ಸಾರಾಂಶ
ಕನ್ನಡಪ್ರಭ ವಾರ್ತೆ ಕಡೂರು
ಬಡ ಮತ್ತು ಮಧ್ಯಮ ವರ್ಗದ ಜನರು ಕಾರ್ಯಕ್ರಮಗಳನ್ನು ಮಾಡಲು ಕ್ಷೇತ್ರದಲ್ಲಿ 70 ಸಮುದಾಯ ಭವನಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದು ಶಾಸಕ ಕೆ..ಎಸ್. ಆನಂದ್ ಹೇಳಿದರು.ಅವರು ಕಡೂರು ಕ್ಷೇತ್ರದ ಉಡುಗೆರೆ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಭಾನುವಾರ ₹88 ಲಕ್ಷ ವೆಚ್ಚದಲ್ಲಿ 1.04 ಕಿ.ಮೀ. ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.ಮತ ನೀಡಿದವರಿಗೆ ಮೂಲ ಸೌಕರ್ಯಗಳನ್ನು ಮಾಡಿಕೊಡಬೇಕಾಗಿರುವುದು ಶಾಸಕನಾದ ನನ್ನ ಕರ್ತವ್ಯವಾಗಿದೆ. ಗ್ರಾಮಗಳ ಅಭಿವೃದ್ಧಿಗೆ ವಿಶೇಷ ಆದ್ಯತೆಯನ್ನು ನೀಡಿದ್ದು, ಉಡುಗೆರೆ ಗ್ರಾಮದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಮೊದಲ ಹಂತದಲ್ಲಿ ₹15 ಲಕ್ಷ ಹಣ ಬಿಡುಗಡೆಯಾಗಿದೆ. ಇಚ್ಛಾಶಕ್ತಿ ಮೂಲಕ ಭವನದ ಅಡಿಪಾಯವನ್ನು ಬೇಗ ಮುಗಿಸಿದಲ್ಲಿ ಮತ್ತೆ ಹಂತ ಹಂತವಾಗಿ ಅನುದಾನ ನೀಡಲಾಗುವುದು ಎಂದು ತಿಳಿಸಿದರು.
ಕ್ಷೇತ್ರದ ಪ್ರತಿ ಗ್ರಾಮಕ್ಕೆ ಭವನಗಳ ಅಗತ್ಯವಿದೆ. ಈ ನಿಟ್ಟಲ್ಲಿ ಕ್ಷೇತ್ರದಲ್ಲಿ 70 ಸಮುದಾಯ ಭವನಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದ್ದು, ಪ್ರಗತಿಯ ಹಂತದಲ್ಲಿವೆ. ಇನ್ನು ಉಳಿಯುವ ತಾಂಡ್ಯದವರೆಗೆ ರಸ್ತೆಯನ್ನು ಪೂರ್ತಿಗೊಳಿಸಲು ಇನ್ನಷ್ಟು ಅನುದಾನ ನೀಡಲಾಗುವುದು ಎಂದರು.ತಮ್ಮ ಗೆಲುವಿಗೆ ಅತಿ ಹೆಚ್ಚು ಮತ ನೀಡಿರುವ ಉಡುಗೆರೆ ತಾಂಡ್ಯ, ಸಣ್ಣೇನಹಳ್ಳಿ, ಬೈರಗೊಂಡನಹಳ್ಳಿ ದೇವಾಲಯದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ₹13 ಲಕ್ಷರೂ ಅನುದಾನ ನೀಡಲಾಗಿದೆ. ಗುಡದಹಳ್ಳಿಗೆ ಶೌಚಾಲಯ ನಿರ್ಮಿಸಿ ಕೊಡುವುದಾಗಿ ತಿಳಿಸಿದರು. ಮತದಾರರು ನೀಡಿರುವ ಮತಗಳಿಂದ ಶಾಸಕನಾಗಿ ನನ್ನ ಜವಾಬ್ದಾರಿ ಹೆಚ್ಚಿದ್ದು, ಅಭಿವೃದ್ಧಿ ಮೂಲಕ ಕೆಲಸ ಮಾಡುತ್ತೇನೆ ಎಂದು ಹೇಳಿದರು.ಗ್ರಾಮದ ಮುಖಂಡ ಚಂದ್ರಪ್ಪ ರಂಗನಾಥ್ ಮಾತನಾಡಿ, ಆನಂದ್ ಅವರು ಹಿಂದೆ ಶಾಸಕರಾಗಿದ್ದ ಕೆ.ಎಂ. ಕೃಷ್ಣಮೂರ್ತಿ ಅವರ ಹಾದಿಯಲ್ಲಿ ಸಾಗುತ್ತಿದ್ದಾರೆ ಎಂದು ಹೇಳಿ, ಕ್ಷೇತ್ರದ ಜನರು ಶಾಸಕರಾದ ಅನಂದ್ ಅವರನ್ನು ಜಾತ್ಯಾತೀತವಾಗಿ ಬೆಂಬಲಿಸುವ ಮೂಲಕ ಇನ್ನು ಹೆಚ್ಚಿನ ಅವಕಾಶಗಳ ನೀಡಿ, ರಾಜಕಾರಣದಲ್ಲಿ ಬೆಳೆಸಿ ಎಂದು ತಾಲೂಕಿನ ಜನತೆಯ ಪರವಾಗಿ ಹಾರೈಸಿದರು.ಇದೇ ಸಂದರ್ಭದಲ್ಲಿ ಉಡುಗೆರೆ ಗ್ರಾ.ಪಂ. ಸದಸ್ಯರಾದ ಸರೋಜಮ್ಮ, ವೆಂಕಟೇಶ್ ಮೂರ್ತಿ, ಅನ್ನಪೂರ್ಣ, ರಂಗನಾಥ್, ಶೇಖರಪ್ಪ, ಗೌರಮ್ಮ ಹಾಗು ಗ್ರಾಮಸ್ಥರು ಹಾಜರಿದ್ದರು.ಬಸವಣ್ಣನವರು ಪ್ರಜಾಪ್ರಭುತ್ವದ ಹರಿಕಾರರಾಗಿದ್ದು, ಅವರ ಬಗ್ಗೆ ಕೇವಲವಾಗಿ ಮಾತನಾಡಿದ ಬಸವರಾಜ್ ಯತ್ನಾಳ್ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಶಾಸಕ ಕೆ.ಎಸ್. ಆನಂದ್ ಆಗ್ರಹಿಸಿದರು. ಈ ಬಗ್ಗೆ ತಾವು ಬೆಳಗಾವಿ ಅಧಿವೇಶನದ ಸದನದಲ್ಲೂ ಯತ್ನಾಳ್ ಅವರ ಕ್ಷಮೆಗೆ ಒತ್ತಾಯಿಸಿದ್ದೇನೆ. ಬಸವ ತತ್ವಗಳು ಆರ್ ಎಸ್ ಎಸ್ ನ ಸೊತ್ತಲ್ಲ. ಮೂಲ ಬಿಜೆಪಿವಾದಿಗಳಾದ ಬಸವರಾಜ್ ಯತ್ನಾಳರು ಅಪಮಾನಕರವಾಗಿ ಮಾತನಾಡಿದ್ದಾರೆ. ಬಸವಣ್ಣ, ಕನಕದಾಸರಂತಹ ಸಂತರು ನಾಡಿನ ಸಮಾನತೆಗಾಗಿ ದುಡಿದವರು. ಅವರನ್ನು ಕುರಿತು ಮಾತನಾಡುವ ಕಿಡಿಗೇಡಿಗಳಿಗೆ ಆಯಾ ಸಮಾಜಗಳು ಬುದ್ಧಿ ಕಲಿಸಬೇಕು. ಅದರಲ್ಲೂ ಬಸವರಾಜ ಯತ್ನಾಳ್ ಅವರಿಗೆ ರಾಜ್ಯದ ಜನತೆ ಬುದ್ಧಿ ಕಲಿಸಬೇಕು ಎಂದು ಹೇಳಿದರು.