₹7.31 ಕೋಟಿಯಲ್ಲಿ 39 ಹೈಟೆಕ್ ಶೌಚಾಲಯ ನಿರ್ಮಾಣ

| Published : Oct 03 2024, 01:18 AM IST

ಸಾರಾಂಶ

ಗಾಂಧಿ ಜಯಂತಿಯ ನಿಮಿತ್ತ ವಿಶೇಷ ಯೋಜನೆಯೊಂದನ್ನು ಹಾಕಿಕೊಳ್ಳಲಾಗಿದ್ದು, ನಗರದಲ್ಲಿ ಈಗಿರುವ ಶೌಚಾಲಯಗಳನ್ನು ಮತ್ತು ಹೊಸದಾಗಿ ನಿರ್ಮಿಸಲಿರುವ ಶೌಚಾಲಯಗಳನ್ನು ಹೈಟೆಕ್ ಶೌಚಾಲಯಗಳನ್ನಾಗಿ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ತಿಳಿಸಿದರು.

ಕನ್ನಡಪ್ರಭ ವಾರ್ತೆ ಮುಧೋಳ

ಗಾಂಧಿ ಜಯಂತಿಯ ನಿಮಿತ್ತ ವಿಶೇಷ ಯೋಜನೆಯೊಂದನ್ನು ಹಾಕಿಕೊಳ್ಳಲಾಗಿದ್ದು, ನಗರದಲ್ಲಿ ಈಗಿರುವ ಶೌಚಾಲಯಗಳನ್ನು ಮತ್ತು ಹೊಸದಾಗಿ ನಿರ್ಮಿಸಲಿರುವ ಶೌಚಾಲಯಗಳನ್ನು ಹೈಟೆಕ್ ಶೌಚಾಲಯಗಳನ್ನಾಗಿ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ತಿಳಿಸಿದರು.

ಬುಧವಾರ ನಗರದ ವಿವಿಧ ವಾರ್ಡ್‌ಗಳಿಗೆ ಭೇಟಿ ನೀಡಿ, ಪರಿಶೀಲನೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಧೋಳ ನಗರಸಭೆಯ ವಿವಿಧ ವಾರ್ಡ್‌ಗಳಲ್ಲಿ ₹7.31 ಕೋಟಿ ಅಂದಾಜು ವೆಚ್ಚದಲ್ಲಿ 39 ಆಧುನಿಕ (ಹೈಟೆಕ್) ಶೌಚಾಲಯಗಳನ್ನು ನಿರ್ಮಿಸುವ ಮೂಲಕ ನಗರವನ್ನು ಬಯಲು ಮುಕ್ತ ಶೌಚಾಲಯದ ಮಹತ್ವದ ಹೆಜ್ಜೆ ಇಡಲಾಗುತ್ತಿದೆ. ಈ ಉಪಕ್ರಮವು ಸ್ವಚ್ಛ ಭಾರತ್ ಮಿಷನ್‌ನೊಂದಿಗೆ ಹೊಂದಿಕೆಯಾಗುತ್ತಿದೆ. ಇದು ಮುಧೋಳ ನಗರದ ನೈರ್ಮಲ್ಯವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸುನಂದಾ ತೇಲಿ, ಪೌರಾಯುಕ್ತ ಗೋಪಾಲ ಕಾಸೆ ,ಕಿರಿಯ ಅಭಿಯಂತರ ರಾಜು ಚವ್ಹಾಣ, ಕಿರಿ ಆರೋಗ್ಯ ನಿರೀಕ್ಷಕ ಸುಭಾಸ ಕಾಂಬಳೆ, ಹನುಮಂತ ಮಾಳಗಿ, ಭೀಮಶಿ ಬಳಬಟ್ಟಿ ಮತ್ತಿತರರು ಇದ್ದರು.

100 ಸಂಭ್ರಮದಲ್ಲಿ ಭಾಗಿ:

ಮಹಾತ್ಮ ಗಾಂಧೀಜಿ ಅವರು ಬೆಳಗಾವಿ ಕಾಂಗ್ರೆಸ್‌ ಅಧಿವೇಶದಲ್ಲಿ ಪಾಲ್ಗೊಂಡಿದ್ದರು. ಈ ಸಂಭ್ರಮಕ್ಕೆ ಇದೀಗ 100 ವರ್ಷ ತುಂಬಿದ ಹಿನ್ನೆಲೆಯಲ್ಲಿ ಮುಧೋಳ ಮತ್ತು ಲೋಕಾಪೂರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮುಧೋಳದಲ್ಲಿ ವಿಶಿಷ್ಟ ರೀತಿಯಲ್ಲಿ ಗಾಂಧಿ ಜಯಂತಿ ಆಚರಿಸಲಾಯಿತು.

ನಗರದ ಗಾಂಧಿ ಸರ್ಕಲ್‌ನಲ್ಲಿರುವ ಗಾಂಧೀಜಿ ಅವರ ಪ್ರತಿಮೆಗೆ ನಮನ ಸಲ್ಲಿಸಿದ ಬಳಿಕ ಪಾದಯಾತ್ರೆ ಮೂಲಕ ಡಾ.ಅಂಬೇಡ್ಕರ್ ಭವನದವರೆಗೆ ತೆರಳಲಾಯಿತು. ಮಾರ್ಗ ಮಧ್ಯೆ ಲಾಲ್‌ ಬಹದ್ದೂರ್ ಶಾಸ್ತ್ರಿಜಿ ಅವರ ಜೈ ಜವಾನ್ ಜೈ ಕಿಸಾನ್ ಘೋಷಣೆ ಪಠಿಸಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ ಹಾಗೂ ನಗರಸಭೆ ಅಧ್ಯಕ್ಷೆ ಸುನಂದಾ ತೇಲಿ ಅವರೊಂದಿಗೆ ಗಾಂಧೀ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ವೇಷಧಾರಿಗಳು, ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು, ಬಾಲಕರು ಭಾಗವಹಿಸಿದ್ದರು.