ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ : ಆರ್. ವಿ. ದೇಶಪಾಂಡೆ

| Published : Dec 16 2024, 12:47 AM IST / Updated: Dec 16 2024, 12:29 PM IST

ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ : ಆರ್. ವಿ. ದೇಶಪಾಂಡೆ
Share this Article
  • FB
  • TW
  • Linkdin
  • Email

ಸಾರಾಂಶ

ಮುರುಡೇಶ್ವರ ಕಡಲತೀರಕ್ಕೆ ನಿರ್ಬಂಧ ಹೇರಿದ್ದು ಸರಿಯಲ್ಲ. ಕಡಲ ತೀರದಲ್ಲಿ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು.

ಶಿರಸಿ: ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ. ಡಿ.ಕೆ. ಶಿವಕುಮಾರ ಸಿಎಂ ಸ್ಥಾನ ಕೇಳುವುದರಲ್ಲಿ ತಪ್ಪಿಲ್ಲ. ಮುಂದೆ ಅವರಿಗೂ ಅವಕಾಶಗಳಿವೆ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ತಿಳಿಸಿದರು.ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿರೋಧ ಪಕ್ಷದವರಿಗೆ ಚರ್ಚೆ ಮಾಡಲು ವಿಷಯವಿಲ್ಲ. ಹೀಗಾಗಿ ವಿಧಾನಸಭೆ ಅಧಿವೇಶನ ನಡೆಯುವಾಗ ಸಭಾತ್ಯಾಗ ಮಾಡುತ್ತಿದ್ದಾರೆ. ಪ್ರಸ್ತುತ ಕಾಂಗ್ರೆಸ್ ಸರ್ಕಾರ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ಮಾಡಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಅಪವಾದ ಮಾಡುವಂತಹ ಯಾವುದೇ ಅವಕಾಶ ಮಾಡಿಕೊಟ್ಟಿಲ್ಲ ಎಂದರು.

ಮುರುಡೇಶ್ವರ ಕಡಲತೀರಕ್ಕೆ ನಿರ್ಬಂಧ ಹೇರಿದ್ದು ಸರಿಯಲ್ಲ. ಕಡಲ ತೀರದಲ್ಲಿ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ಕರಾವಳಿ ತೀರಗಳಿಗೆ ಜನರು ಬರುತ್ತಾರೆ. ಪ್ರವಾಸೋದ್ಯಮಕ್ಕೆ ಕೊಡುಗೆ ನೀಡುತ್ತಿದ್ದಾರೆ. ಯಾವ ಆಕರ್ಷಣೆಗೆ ಪ್ರವಾಸಿಗರು ಬರುತ್ತಾರೆ, ಅಂತಹ ಚಟುವಟಿಕೆಯೇ ಸ್ಥಗಿತವಾದರೆ ಹೇಗೆ? ಇದರಿಂದ ಪ್ರವಾಸಿಗರನ್ನೇ ನಂಬಿರುವ ಅಂಗಡಿಕಾರರು, ಉದ್ಯೋಗಿಗಳು ನಿರುದ್ಯೋಗಿ ಆಗುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ತಕ್ಷಣ ಕ್ರಮ ವಹಿಸಬೇಕು ಎಂದರು. ಸುದ್ದಿಗೋಷ್ಠಿಯಲ್ಲಿ ಪಕ್ಷದ ಪದಾಧಿಕಾರಿಗಳಾದ ಜಿ.ಟಿ. ಹೆಗಡೆ, ಅಬ್ಬಾಸ್ ತೋನ್ಸೆ, ನಾಗರಾಜ ನಾರ್ವೇಕರ್, ರಾಮು ನಾಯ್ಕ ಮತ್ತಿತರರು ಇದ್ದರು.

ಕುಣಬಿ, ದನಗರ, ಹಾಲಕ್ಕಿ ಸಮುದಾಯ ಎಸ್ಟಿಗೆ ಸೇರ್ಪಡೆಯಾಗಲಿ

ಹಳಿಯಾಳ: ಸಂಸತ್‌ ಅಧಿವೇಶನದಲ್ಲಿ ದನಗರ ಗೌಳಿ, ಹಾಲಕ್ಕಿ ಮತ್ತು ಕುಣಬಿ ಸಮುದಾಯದವರನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡುವ ಕುರಿತು ಪ್ರಶ್ನೆಯೊಂದಕ್ಕೆ ಡಿ. 21ರಂದು ಕೇಂದ್ರ ಬುಡಕಟ್ಟು ಮಂತ್ರಾಲಯದ ಸಚಿವರು ಕೇಂದ್ರದ ನಿಲುವನ್ನು ಪ್ರಕಟಿಸಲಿದ್ದಾರೆ. ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಲಿ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಆಗ್ರಹಿಸಿದ್ದಾರೆ.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕುಣಬಿ, ಹಾಲಕ್ಕಿ ಮತ್ತು ದನಗರ ಗೌಳಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಸಾಕಷ್ಟು ಪ್ರಯತ್ನ ಮಾಡಲಾಗಿದೆ. ಕುಣುಬಿ ಸಮಾಜದ ನಿಯೋಗವನ್ನು ದೆಹಲಿಗೆ ಕರೆದುಕೊಂಡು ಹೋಗಿ ಅವರ ಸಮಸ್ಯೆಗಳನ್ನು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿದ್ದೆ ಎಂದರು. ಈ ಮೂರು ಸಮಾಜಗಳು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ತೀರಾ ಹಿಂದುಳಿದಿದ್ದು, ಇವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಮೂಲಕ ಕೇಂದ್ರ ಸರ್ಕಾರ ಅವರನ್ನು ಮುಖ್ಯವಾಹಿನಿಯಲ್ಲಿ ತರಬೇಕೆಂದರು.ಕಾಂಗ್ರೆಸ್ ಮುಖಂಡ ಅಜರ್ ಬಸರಿಕಟ್ಟಿ, ರವಿ ತೋರಣಗಟ್ಟಿ, ಅನಿಲ ಚವ್ಹಾಣ, ಸತ್ಯಜಿತ ಗಿರಿ, ಶಂಕರ ಬೆಳಗಾಂವಕರ ಇದ್ದರು.