ಸಾರಾಂಶ
ಸ್ಪರ್ಧಾತ್ಮಕ ಜಗತ್ತಿನಲ್ಲಿ ಸವಾಲುಗಳು ಅಪರಿಮಿತವಾಗಿದ್ದು ಮಕ್ಕಳ ಮೇಲೆ ಒತ್ತಡ ಗಣನೀಯವಾಗಿದೆ. ಆ ಭಾರವನ್ನು ತಗ್ಗಿಸುವ ಹೊಣೆ, ಎಲ್ಲರದ್ದಾಗಿದೆ. ಅಂಕಗಳೇ ಮಕ್ಕಳ ಪ್ರತಿಭೆಯ ಅಳತೆಗೋಲಲ್ಲ. ಅಂಕಗಳ ಹೊರತಾಗಿಯೂ, ಬದುಕಿನಲ್ಲಿ ವಿಶೇಷವಾದದ್ದನ್ನು ಸಾಧಿಸಿದ, ಅನೇಕರು ನಮ್ಮ ಸಮಾಜವನ್ನು ಬೆಳಗಿದ್ದಾರೆ.
ಧಾರವಾಡ:
ಶಾಲೆ, ಕಾಲೇಜುಗಳಲ್ಲಿ ಆಪ್ತ ಸಮಾಲೋಚನೆ ಕೇಂದ್ರ ಆರಂಭಿಸುವ ಅಗತ್ಯವಿದೆ ಎಂದು ಖ್ಯಾತ ಮನೋವೈದ ಡಾ. ಆನಂದ ಪಾಂಡುರಂಗಿ ಹೇಳಿದರು.ಆಕಾಶವಾಣಿ ಕೇಂದ್ರದ 75 ವರ್ಷಗಳ ಸುವರ್ಣ ಸಂಭ್ರಮದ ಹಿನ್ನೆಲೆ ಆಯೋಜಿಸಿದ್ದ ಮಕ್ಕಳಲ್ಲಿರಬಹುದಾದ ಅವ್ಯಕ್ತ ಕಲಿಕಾ ನ್ಯೂನತೆಗಳ ಬಗ್ಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ಪರ್ಧಾತ್ಮಕ ಜಗತ್ತಿನಲ್ಲಿ ಸವಾಲುಗಳು ಅಪರಿಮಿತ. ಮಕ್ಕಳ ಮೇಲೆ ಒತ್ತಡ ಗಣನೀಯವಾಗಿದೆ. ಆ ಭಾರವನ್ನು ತಗ್ಗಿಸುವ ಹೊಣೆ, ಎಲ್ಲರದ್ದಾಗಿದೆ. ಅಂಕಗಳೇ ಮಕ್ಕಳ ಪ್ರತಿಭೆಯ ಅಳತೆಗೋಲಲ್ಲ. ಅಂಕಗಳ ಹೊರತಾಗಿಯೂ, ಬದುಕಿನಲ್ಲಿ ವಿಶೇಷವಾದದ್ದನ್ನು ಸಾಧಿಸಿದ, ಅನೇಕರು ನಮ್ಮ ಸಮಾಜವನ್ನು ಬೆಳಗಿದ್ದಾರೆ ಎಂದರು.ಸಾರ್ಥಕ ಬದುಕಿನತ್ತ ಲಕ್ಷ್ಯ ವಹಿಸುವುದು, ಮಕ್ಕಳನ್ನು ಸಮಾಜದ ಸಂಪತ್ತಾಗಿಸಲು, ಅವರ ಬದುಕನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯಲು ಪಾಲಕರು ಮಹತ್ವದ ಹೊಣೆ ನಿಭಾಯಿಸಬೇಕು ಎಂದು ಹೇಳಿದರು.
ಕೇಂದ್ರದ ನಿರ್ದೇಶಕ ಶರಣಬಸವ ಚೋಳಿನ, ಹಗರಬೊಮ್ಮನಹಳ್ಳಿಯ ಸುಬೋಧ ಕಲಿಕಾ ಕೇಂದ್ರದ ಸಹಭಾಗಿತ್ವದಲ್ಲಿ ಮೂಡಿ ಬರುತ್ತಿರುವ ಸುಬೋಧ ಸಮಾಲೋಚನೆ ಕಾರ್ಯಕ್ರಮ ಅಂಗವಾಗಿ ಈ ಕಾರ್ಯಕ್ರಮ ನಡೆಯುತ್ತಿದೆ. 113 ಕಂತುಗಳಲ್ಲಿ ಪ್ರಸಾರವಾಗಿದ್ದು, ಮಕ್ಕಳು, ಪಾಲಕರು, ಶಿಕ್ಷಕರ ಸೌಹಾರ್ದ ಸಂಬಂಧದ ಜತೆಗೆ, ಸಾಮಾಜಿಕ ಅರಿವು ಮೂಡಿಸುವಲ್ಲಿ ಯಶಸ್ವಿಯಾಗಿದೆ ಎಂದರು.ಸುಬೋಧ ಕಲಿಕಾ ಕೇಂದ್ರದ ಡಾ. ಗುರುರಾಜ ಪಾಟೀಲ ಅವರನ್ನು ಗೌರವಿಸಲಾಯಿತು. ನಿಲಯದ ಮುಖ್ಯಸ್ಥ ಕೆ. ಅರುಣ ಪ್ರಭಾಕರ್, ನಿಕಟಪೂರ್ವ ನಿಲಯ ನಿರ್ದೇಶಕ ಬಸು ಬೇವಿನಗಿಡದ, ಆನಂದ ಪಾಟೀಲ್ ಇದ್ದರು.
ಬಸನಗೌಡ ಧರ್ಮಗೌಡರ, ಹುನಗುಂದದ ಸಂಗಪ್ಪ ಕೆಲೂರ, ವೀರನಾರಾಯಣ ಕುಲಕರ್ಣಿ, ಜ್ಯೋತಿರ್ಲಿಂಗ ಚಂದ್ರಾಮ ಹೊನ್ನಕಟ್ಟಿ ಅನಿಸಿಕೆ ಹಂಚಿಕೊಂಡರು. ಕೆ. ಶಿವರಾಜ್ ಸ್ವಾಗತಿಸಿದರು, ಸದಾಶಿವ ಐಹೊಳೆ ಪ್ರಾರ್ಥಿಸಿದರು. ಸುರೇಖಾ ಸುರೇಶ ನಿರೂಪಿಸಿದರು. ಲೆಕ್ಕಾಧಿಕಾರಿ ಸುಭಾಸಿನಿ ಹಿರೇಮಠ ವಂದಿಸಿದರು.