ಬನಹಟ್ಟಿಯಲ್ಲಿ ಸಿಡಿಮದ್ದಿನ ತ್ಯಾಜ್ಯದ ಗುಡ್ಡೆ ನಿರ್ಮಾಣ

| Published : Sep 18 2025, 01:12 AM IST

ಬನಹಟ್ಟಿಯಲ್ಲಿ ಸಿಡಿಮದ್ದಿನ ತ್ಯಾಜ್ಯದ ಗುಡ್ಡೆ ನಿರ್ಮಾಣ
Share this Article
  • FB
  • TW
  • Linkdin
  • Email

ಸಾರಾಂಶ

ಬನಹಟ್ಟಿ ಶ್ರೀಕಾಡಸಿದ್ಧೇಶ್ವರ ಜಾತ್ರೆಯ ನಿಮಿತ್ತ ಮಂಗಳವಾರ ಮಧ್ಯಾಹ್ನ ೩ ಗಂಟೆಯಿಂದ ರಾತ್ರಿ ೧೨ರವರೆಗೂ ಸಾವಿರಾರು ಭಕ್ತರು ಒಂದು ಕೋಟಿಗೂ ಅಧಿಕ ವೆಚ್ಚದ ಮದ್ದು ಸುಟ್ಟು ಸಂಭ್ರಮಿಸಿದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಬನಹಟ್ಟಿ ಶ್ರೀಕಾಡಸಿದ್ಧೇಶ್ವರ ಜಾತ್ರೆಯ ನಿಮಿತ್ತ ಮಂಗಳವಾರ ಮಧ್ಯಾಹ್ನ ೩ ಗಂಟೆಯಿಂದ ರಾತ್ರಿ ೧೨ರವರೆಗೂ ಸಾವಿರಾರು ಭಕ್ತರು ಒಂದು ಕೋಟಿಗೂ ಅಧಿಕ ವೆಚ್ಚದ ಮದ್ದು ಸುಟ್ಟು ಸಂಭ್ರಮಿಸಿದರು. ಇದು ಶತಮಾನಗಳಿಂದ ನಡೆದು ಬಂದ ವಾಡಿಕೆ. ಆದರೆ ಇದರಿಂದ ಉಂಟಾಗುವ ಶಬ್ಧ ಹಾಗೂ ವಾಯು ಮಾಲಿನ್ಯದಿಂದ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ಪರಿಸರ ಸ್ನೇಹಿ ಜಾತ್ರೆ ಆಚರಣೆ ಒಳ್ಳೆಯದು ಎಂಬುದು ಪ್ರಜ್ಞಾವಂತರ ಅಭಿಪ್ರಾಯ.ದೇವಾಲಯ ಆವರಣ ಹಾಗೂ ಮಂಗಳವಾರ ಪೇಟೆಯ ವೃತ್ತದಿಂದ ಗಾಂಧಿವೃತ್ತ, ವೀರಭದ್ರೇಶ್ವರ ಲೇನ್‌ದವರೆಗೆ ವಾಸಿಸುವ ಅನೇಕ ಕುಟುಂಬಗಳು ಪಟಾಕಿಯ ಶಬ್ಧ ಹಾಗೂ ಹೊಗೆಯಿಂದ ಬೇಸತ್ತು ಮನೆಯ ಬಾಗಿಲು ಹಾಕಿಕೊಳ್ಳುತ್ತಾರೆ. ಹೊರಗಡೆ ನಡೆಯುವ ಜಾತ್ರೆಯ ಸಂಭ್ರಮ ಇವರ ಪಾಲಿಗೆ ಬರೀ ಹೊಗೆಯೇ. ಅದರಲ್ಲೂ ಶ್ವಾಸ ಸಂಬಂಧಿ ಕಾಯಿಲೆ ಇರುವವರಿಗೆ ಎರಡು ದಿನ ಕಳೆಯುವುದು ದೊಡ್ಡ ಸವಾಲಾಗಿದೆ. ಅನೇಕ ಅಧಿಕಾರಿಗಳು ಪಟಾಕಿ ಸುಡುವುದನ್ನು ನಿಲ್ಲಸಲು ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ಆದರೆ ಭಕ್ತರು ತಮ್ಮ ಇಷ್ಟಾರ್ಥಕ್ಕಾಗಿ ಪಟಾಕಿ ಸಿಡಿಸುವುದು ವಾಡಿಕೆಯಾಗಿದೆ. ಧಾರ್ಮಿಕತೆಗೆ ಧಕ್ಕೆ ಬಾರದಿರಲಿ ಎಂಬ ಸದುದ್ದೇಶದಿಂದ ಕೆಲವು ಅಧಿಕಾರಿಗಳು ಮೌನರಾಗಿದ್ದಾರೆಂದು ಹೇಳಲಾಗುತ್ತಿದೆ.

ಪಟಾಕಿ ಸುಡುವ ಸಂದರ್ಭದಲ್ಲಿ ಅನೇಕರಿಗೆ ಗಾಯಗಳಾಗುತ್ತಿವೆ. ಕೆಲವೊಂದು ಅಂಗಡಿಗಳಿಗೆ ಬೆಂಕಿ ಕೂಡ ಹತ್ತಿದ ಘಟನೆಗಳು ಜರುಗಿವೆ. ಆದರೆ ಜಾತ್ರಾ ಕಮೀಟಿಯವರು, ಪೊಲೀಸರು, ಅಗ್ನಿಶಾಮಕ ದಳದವರು ಪೂರ್ವ ಸಿದ್ಧತೆ ಮಾಡಿಕೊಂಡು ಹಾನಿಯಾಗದಂತೆ ಎಚ್ಚರಿಕೆ ವಹಿಸುತ್ತಾರೆ.

೩ ಟ್ರ್ಯಾಕ್ಟರ್‌ ತ್ಯಾಜ್ಯ: ನರಸಭೆ ಆರೋಗ್ಯ ನಿರೀಕ್ಷಕಿ ಶೋಭಾ ಹೊಸಮನಿ ಅವರು ಸಿಬ್ಬಂದಿಯೊಂದಿಗೆ, ರಸ್ತೆ ತುಂಬೆಲ್ಲ ಹರಡಿದ್ದ ಪಟಾಕಿಗಳ ಕಾಗದದ ಚೂರುಗಳು ಸ್ವಚ್ಛತೆಗೊಳಿಸಿ ಟ್ರ್ಯಾಕ್ಟರ್‌ಗಳಲ್ಲಿ ಮೂಲಕ ಸಾಗಿಸಿದರು.