ಪೊನ್ನಾಡ್ ಫಾರ್ಮರ್ ಪ್ರೊಡ್ಯೂಸರ್ ಕಂಪನಿಗೆ ರಾಷ್ಟ್ರೀಯ ಪ್ರಶಸ್ತಿಯ ಗರಿ

| Published : Dec 16 2024, 12:47 AM IST

ಸಾರಾಂಶ

ನಾಲ್ಕು ಮಾದರಿಯ ಪ್ರಶಸ್ತಿಗಳಲ್ಲಿ ಖರೀದಿ ಮತ್ತು ಮಾರಾಟ ವ್ಯವಹಾರದ ಯಶಸ್ಸಿಗಾಗಿ ಸಂಸ್ಥೆಗೆ ಪ್ರಶಸ್ತಿ ಲಭಿಸಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ನಾಪೋಕ್ಲುವಿನ ಪೊನ್ನಾಡ್ ಫಾರ್ಮರ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್ ಗೆ ಪ್ರತಿಷ್ಠಿತ ಸಿಐಐ - ಎಫ್‌ಪಿಒ ಎಕ್ಸಲೆನ್ಸ್ ರಾಷ್ಟ್ರೀಯ ಪ್ರಶಸ್ತಿ ಲಭಿಸಿದ್ದು, ಇದು ಕೊಡಗು ಜಿಲ್ಲೆಗೆ ಹೆಮ್ಮೆಯ ವಿಚಾರವೆಂದು ಸಂಸ್ಥೆಯ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಹರ್ಷ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಶಸ್ತಿಗಾಗಿ ಅರ್ಹತೆ ಪಡೆದ ದೇಶದ 144 ಉತ್ತಮ ರೈತ ಉತ್ಪಾದಕ ಕಂಪನಿಗಳಲ್ಲಿ ಈಶಾ ಫೌಂಡೇಶನ್ ನ 25 ಎಫ್‌ಪಿಒಗಳಲ್ಲಿ ಒಂದಾದ ಪೊನ್ನಾಡ್ ಫಾರ್ಮರ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್ ಪ್ರತಿಷ್ಠಿತ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ನಾಲ್ಕು ಮಾದರಿಯ ಪ್ರಶಸ್ತಿಗಳಲ್ಲಿ ಖರೀದಿ ಮತ್ತು ಮಾರಾಟ ವ್ಯವಹಾರದ ಯಶಸ್ಸಿಗಾಗಿ ನಮ್ಮ ಸಂಸ್ಥೆಗೆ ಪ್ರಶಸ್ತಿ ಲಭಿಸಿದೆ ಎಂದರು.

ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ಸಿಐಐ - ಎಫ್‌ಪಿಒ ಶೃಂಗಸಭೆಯಲ್ಲಿ ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಮಿನಾಜ್ ಆಲಂ ಅವರಿಂದ ನಾನು, ಈಶಾ ಔಟ್ರೇಚ್‌ನ ಮಾ.ಚಂದ್ರಹಾಸ ಹಾಗೂ ಪೊನ್ನಾಡ್ ಎಫ್‌ಪಿಒದ ಮಹಿಳಾ ನಿರ್ದೇಶಕಿ ರತ್ನಾ ಚರ್ಮಣ್ಣ ಈ ಪ್ರಶಸ್ತಿಯನ್ನು ಸ್ವೀಕರಿಸಿರುವುದಾಗಿ ಹೇಳಿದರು.

ಪೊನ್ನಾಡ್ ಎಫ್‌ಪಿಸಿಎಲ್ ತನ್ನ 3ನೇ ಹಂತದ ಸದಸ್ಯ ನೋಂದಾವಣಿ ಆರಂಭಿಸಿದೆ. ನಾಪೋಕ್ಲು ಹೋಬಳಿಯಲ್ಲಿ ಹೊಸ ಸದಸ್ಯರನ್ನು ಇದಕ್ಕೆ ಆಹ್ವಾನ ಮಾಡುತ್ತಾ, ಸಮಿತಿಯು ಅನುಮೋದಿಸಿದ ನಂತರ ಸದಸ್ಯತ್ವವನ್ನು ದೃಢೀಕರಿಸಲಾಗುತ್ತದೆ. 3ನೇ ಹಂತದಲ್ಲಿ 750 ರೈತ ಸದಸ್ಯರನ್ನು ಹೊಂದುವ ಗುರಿಯನ್ನು ಸಂಸ್ಥೆ ಹೊಂದಿದೆ. ಸದಸ್ಯತ್ವವನ್ನು ಪಡೆಯಲು ಕೊನೆಯ ದಿನಾಂಕ 2024 ಡಿ.31 ಆಗಿದೆ ಎಂದು ಮನು ಮುತ್ತಪ್ಪ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ನಿರ್ದೇಶಕರಾದ ಕುಲ್ಲೇಟಿರ ಅಜಿತ್ ನಾಣಯ್ಯ, ಕೋಡಿರ ಪ್ರಸನ್ನ, ಕಾಟುಮಣಿಯಂಡ ಉಮೇಶ್ ಹಾಗೂ ಪವಿತ್ರ ಉಪಸ್ಥಿತರಿದ್ದರು.