ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಭಾರತೀಯ ಬುದ್ಧಿಜೀವಿಗಳ ಪರಿಷತ್ತು ಸಂಸ್ಥೆಯು ನಗರದ ಖ್ಯಾತ ಮಧುಮೇಹ ತಜ್ಞ ಡಾ.ವಿ. ಲಕ್ಷ್ಮೀನಾರಾಯಣ್ ಅವರಿಗೆ ''''''''ಭಾರತದ ಮಹಾನ್ ಪುತ್ರ'''''''' ಪ್ರಶಸ್ತಿ ನೀಡಿದೆ.ಭಾರತೀಯ ಬುದ್ಧಿಜೀವಿಗಳ ಪರಿಷತ್ತಿನ (ಇಂಡಿಯನ್ ಕಾನ್‌ಫರೆನ್ಸ್ ಆಫ್ ಇಂಟಿಲೆಕ್ಚುಯಲ್ಸ್) ವತಿಯಿಂದ ಪರಿಸರ ಶಾಸನದ ಬಗೆಗೆ ಸಾಂವಿಧಾನಿಕ ವಿಚಾರಾಯಾಮಗಳು ಎಂಬ ವಿಷಯವನ್ನು ಕುರಿತು ಒಂದು ವಿಚಾರ ಸಂಕಿರಣ ಇತ್ತೀಚೆಗೆ ಬೆಂಗಳೂರಿನ ರಾಜಭವನ ರಸ್ತೆಯಲ್ಲಿರುವ ದ ಕ್ಯಾಪಿಟಲ್ ಹೋಟೆಲಿನಲ್ಲಿ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಭಾರತದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಡಾ.ಪ್ರಸನ್ನ ಬಿ. ವರಾಳೆ ಅವರು ಮೈಸೂರಿನ ಜನಪ್ರಿಯ ಡಾ.ವಿ.ಲಕ್ಷ್ಮೀನಾರಾಯಣ್ ಅವರಿಗೆ ಭಾರತದ ಮಹಾನ್ ಪುತ್ರ [ದ ಗ್ರೇಟ್ ಸನ್ ಆಫ್ ಇಂಡಿಯಾ] ಎಂಬ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಪರಿಷತ್ತಿನ ಅಧ್ಯಕ್ಷರಾಗಿರುವ, ಸರ್ವೋಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಡಾ. ವಿ. ಗೋಪಾಲಗೌಡ ಅವರು ಪ್ರಮಾಣ ಪತ್ರವನ್ನು ನೀಡಿದರು. ರಾಜ್ಯದ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಕೆ. ನಟರಾಜನ್ ಅತಿಥಿಯಾಗಿದ್ದರು. ಇಂತಹ ಉನ್ನತ ಗೌರವವನ್ನು ಮೈಸೂರಿನವರು ಸ್ವೀಕರಿಸಿರುವುದು ಇದೇ ಮೊದಲು .
ರಾಷ್ಟ್ರಕವಿ ಕುವೆಂಪು ಅವರ ವೈದ್ಯರಾಗಿ ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಡಾ.ವಿ. ಲಕ್ಷ್ಮೀನಾರಾಯಣ್ ಅವರಿಗೆ ಈಗಾಗಲೇ ಕುವೆಂಪು ವಿವಿ ಗೌರವ ಡಾಕ್ಟರೇಟ್, ರಾಜ್ಯ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿಗಳು ಸಂದಿವೆ.ಡಾ. ವಿ. ಲಕ್ಷೀನಾರಾಯಣ್ ಅವರು ಜನರ ಗೌರವಾದರಗಳಿಗೆ ಪಾತ್ರರಾದ ವೈದ್ಯರಾಗಿ, ರೋಗಿಗಳ ಸೂಕ್ಷ್ಮ ಸಮಸ್ಯೆಗಳನ್ನು ಅರಿತು ಚಿಕಿತ್ಸೆ ನೀಡುವ ದ್ರಷ್ಟಾರರಾಗಿ, ಕರುಣೆ ತುಂಬಿದ ಕಳಕಳಿಯುಳ್ಳ ಮಿತ್ರರಾಗಿ ಸಾವಿರಾರು ಜನರ ಜೀವರಕ್ಷಕರಾಗಿ ಮೈಸೂರಿನ ಪ್ರಜೆಗಳ ಮನಸ್ಸಿನಲ್ಲಿ ನೆಲೆಯೂರಿದ್ದಾರೆ. ಅವರನ್ನು ಇಂಡಿಯನ್ ಕಾನ್‌ಫರೆನ್ಸ್ ಆಫ್ ಇಂಟೆಲೆಕ್ಚುಯಲ್ಸ್ ಅತ್ಯುನ್ನತ ಗೌರವವನ್ನು ನೀಡಿ ಸತ್ಕರಿಸಿರುವುದಕ್ಕೆ ಮೈಸೂರಿಗರು ಹರ್ಷ ವ್ಯಕ್ತಪಡಿಸಿದ್ದಾರೆ.
ಒರಿಸ್ಸಾ ರಾಜ್ಯದ ನಿವೃತ್ತ ಮುಖ್ಯ ನ್ಯಾಯಮೂರ್ತಿ ಮತ್ತು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಆಗಿದ್ದ ವಿ. ಗೋಪಾಲಗೌಡ ಈ ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷರು. ಈ ಸಂಸ್ಥೆಯ ಪೋಷಕರಲ್ಲಿ ನ್ಯಾ. ಕೆ. ಶ್ರೀಧರರಾವ್ (ಗೌಹಾತಿಯ ಉಚ್ಛ ನ್ಯಾಯಾಲಯದ ವಿಶ್ರಾಂತ ಕಾರ್ಯಭಾರಿ ಮುಖ್ಯ ನ್ಯಾಯಮೂರ್ತಿ), ನ್ಯಾ. ಸಿ.ವೈ.ಸೋಮಯಾಜುಲು (ಉಚ್ಛನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ], ನ್ಯಾ. ಬಿ. ಚಂದ್ರಕುಮಾರ್, ನ್ಯಾ. ಅಶೋಕ ಬಿ. ಹಿಂಚೆಗೇರಿ, ನ್ಯಾ. ಹುಲುವಾಡಿ ಜಿ. ರಮೇಶ್, ನ್ಯಾ. ಡಾ. ಭಕ್ತವತ್ಸಲ (ಎಲ್ಲರೂ ಉಚ್ಚ ನ್ಯಾಯಾಲಯ ನ್ಯಾಯಮೂರ್ತಿಗಳು), ಪಿ.ಡಿ.ಟಿ. ಆಚಾರಿ, (ಲೋಕಸಭೆಯ ಮಹಾಸಚಿವರು), ಎಚ್.ಎಸ್.ಬ್ರಹ್ಮ (ಭಾರತ ಚುನಾವಣಾ ಆಯೋಗದ ವಿಶ್ರಾಂತ ಮುಖ್ಯ ಆಯುಕ್ತರು), ಡಾ.ಎಸ್.ಕ್ರಿಸ್ಟೋಫರ್ (ಡಿಆರ್‌ಡಿಓ ನ ವಿಶ್ರಾಂತ ಅಧ್ಯಕ್ಷರು), ಪಿ.ಎನ್.ಶ್ರೀನಿವಾಸಾಚಾರಿ (ರಾಜ್ಯ ಚುನಾವಣಾ ಆಯೋಗದ ವಿಶ್ರಾಂತ ಆಯುಕ್ತರು ಮತ್ತಿತರ ಪ್ರಖ್ಯಾತ ಮಹನೀಯರು ಮತ್ತು ಮಹಿಳೆಯರು ಈ ಸಂಸ್ಥೆಯಲ್ಲಿದ್ದಾರೆ.ಸಮಾಜದ ಶೋಷಿತ ವರ್ಗಗಳ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿರುವ ಈ ಸಂಸ್ಥೆಯು ಸಮಾಜದಲ್ಲಿ ಗಣನೀಯ ಪರಿವರ್ತನೆಯನ್ನು ತಂದಿರುವ ಮಹಾವ್ಯಕ್ತಿಗಳು ದೇಶಕ್ಕೆ ನೀಡಿರುವ ಮತ್ತು ನೀಡುತ್ತಿರುವ ಕೊಡುಗೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಿ ಗೌರವಿಸುತ್ತದೆ. ಸಂಸ್ಥೆಯು ಮಾನವೀಯತೆ, ರಾಷ್ಟ್ರೀಯತೆ ಮತ್ತು ಶಾಂತಿಗಳನ್ನು ಎತ್ತಿಹಿಡಿಯುವುದಲ್ಲದೆ ರಾಷ್ಟ್ರೀಯ ಸಂಘಟನೆಯಾಗಿ ರಾಷ್ಟ್ರದ ಏಕತೆ ಮತ್ತು ಅವಿಭಾಜ್ಯತೆಗಳ ನಿಸ್ವಾರ್ಥ ಸಾಧನೆಯ ಉದ್ದೇಶದಿಂದ ಶ್ರಮಿಸುತ್ತಿದೆ.