನ ಸಮರ್ಪಣಾ ದಿನ ಅಂಗವಾಗಿ ಪ್ರಜಾಪರಿವರ್ತನಾ ವೇದಿಕೆ ಹಮ್ಮಿಕೊಂಡಿದ್ದ ಸಂವಿಧಾನ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಡಾ. ಬಿ.ಆರ್. ಅಂಬೇಡ್ಕರ್ ಅವರು ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಜೀವನ ರೂಪಿಸಿಕೊಳ್ಳುವಂತಹ ಸಂವಿಧಾನವನ್ನು ನಮಗೆ ನೀಡಿದ್ದಾರೆ. ಇದರಡಿಯಲ್ಲಿ ಇಡೀ ದೇಶದ ಜನತೆ ಶಾಂತಿ- ನೆಮ್ಮದಿಯಿಂದ ಬಾಳುವ ಜೊತೆಗೆ ದೇಶ ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಎಂದರು.
ದೇಶದ ಸ್ವಾತಂತ್ರ್ಯ ಆರಂಭದಲ್ಲಿ ಜವಾಹರ ಲಾಲ್ ನೆಹರು ಅವರು ದೂರದೃಷ್ಠಿಯಿಂದ ಪಂಚವಾರ್ಷಿಕ ಯೋಜನೆ ಜಾರಿಗೆ ತಂದರು. ಇದೇ ರೀತಿ ಪ್ರಧಾನಿ ಇಂದಿರಾ ಗಾಂಧಿ 20 ಅಂಶಗಳ ಕಾರ್ಯಕ್ರಮ ಜಾರಿಗೆ ತಂದು ಬಡವರ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಿದ್ದರು. ಅನಂತರದಲ್ಲಿ ಡಾ.ಮನಮೋಹನ್ ಸಿಂಗ್ ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ತಂದು ಕೂಲಿ ಕಾರ್ಮಿಕರು ಹಸಿವಿನಿಂದ ಬಳಲುವುದನ್ನು ದೂರ ಮಾಡಿದ್ದರು. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದೆ. ಆ ಮೂಲಕ ರಾಜ್ಯದ ಕಡುಬಡವರು ಹಿಂದುಳಿದವರು ಅಲ್ಪಸಂಖ್ಯಾತರು ಎಸ್ಸಿ ಮತ್ತು ಎಸ್ಟಿ ಸಮುದಾಯ ಸೇರಿದಂತೆ ಎಲ್ಲ ವರ್ಗದ ಬಡವರ ಕಲ್ಯಾಣ ಕಾರ್ಯ ಸುಗಮವಾಗಿ ನಡೆಯುವಂತಾಗಿದೆ ಎಂದು ಹೇಳಿದರು.ಪ್ರಜಾಪರಿವರ್ತನಾ ವೇದಿಕೆ ಕರ್ನಾಟಕ ರಾಜ್ಯ ಉಪಾಧ್ಯಕ್ಷ ಡಾ.ಸಯ್ಯದ್ ರೋಷನ್ ಮುಲ್ಲಾ ಅವರು ಸಂವಿಧಾನ ಆಶಯ ಕುರಿತು ಮಾತನಾಡಿ, ಎಲ್ಲರೂ ದೇಶದ ಸಂವಿದಾನದ ಆಶಯಗಳನ್ನು ಸರಿಯಾಗಿ ಆರ್ಥ ಮಾಡಿಕೊಳ್ಳಬೇಕು ಎಂದರು.
ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡಗಳ ನೌಕರರ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ ಡಿ.ಶಿವಶಂಕರ ಅವರು ಸಂವಿಧಾನ ಮೀಸಲಾತಿ ಕುರಿತಂತೆ ಮಾತನಾಡಿ, ಮೀಸಲಾತಿ ಎಂದರೆ ಕೇವಲ ಸರ್ಕಾರಿ ನೌಕರಿ ಪಡೆಯುವುದು ಅಷ್ಟೇ ಅಲ್ಲ, ಅದು ಸಾಮಾಜದಲ್ಲಿ ಜೀವನ ಭದ್ರತೆ ಪಡೆದುಕೊಳ್ಳುವ ದಲಿತ ಸಮುದಾಯದ ಹಕ್ಕಾಗಿದೆ ಎಂದು ತಿಳಿಸಿದರು.ಬಾಬಾ ಸಾಹೇಬ್ ಅಂಬೇಡ್ಕರ್ ಸೇವಾ ಸಮಿತಿ ಸಂಸ್ಥಾಪಕ ಅಧ್ಯಕ್ಷ ಎ.ಡಿ. ಈಶ್ವರಪ್ಪ ಅಧ್ಯಕ್ಷತೆ ವಹಿಸಿ, ದಲಿತ ವರ್ಗದವರು ಮೊದಲು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ತಮ್ಮಲ್ಲಿರುವ ಮೂಢನಂಬಿಕೆಗಳನ್ನು ಬಿಟ್ಟು ಇತರರಂತೆ ನಾವು ಅಭಿವೃದ್ಧಿ ಪಥದತ್ತ ಸಾಗಬೇಕಾಗಿದೆ ಎಂದರು.
ಮಾಜಿ ಡಿವೈಎಸ್‌ಪಿ ಸುಹೇಲ್ ಅಹ್ಮದ್ ಸಂವಿಧಾನ ಕುರಿತು ಮಾಡಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ. ಮಂಜಪ್ಪ ಗ್ರಂಥಾಲಯ ಉದ್ಘಾಟಿಸಿ ಮಾತನಾಡಿದರು. ಪ್ರಜಾ ಪರಿವರ್ತನಾ ವೇದಿಕೆ ತಾಲೂಕು ಅಧ್ಯಕ್ಷ ಕೆ.ಒ. ಹನುಮಂತಪ್ಪ ಸ್ವಾಗತಿಸಿದರು. ಪ್ರಜಾಪರಿವರ್ತನಾ ವೇದಿಕೆ ಜಿಲ್ಲಾಧ್ಯಕ್ಷ ಅರಕೆರೆ ಎಚ್.ಕೆ. ಕೃಷ್ಣಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.ಗಣ್ಯರನ್ನು ಸನ್ಮಾನಿಸಲಾಯಿತು. ಕುಮಾರಿ ತೃಪ್ತಿ ಬುದ್ಧವಂದನೆ ಮಾಡಿದರು. ಕಾರ್ಯಕ್ರಮದಲ್ಲಿ ಸಂವಿಧಾನ ಪೀಠಿಕೆ ಪ್ರತಿಜ್ಞಾವಿಧಿ ಸ್ವೀಕಾರ ನಡೆಯಿತು. ಪುರಸಭೆ ಅಧ್ಯಕ್ಷ ಎ.ಕೆ. ಮೈಲಪ್ಪ, ಮಾಜಿ ಜಿ.ಪಂ. ಅಧ್ಯಕ್ಷ ಆರ್.ನಾಗಪ್ಪ ಸೇರಿದಂತೆ ಹೊನ್ನಾಳಿ ತಾಲೂಕು ಸಮಿತಿ, ನಗರ ಘಟಕ ಹಾಗೂ ನ್ಯಾಮತಿ ತಾಲೂಕು ಘಟಕದ ಪದಾಧಿಕಾರಿಗಳು ಇದ್ದರು.
- - - -30ಎಚ್.ಎಲ್.ಐ1:ಹೊನ್ನಾಳಿ ಪಟ್ಟಣದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಪ್ರಜಾಪರಿವರ್ತನಾ ವೇದಿಕೆ ಹಮ್ಮಿಕೊಂಡಿದ್ದ ಸಂವಿಧಾನ ಜಾಗೃತಿ ಕಾರ್ಯಕ್ರಮವನ್ನು ಶಾಸಕ ಡಿ.ಜಿ.ಶಾಂತನಗೌಡ ಉದ್ಘಾಟಿಸಿದರು.