ಸಾರಾಂಶ
ಮುಖ್ಯಮಂತ್ರಿಗಳಿಂದ ಪ್ರಜಾಪ್ರಭುತ್ವ ಗಟ್ಟಿಗೊಳಿಸುವ ಕಾರ್ಯ: ಶಿವರಾಜ ತಂಗಡಗಿ
ಕನ್ನಡಪ್ರಭ ವಾರ್ತೆ ಕೊಪ್ಪಳ
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ನಿಮಿತ್ತ ರಾಜ್ಯದಲ್ಲಿ ಹಮ್ಮಿಕೊಂಡಿದ್ದ 2500 ಕಿಮೀ ಮಾನವ ಸರಪಳಿ ನಿರ್ಮಾಣದಲ್ಲಿ ಜಿಲ್ಲೆಯಲ್ಲಿ ಬರೋಬ್ಬರಿ 54 ಕಿಮೀ ಮಾನವ ಸರಪಳಿ ನಿರ್ಮಿಸಿ ದಾಖಲೆ ಮಾಡಲಾಯಿತು.ಜಿಲ್ಲೆಯ ಬೆಳಗಟ್ಟಿಯಿಂದ ಹಿಡಿದು ಮುನಿರಾಬಾದ್ ಸರಹದ್ದಿನವರೆಗೂ ಬರೋಬ್ಬರಿ 54 ಕಿಮೀ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ದಾರಿಯುದ್ದಕ್ಕೂ ವಿದ್ಯಾರ್ಥಿಗಳನ್ನು ಮೊದಲೇ ನಿಲ್ಲಿಸಿ, ಮಾನವ ಸರಪಳಿ ನಿರ್ಮಾಣ ಮಾಡಲಾಯಿತು.ದಾರಿಯುದ್ದಕ್ಕೂ ಸಂಭ್ರಮ:
ಮಾನವ ಸರಪಳಿ ಕಾರ್ಯಕ್ರಮದಲ್ಲಿ ನಿಗದಿಯಾಗಿದ್ದ ಮಾರ್ಗದುದ್ದಕ್ಕೂ ಮಕ್ಕಳ ಸಂಭ್ರಮ ಕಂಡು ಬಂತು. ದಾರಿಯುದ್ದಕ್ಕೂ ಎಲ್ಲಿ ನೋಡಿದರೂ ಮಕ್ಕಳೇ ಕಾಣುತ್ತಿದ್ದರು. ಶಾಲಾ ಸಮವಸ್ತ್ರದಲ್ಲಿ ಮಕ್ಕಳು ದಾರಿಯುದ್ದಕ್ಕೂ ನಿಂತಿರುವುದು ನೋಡುವುದಕ್ಕೆ ಅಂದ ಎನ್ನುವಂತೆ ಆಗಿತ್ತು.ಅದರಲ್ಲೂ ನಗರ ಪ್ರದೇಶಗಳಲ್ಲಿ ಮಕ್ಕಳ ಸಾಲುಗಟ್ಟಿ ನಿಂತಿದ್ದರಿಂದ ಸಂಚಾರಕ್ಕೆ ಸಮಸ್ಯೆಯಾಯಿತು. ಆದರೂ ಸಹ ಮಾರ್ಗವನ್ನು ಬದಲಾಯಿಸಿ, ಸಿದ್ಧತೆ ಮಾಡಿಕೊಂಡಿದ್ದರಿಂದ ಸಮಸ್ಯೆ ಅಷ್ಟಾಗಿ ಆಗಲಿಲ್ಲ.
ಪ್ರಜಾಪ್ರಭುತ್ವ ಗಟ್ಟಿ:ಕೊಪ್ಪಳ ನಗರದ ಅಶೋಕ ವೃತ್ತದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮಾನವ ಸರಪಳಿಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಖುದ್ದು ಮಕ್ಕಳೊಂದಿಗೆ ಮಾನವ ಸರಪಳಿಯಲ್ಲಿ ಕೈ ಹಿಡಿದು ನಿಂತಿದ್ದರು.ಇದಕ್ಕೂ ಮೊದಲು ಸಂವಿಧಾನ ಪೀಠಿಕೆ ಓದುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮುಖ್ಯಮಂತ್ರಿಗಳಿಂದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ಕಾರ್ಯ ಆಗುತ್ತಿದೆ ಎಂದು ಹೇಳಿದರು.
ರಾಜ್ಯಾದ್ಯಂತ 2500 ಕಿಮೀ ಮಾನವ ಸರಪಳಿ ನಿರ್ಮಾಣ ಮಾಡಲಾಗಿದೆ. ಇದು ಇತಿಹಾಸದಲ್ಲಿಯೇ ಮೊದಲು. ಹಿಂದೆಂದೂ ಇಂಥ ಮಹಾನ್ ಕಾರ್ಯ ಮಾಡಿಲ್ಲ ಎಂದರು.ಜಿಲ್ಲೆಯಲ್ಲಿ 54 ಕಿಮೀ ಮಾನವ ಸರಪಳಿ ನಿರ್ಮಾಣ ಮಾಡಲಾಗಿದೆ. ಜಿಲ್ಲಾಡಳಿತ ಶಕ್ತಿ ಮೀರಿ ಶ್ರಮಿಸಿ ಕಾರ್ಯವನ್ನು ಯಶಸ್ವಿಯಾಗಿ ಮಾಡಿದೆ. ಸಂವಿಧಾನದ ಜೀವಪರ ಸಂದೇಶವನ್ನು ಈ ಮಹಾನ್ ಕಾರ್ಯಕ್ರಮದ ಮೂಲಕ ಪ್ರತಿಯೊಬ್ಬರಿಗೂ ತಲುಪಿಸುವ ಕಾರ್ಯ ಮಾಡಲಾಗಿದೆ ಎಂದರು.
ಶಾಸಕ ರಾಘವೇಂದ್ರ ಹಿಟ್ನಾಳ, ಸಂಸದ ರಾಜಶೇಖರ ಹಿಟ್ನಾಳ, ವಿಪ ಸದಸ್ಯರಾದ ಹೇಮಲತಾ ನಾಯಕ, ಶಶಿಲ್ ನಮೋಶಿ, ಜಿಲ್ಲಾಧಿಕಾರಿ ನಲಿನ್ ಅತುಲ್, ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆ, ಎಸ್ಪಿ ಡಾ. ಎಲ್. ರಾಮ ಅರಸಿದ್ದಿ ಮೊದಲಾದವರು ಇದ್ದರು.15ಕೆಪಿಎಲ್22 ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಭಾಗವಹಿಸಿದರು.